
ಯಲಬುರ್ಗಾ: ತಾಲ್ಲೂಕಿನ ಬೋದೂರ ಗ್ರಾಮದ ಪ್ರಮುಖ ವಾರ್ಡಿನಲ್ಲಿ ದಿನಬಳಕೆ ನೀರು ಸರಿಯಾಗಿ ಹರಿದು ಹೋಗಲು ಸೂಕ್ತ ಚರಂಡಿ ಇಲ್ಲದೇ ಇರುವ ಕಾರಣ ರಸ್ತೆಯಲ್ಲಿಯೇ ನಿಂತು ದೊಡ್ಡ ಹೊಂಡಗಳಾಗಿ ನಿರ್ಮಾಣಗೊಂಡಿದ್ದು, ವಿಪರೀತ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿವೆ.
ಕೊಳಚೆಯಿಂದಾಗಿ ಸಾಂಕ್ರಾಮಿಕ ರೋಗ ಹರಿಡುವ ಬೀತಿಯನ್ನು ಅಲ್ಲಿಯ ನಿವಾಸಿಗರು ಎದುರಿಸುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹನಮಂತಪ್ಪ ಕುರ್ನಾಳ ಹಾಗೂ ಇತರರ ಮನೆಯ ಮುಂದೆ ಸಾಕಷ್ಟು ನೀರು ಸಂಗ್ರಹಗೊಂಡಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡೆತಡೆಯಾಗಿದೆ. ಈ ಕೊಳಚೆ ನೀರಿನಲ್ಲಿಯೇ ಮಕ್ಕಳು, ವಯೋವೃದ್ಧರು ಹಾಗೂ ಇತರರು ತಿರುಗಾಡುತ್ತಿದ್ದಾರೆ. ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯರಿತಿಕ್ತ ಪರಿಣಾಮ ಬೀರುತ್ತಿದ್ದು ಸಂಬಂಧಪಟ್ಟವರು ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ. ರಸ್ತೆಯ ಅಭಿವೃದ್ದಿಯಾಗಲಿ ಹಾಗೂ ರಸ್ತೆಯ ಪಕ್ಕದಲ್ಲಿ ಚರಂಡಿ ಇಲ್ಲದ ಕಾರಣ ದಿನಬಳಕೆ ನೀರು ಮುಂದಕ್ಕೆ ಹರಿದುಹೋಗಲು ಸಾಧ್ಯವಾಗದೇ ಇರುವಿದರಿಂದ ಈ ದುರವಸ್ಥೆಗೆ ಕಾರಣವಾಗಿದೆ. ಗ್ರಾಮ ಪಂಚಾಯಿತಿಯವರು ಪರಿಹಾರ ಕ್ರಮಕೈಗೊಳ್ಳಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮದ ಪ್ರಮುಖರಾದ ಸೋಮನಗೌಡ್ರ, ಮಲ್ಲಪ್ಪ ಕುರ್ನಾಳ, ಹನಮಂತಯ್ಯ ಶೆಟ್ಟರ, ಶರಣಮ್ಮ ಸಂಕನಾಳ, ಹನಮಂತ ಕಾಟಾಪೂರ, ಲಲಿತವ್ವ ಕಮ್ಮಾರ, ವಿಠೋಬಣ್ಣ ಶೆಟ್ಟರ ಸೇರಿ ಅನೇಕರು ಕೊಳಚೆ ನೀರನ್ನು ತೆರವುಗೊಳಿಸಿ ರಸ್ತೆಸುಧಾರಿಸಿ ಚರಂಡಿ ನಿರ್ಮಿಸಿಕೊಡಬೇಕು. ರೋಗ ಹರಡದಂತೆ ಸೊಳ್ಳೆ ನಿವಾರಕವನ್ನು ಸಿಂಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.