ಕಾರಟಗಿ: ಪಟ್ಟಣದ ವಾರದ ಸಂತೆ ಮೈದಾನದ ಆವರಣದಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಇದೆ. ನಿರ್ವಹಣೆ ಕೊರತೆಯಿಂದ ಮಾರಾಟಗಾರರು, ಸಾರ್ವಜನಿಕರು ಅನಿಶ್ಚಿತತೆಯಲ್ಲಿ ಮಾರಾಟ, ಖರೀದಿ ಪ್ರಕ್ರಿಯೆಗಳನ್ನು ಪೂರೈಸಿಕೊಳ್ಳಬೇಕಿದೆ.
ಗ್ರಾಮೀಣ ಸಂತೆ ಮೈದಾನದಿಂದ ಸ್ಥಳೀಯಾಡಳಿತಕ್ಕೆ ವಾರ್ಷಿಕ ಲಕ್ಷಾಂತರ ಆದಾಯವಿದೆಯಾದರೂ, ಅಗತ್ಯ ಸೌಕರ್ಯಗಳು ಮರೀಚಿಕೆಯಾಗಿವೆ. ತಾಲ್ಲೂಕು ಸೇರಿದಂತೆ ಪಕ್ಕದ ತಾಲ್ಲೂಕುಗಳಿಂದ ತರಕಾರಿ, ಸೊಪ್ಪು, ತಿನಿಸು ಸಹಿತ ವಿವಿಧ ಬಗೆಯ ನೂರಾರು ವ್ಯಾಪಾರಿಗಳು ಪ್ರತಿ ವಾರ ಬರುತ್ತಾರೆ.
ಸಂತೆಯಲ್ಲಿ ಕಡಿಮೆ ದರದಲ್ಲಿ ಎಲ್ಲವೂ ದೊರೆಯುತ್ತವೆ ಎಂಬ ಲೆಕ್ಕಾಚಾರದೊಂದಿಗೆ ಸಾವಿರಾರು ನಾಗರಿಕರು, ಮಹಿಳೆಯರು ಸಂತೆಗೆ ಬರುತ್ತಾರೆ. ಬಂದ ಗ್ರಾಹಕರಿಗಾಗಲಿ, ವ್ಯಾಪಾರಿಗಳಿಗಾಗಲಿ ನೀಡಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಸ್ಥಳೀಯಾಡಳಿತ ವಿಫಲವಾಗಿದೆ. ಮೈದಾನದ ಹೊರಗಿನ ರಸ್ತೆಯಲ್ಲಿ ಎರ್ರಾಬಿರ್ರಿಯಾಗಿ ನಿಲ್ಲುವ ವಾಹನಗಳು, ತಳ್ಳುವ ಬಂಡಿ ಸಹಿತ ಇತರ ವ್ಯಾಪಾರಿಗಳು, ರಸ್ತೆ ವ್ಯಾಪಾರದಿಂದ ಸಂಚಾರಕ್ಕಾಗುವ ತೊಂದರೆಯ ಪರಿಹಾರಕ್ಕೆ ನಿರ್ವಹಣೆಯ ಹೊಣೆ ಹೊತ್ತ ಪುರಸಭೆ ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸುತ್ತಾರೆ.
ಈ ಕುರಿತು ಮುಖ್ಯಾಧಿಕಾರಿ ಸುರೇಶ ಪ್ರತಿಕ್ರಿಯಿಸಿ, ‘ಸಂತೆ ಮೈದಾನದಲ್ಲಿ ಗುಂಡು, ತುಂಡು ಪಾರ್ಟಿ ಮಾಡುವವರ ವಿರುದ್ಧ, ರಸ್ತೆಯಲ್ಲಿ ವ್ಯಾಪಾರ ಮಾಡುವವರ ವಿರುದ್ಧ ಹಾಗೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ. ಇದೆಲ್ಲ ಪೊಲೀಸ್ ಇಲಾಖೆಯ ಕೆಲಸ, ನಮ್ಮದಲ್ಲ. ಎಲ್ಲ ಸೌಕರ್ಯ ಒದಗಿಸಲು ನಮ್ಮಲ್ಲಿಯದು ಹೈಟೆಕ್ ಸಂತೆ ಮಾರ್ಕೆಟ್ಟಾ? ಇದ್ದ ವ್ಯವಸ್ಥೆಯಲ್ಲಿ ಎಲ್ಲವನ್ನೂ ಮಾಡಿದ್ದೇವೆ. ಅಗತ್ಯ ಸೌಲಭ್ಯಗಳೆಲ್ಲವೂ ಇವೆ’ ಎಂದು ಸಮರ್ಥಿಸಿಕೊಂಡರು.
ವ್ಯಾಪಾರಿಗಳಿಗೆ ವ್ಯಾಪಾರಕ್ಕೆಂದು ಕಟ್ಟೆಗಳಿವೆಯಾದರೂ ಸಾಮಗ್ರಿಗಳನ್ನಿಡಲು ಸ್ಥಳ ಕಡಿಮೆಯಿದೆ. ಇರುವ ಕಪಾಟುಗಳ ಬಾಗಿಲು ಮುರಿದಿವೆ. ನಿರಂತರವಾಗಿ ನಡೆಯುವ ಗುಂಡು, ತುಂಡು ಪಾರ್ಟಿಯವರು ಬಾಟಲಿ, ಮದ್ಯದ ಪಾಕೀಟ್, ಉಳಿದ ಆಹಾರ ಎಸೆಯುವ ಸ್ಥಳಗಳಾಗಿ ಮಾರ್ಪಟ್ಟಿವೆ. ಕಟ್ಟೆಗಳ ಸಹವಾಸದಿಂದ ದೂರವಿರುವ ವ್ಯಾಪಾರಿಗಳು ಕೆಳಗಿನ ಜಾಗವನ್ನೇ ಆಶ್ರಯಿಸಿದ್ದಾರೆ. ವ್ಯಾಪಾರಿಗಳಿಗೆ ನೆರಳಿಲ್ಲ, ಮಳೆ ಬಂದರೆ ರಕ್ಷಣೆ ಇಲ್ಲ. ಸಂಜೆಯಾದರೆ ಸಮರ್ಪಕವಾದ ಬೆಳಕಿನ ವ್ಯವಸ್ಥೆ, ನೀರಿನ ವ್ಯವಸ್ಥೆ ಅಗತ್ಯಕ್ಕೆ ತಕ್ಕಷ್ಟು ಇಲ್ಲ. ವ್ಯಾಪಾರಿಗಳು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ತಾವೇ ಕೊಡೆಗಳ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಮಹಿಳೆಯರು ನೈಸರ್ಗಿಕ ಪ್ರಕ್ರಿಯೆ ಪೂರೈಸಿಕೊಳ್ಳಲು ಪರದಾಟ ನಡೆಸಬೇಕಿದೆ.
‘ವ್ಯಾಪಾರ ಮಾಡಲು ಏನು ಬೇಕೋ ಅದನ್ನೆಲ್ಲಾ ನಾವೇ ಮಾಡಿಕೊಳ್ಳಬೇಕಿದೆ. ವ್ಯಾಪಾರಕ್ಕೆ ಶೆಡ್, ನೆರಳಿಗೆ ಕೊಡೆ ನಾವೇ ತರುತ್ತೇವೆ. ಸಂತೆ ಹರಾಜು ಮಾಡಿಕೊಂಡವರಿಗೆ ನಿಗದಿಪಡಿಸಿದ ಶುಲ್ಕ ನೀಡಲೇಬೇಕಿದೆ. ಸೌಲಭ್ಯದ ಬಗ್ಗೆ ಪ್ರಶ್ನಿಸಿದರೆ ಯಾರೂ ಹೊಣೆ ಹೊರುವುದಿಲ್ಲ’ ಎಂದು ವ್ಯಾಪಾರಿ ಆನಂದ ಕೆ. ಅಸಹಾಯಕತೆ ವ್ಯಕ್ತಪಡಿಸಿದರು.
ಸಿಂಧನೂರಿನ ಸುಣ್ಣದ ವ್ಯಾಪಾರಿ ಸೈದಮ್ಮ ಪ್ರತಿಕ್ರಿಯಿಸಿ, ‘ಅನೇಕ ದಶಕಗಳಿಂದ ಸುಣ್ಣದ ವ್ಯಾಪಾರ ಮಾಡುತ್ತಿದ್ದೇನೆ. ನಮ್ಮದೇ ಆದ ಕಾಯಂ ಗ್ರಾಹಕರಿದ್ದಾರೆ. ಮುಂಗಡ ಬುಕ್ಕಿಂಗ್ ಮಾಡುತ್ತಿರುತ್ತಾರೆ. ಇದ್ದ ವ್ಯವಸ್ಥೆಯಲ್ಲೇ ವ್ಯಾಪಾರ ಮಾಡಿಕೊಂಡು ಹೋಗ್ತೀವಿ. ಕರ ವಸೂಲಿಗಾರರು ನನಗಂತೂ ಕಡ್ಡಾಯವಾಗಿ ಇಂತಿಷ್ಟೇ ಕೊಡಬೇಕೆಂದು ಕೇಳುವುದಿಲ್ಲ. ಮುನ್ಸಿಪಾಲ್ಟಿಯವರು ಸೌಕರ್ಯ ಕೊಡಬೇಕು’ ಎಂದರು.
‘ಬುಧವಾರ ವಾರದ ಸಂತೆ ನಡೆಯುತ್ತದೆ. ವ್ಯವಸ್ಥೆ ಇದ್ದರೆ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸ್ಥಳೀಯಾಡಳಿತ ಇನ್ನಷ್ಟು ಸೌಕರ್ಯ ನೀಡಲು ಮುಂದಾಗಬೇಕು’ ಎನ್ನುತ್ತಾರೆ ಸೋಮನಾಳ ವೆಂಕಟೇಶ.
ಮಾರ್ಕೆಟ್‌ನ ಆವರಣ ಗೋಡೆ ಗೇಟ್ ಅಳವಡಿಕೆ ಕಾರ್ಯ ಶೀಘ್ರದಲ್ಲೇ ನಡೆಯಲಿದೆ. ಬರುವ ದಿನಗಳಲ್ಲಿ ಎಲ್ಲಾ ಸರಿಹೋಗುವುದು. ಅಗತ್ಯವಾಗಿ ಬೇಕಾದ ವ್ಯವಸ್ಥೆ ಸೌಕರ್ಯ ಒದಗಿಸಲು ನಾವು ಸಿದ್ಧಸುರೇಶ ಮುಖ್ಯಾಧಿಕಾರಿ ಕಾರಟಗಿ ಪುರಸಭೆ
ವಾರಕ್ಕೊಂದು ದಿನ ಸಂತೆ ನಡೆಯುತ್ತದೆಯಾದರೂ ವಾರ ಪೂರ್ತಿ ನಿರ್ವಹಣೆ ಇಲ್ಲದೇ ಪಾರ್ಟಿ ಮಾಡುವವರಿಗೆ ಪ್ರಶಸ್ತ ಸ್ಥಳವಾಗಿದೆ. ನಿರ್ವಹಣೆ ಕೊರತೆ ಇದೆ. ವ್ಯಾಪಾರಿಗಳಿಗೆ ಅಗತ್ಯವಿರುವ ಸೌಕರ್ಯ ನೀಡಬೇಕಿದೆರಮೇಶ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.