ADVERTISEMENT

ಕನಕಗಿರಿ: ತೋಟಗಾರಿಕೆ ಟೆಕ್ನಾಲಜಿ ಪಾರ್ಕ್‌ ಸ್ಥಾಪನೆ; ಶಾಸಕ ಧಡೇಸೂಗೂರು

ವಸತಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 13:20 IST
Last Updated 28 ಆಗಸ್ಟ್ 2020, 13:20 IST
ಕನಕಗಿರಿ ಸಮೀಪದ ಶಿರವಾರ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ಕಟ್ಟಡ ಕಾಮಗಾರಿಗೆ ಶಾಸಕ ಬಸವರಾಜ ದಢೇಸೂಗೂರು ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು
ಕನಕಗಿರಿ ಸಮೀಪದ ಶಿರವಾರ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ಕಟ್ಟಡ ಕಾಮಗಾರಿಗೆ ಶಾಸಕ ಬಸವರಾಜ ದಢೇಸೂಗೂರು ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು   

ಕನಕಗಿರಿ: ‘ಕ್ಷೇತ್ರ ವ್ಯಾಪ್ತಿಯ ಶಿರಿವಾರ ಗ್ರಾಮದಲ್ಲಿಯ 200 ಎಕರೆ ಸರ್ಕಾರಿ ಭೂಮಿಯಲ್ಲಿ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್‌ ಸ್ಥಾಪಿಸಲು ಯೋಜಿಸಲಾಗಿದೆ’ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.

ಸಮೀಪದ ಶಿರಿವಾರ ಗ್ರಾಮದ ಹೊರವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ₹23.50 ಕೋಟಿ ಅನುದಾನದಲ್ಲಿ ಪರಿಶಿಷ್ಟ ಪಂಗಡದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ಕಟ್ಟಡ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಾರ್ಕ್‌ ಸ್ಥಾಪನೆಗಾಗಿ ₹135 ಕೋಟಿ ಅನುದಾನ ಮೀಸಲಿಡಲಾಗಿದೆ. ವಿಸ್ತೃತ ಯೋಜನಾ ವರದಿ ತಯಾರಿ (ಡಿಪಿಆರ್‌) ಅಂತಿಮ ಹಂತದಲ್ಲಿದೆ. ಕೋವಿಡ್ ಕಾರಣಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲು ಆಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಗೆ ಒಪ್ಪಿಗೆ ಸೂಚಿಸಿ, ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ADVERTISEMENT

ಟೆಕ್ನಾಲಜಿ ಪಾರ್ಕ್‌ನಲ್ಲಿ ತೋಟಗಾರಿಕೆ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಶಿಥಿಲೀಕರಣ ಘಟಕ ಹಾಗೂ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.

ಈ ಭಾಗದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ನವಲಿ ಹತ್ತಿರ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಆದ್ಯತೆ ನೀಡಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜಲಾಶಯ ನಿರ್ಮಾಣದಿಂದ ಭೂಮಿ, ಮನೆ ಹಾಗೂ ನಿವೇಶನ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರು ಭೂಮಿ ಕಳೆದುಕೊಳ್ಳುವ ಜನರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಈ ಕುರಿತು ಜನರು ಸಹಕಾರ ನೀಡಬೇಕು ಎಂದು ಕೋರಿದರು.

ರಾಯಚೂರು ಕೃಷಿ ವಿ.ವಿ ಆಡಳಿತ ಮಂಡಳಿ ಸದಸ್ಯ ಶ್ರೀಧರ ಗದ್ದಡಕಿ, ಕೆಡಿಪಿ ಸದಸ್ಯ ಗುರುಮೂರ್ತಿಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಾಲೋಣಿ, ಮುಖಂಡರಾದ ಬಿಲ್ಗಾರ ನಾಗರಾಜ, ಸಿದ್ರಾಮಗೌಡ ಮಾತನಾಡಿ,‘ಶಿರಿವಾರದಲ್ಲಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಜಿ.ಪಂ ಸದಸ್ಯೆ ಶಾಂತಾ ರಮೇಶ ನಾಯಕ ಹಾಗೂ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ’ ಎಂದು ಟೀಕಿಸಿದರು.

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಲಕ್ಷ್ಮಣ ಬಬಲಿ, ತಾಲ್ಲೂಕು ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಹಾಗೂ ಬಿಜೆಪಿ ಮುಂದಾಳು ಅಶ್ವಿನಿ ದೇಸಾಯಿ ಮಾತನಾಡಿದರು.

ತಾ.ಪಂ ಸದಸ್ಯ ಕನಕಪ್ಪ ತಳವಾರ, ಎಪಿಎಂಸಿ ನಿರ್ದೇಶಕ ಶಿವಶಂಕ್ರಪ್ಪ, ದಿಶಾ ಸಮಿತಿ ಸದಸ್ಯ ಹನುಮೇಶ ಯಲಬುರ್ಗಿ ಹಾಗೂ ಪುರಸಭೆ ಸದಸ್ಯ ತಿಮ್ಮನಗೌಡ, ಬಿಜೆಪಿ ಮಂಡಲ ಅಧ್ಯಕ್ಷರಾದ ಮಹಾಂತೇಶ ಸಜ್ಜನ್, ಚಂದ್ರಶೇಖರ ಮುಸಾಲಿ, ಮಾಜಿ ಅಧ್ಯಕ್ಷ ಗುರುಸಿದ್ದಪ್ಪ ಯರಕಲ್, ಎಸ್ ಸಿ ಮೋರ್ಚಾ ಅಧ್ಯಕ್ಷ ಸಣ್ಣ ಕನಕಪ್ಪ, ಎಸ್ ಟಿ ಮೋರ್ಚಾ ಅಧ್ಯಕ್ಷ ವೀರಬಸನಗೌಡ, ವಿರೂಪಾಕ್ಷಪ್ಪ ಭತ್ತದ, ಗ್ಯಾನಪ್ಪ ಗಾಳದಾಳ, ನಾಗಪ್ಪ ಹುಗ್ಗಿ, ವಾಗೀಶ ಹಿರೇಮಠ, ಸಣ್ಣ ಸಿದ್ದೇಶ್ವರ, ಕನಕಪ್ಪ ಯಾದವ, ಹುಲಿಗೆಮ್ಮ ನಾಯಕ, ದೇವರಾಜ ಮಂಗಳೂರು, ಪ್ರಕಾಶ ಹಾದಿಮನಿ, ಶರತ ನಾಯಕ, ರಂಗಪ್ಪ ಕೊರಗಟಗಿ ಹಾಗೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.