ಕೊಪ್ಪಳ: ‘ನಾವು ನಮ್ಮನ್ನು ದುರ್ಬಲರೆಂದು ಅಂದುಕೊಳ್ಳಬಾರದು. ಅಧ್ಯಯನದಲ್ಲಿ ದೃಢವಾದ ನಿಶ್ಚಯ ಹಾಗೂ ಸ್ಥಿರವಾದ ಅಭ್ಯಾಸಗಳನ್ನು ರೂಢಿಸಿಕೊಂಡರೆ ಯಶಸ್ಸು ಲಭಿಸುತ್ತದೆ’ ಎಂದು ಫಾದರ್ ಪ್ರಶಾಂತ್ ಹೇಳಿದರು.
ನಗರದ ಎಸ್‌ಎಫ್‌ಎಸ್ (ಐಸಿಎಸ್‌ಸಿ) ಶಾಲೆಯಲ್ಲಿ ಶನಿವಾರ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ‘ಓದುವ ಹಂತದಲ್ಲಿ ಬಾಹ್ಯ ಪ್ರೇರಣೆಗಳಿಗೆ ಒಳಗಾಗದೆ ನಿರಂತರತೆ, ಏಕಾಗ್ರತೆ, ಅಧ್ಯಯನದ ಪ್ರಬಲ ಇಚ್ಛಾಶಕ್ತಿಗಳನ್ನು ರೂಢಿಸಿಕೊಂಡರೆ ಹೆಚ್ಚಿನ ರೀತಿಯಲ್ಲಿ ಗುರಿ ತಲುಪುತ್ತೇವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಫಾದರ್ ಜಬಮಲೈ ಅವರು, ‘ಮಕ್ಕಳು ಮೊಬೈಲ್‌ನಿಂದ ದೂರವಿರಬೇಕು. ಮೊಬೈಲ್ ನಮ್ಮ ಓದಿನ ಹಸಿವು ಕಸಿದುಕೊಳ್ಳುತ್ತದೆ. ಭವಿಷ್ಯದಲ್ಲಿ ಮಹತ್ವಾಕಾಂಕ್ಷೆ ಹೊಂದಲು ಅಡ್ಡಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. ‘ಪಾಲಕರು ಮಕ್ಕಳಿಗೆ ಕೇಳಿದ್ದೆಲ್ಲನ್ನು ಕೊಡಿಸದೆ ಯಾವುದು ಅತ್ಯವಶ್ಯ ಎಂಬುದನ್ನು ಮಕ್ಕಳಿಗೆ ಮನಗಾಣಿಸಬೇಕು’ ಎಂದು ಸಲಹೆ ನೀಡಿದರು.
ಯು.ಕೆ.ಜಿ ಮಕ್ಕಳಿಗೆ 1ನೇ ತರಗತಿಗೆ ಪದೋನ್ನತಿ ಪ್ರಮಾಣಪತ್ರ ನೀಡಲಾಯಿತು. ಹತ್ತನೇ ತರಗತಿ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಸ್ಥೆಯ ವ್ಯವಸ್ಥಾಪಕ ಫಾದರ್ ಮ್ಯಾಥ್ಯೂ ಹಾಗೂ ಎಸ್.ಎಫ್.ಎಸ್. ಪ್ರೌಢಶಾಲೆಯ ಪ್ರಾಂಶುಪಾಲ ಫಾದರ್ ಜೋಜೊ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.