ADVERTISEMENT

ವೇತನದ್ದೇ ಸಮಸ್ಯೆ: ಕಣ್ಣೀರಿಟ್ಟ ಕಾರ್ಮಿಕರು

ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರ ಮುಗಿಯದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:47 IST
Last Updated 8 ಡಿಸೆಂಬರ್ 2018, 15:47 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸಭೆಗೆ ಬಂದಿದ್ದ ಪೌರಕಾರ್ಮಿಕರ ವೇತನ ಸೇರಿದಂತೆ ಇತರ ಸಮಸ್ಯೆ ಪರಿಹರಿಸಬೇಕು ಎಂದು ಕಣ್ಣೀರಿಟ್ಟರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸಭೆಗೆ ಬಂದಿದ್ದ ಪೌರಕಾರ್ಮಿಕರ ವೇತನ ಸೇರಿದಂತೆ ಇತರ ಸಮಸ್ಯೆ ಪರಿಹರಿಸಬೇಕು ಎಂದು ಕಣ್ಣೀರಿಟ್ಟರು   

ಕೊಪ್ಪಳ: ಪ್ರತಿ ತಿಂಗಳು 10ರೊಳಗೆ ವೇತನ ಸಿಗಬೇಕು. ಆದರೆ, ಏಳು ತಿಂಗಳಿಂದ ವೇತನ ಸಿಗದೇ ಕಂಗಾಲಗಿದ್ದೇವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಸಾರ ನಿಭಾಯಿಸುವುದು ಹೇಗೆ?

- ಹೀಗೆ ಕಣ್ಣೀರಿಟ್ಟಿದ್ದು ಪೌರಕಾರ್ಮಿಕರು. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಎದುರು ತಮ್ಮ ದೈನಂದಿನ ಬದುಕಿನ ಅವಸ್ಥೆಯನ್ನು ತೆರೆದಿಟ್ಟರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರವೇಶಿಸಿದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು ತಮ್ಮ ಗೋಳು ತೋಡಿಕೊಂಡರು.

ADVERTISEMENT

ಸುಮಾರು ಏಳು ತಿಂಗಳಿಂದ ಸಂಬಳವಾಗಿಲ್ಲ. ಕೆಲವರಿಗೆ ಮೂರು ತಿಂಗಳಿಂದ ನೀಡಿಲ್ಲ. ನಾವು ಬದುಕುವುದು ಕಷ್ಟವಾಗುತ್ತಿದೆ. ನಮಗೆ ದಿನಸಿಯನ್ನು ಕಿರಾಣಿ ಅಂಗಡಿಯವರು ಉದ್ರಿ ನೀಡುವುದಿಲ್ಲ. ಹೀಗಾದರೆ ಮಕ್ಕಳು, ಮರಿ ಕಟ್ಟಿಕೊಂಡು ಹೇಗೆ ಬದುಕುಬೇಕು ಎಂದು ರೋಧಿಸಿದರು.

ಅವರ ಸಮಸ್ಯೆಗಳನ್ನು ಆಲಿಸಿದ ಹಿರೇಮನಿ, ತಕ್ಷಣ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಅದಕ್ಕೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಂದ ಸಭೆಗೆ ಮಾಹಿತಿ ಪಡೆದುಕೊಂಡು ಡಿಸೆಂಬರ್ ಅಂತ್ಯಕ್ಕೆ ವೇತನ ನೀಡಬೇಕು ಎಂದು ಸೂಚನೆ ನೀಡಿದರು.

ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ 510 ಜನರು ಕಾರ್ಯ ನಿರ್ವಹಿಸುತ್ತಿದ್ದು, 295 ಜನರಿಗೆ ನೇರ ಹಣ ಪಾವತಿ ಮಾಡಲಾಗುತ್ತಿದೆ. 207 ಜನರನ್ನು ಕಾಯಂ ಮಾಡಿಕೊಳ್ಳಲಾಗಿದೆ. ಸ್ಥಳೀಯವಾಗಿ ಬರಬೇಕಿರುವ ತೆರಿಗೆ ಹಣವನ್ನು ಆಡಳಿತಾಧಿಕಾರಿಗಳು ಕಟ್ಟುನಿಟ್ಟಾಗಿ ವಸೂಲು ಮಾಡಿ, ನಿಮ್ಮ ವೇತನ ಹೇಗೆ ಪಡೆದುಕೊಳ್ಳುತ್ತೀರೋ ಹಾಗೆ ಮುಂಬರುವ ದಿನಗಳಲ್ಲಿ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪರಿಸರ ಅಧಿಕಾರಿ ಮತ್ತು ಸಾನಿಟರಿ ಅಧಿಕಾರಿಗಳು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಂಡರೆ ಜವಾಬ್ದಾರಿ ಮುಗಿಯುದಿಲ್ಲ, ಸುರಕ್ಷೆ, ಆರೋಗ್ಯ, ಪುನರ್ವಸತಿಯತ್ತ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ಗಂಗಾವತಿ ನಗರಸಭೆ ಪೌರ ಕಾರ್ಮಿಕರಿಗೆ ವೇತನ ಸಮಸ್ಯೆ ಬಹಳವಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ವಾಹನದ ಚಾಲಕರನ್ನು ಕಾಯಂ ಮಾಡಿಕೊಳ್ಳಬೇಕು ಎಂದುಪೌರಕಾರ್ಮಿಕರುಮನವಿ ಮಾಡಿದರು.

ರಾಜ್ಯದಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಕಾರ್ಯದಲ್ಲಿ 70 ಜನ ಅಸುನೀಗಿದ್ದು, ಅವರೆಲ್ಲರೂ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ಅಲ್ಲ. ಸ್ವಚ್ಛತೆಯನ್ನೇ ವೃತ್ತಿ ಮಾಡಿಕೊಂಡ ಸಮುದಾಯದಿಂದ ಬಂದ ಅಂತಹ ಜನರಿಗೆ ಸೌಲಭ್ಯ ನೀಡಬೇಕು. ಕೇಂದ್ರ ಸರ್ಕಾರ ಈ ಆಯೋಗಕ್ಕೆ 125 ಯೋಜನೆಗಳನ್ನು ನೀಡಿ, ಗರಿಷ್ಠ 25 ಲಕ್ಷದವರೆಗೆ ಸಾಲ ನೀಡುವ ಸೌಲಭ್ಯವಿದೆ. ಇದು ಯಾವ ಅಧಿಕಾರಿಗಳಿಗೂ ಮಾಹಿತಿ ಇಲ್ಲ ಎಂದು ಹಿರೇಮನಿ ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಒಂದು ಕಾರ್ಯಾಗಾರ ಹಮ್ಮಿಕೊಂಡು ಎಲ್ಲ ಪಿಡಿಒಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ರವಿ ಬಿಸರಳ್ಳಿ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.