ADVERTISEMENT

ಎಸ್‌ಟಿ ಪ್ರಮಾಣಪತ್ರ ಅನ್ಯರ ಪಾಲು: ತಡೆಗೆ ಆಗ್ರಹ

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:55 IST
Last Updated 11 ಜನವರಿ 2025, 14:55 IST
ಕಾರಟಗಿಯ ವಾಲ್ಮೀಕಿ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ಹರಿಹರದ ರಾಜನಹಳ್ಳಿಯಲ್ಲಿ ಫೆ. 8, 9ರಂದು ಜರುಗುವ ವಾಲ್ಮೀಕಿ ಜಾತ್ರೆಯ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು
ಕಾರಟಗಿಯ ವಾಲ್ಮೀಕಿ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ಹರಿಹರದ ರಾಜನಹಳ್ಳಿಯಲ್ಲಿ ಫೆ. 8, 9ರಂದು ಜರುಗುವ ವಾಲ್ಮೀಕಿ ಜಾತ್ರೆಯ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು   

ಕಾರಟಗಿ: ‘ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಒದಗಿಸಲು ಕೋಲಿ, ಕಬ್ಬಲಿಗ, ತಳವಾರ ಸಮುದಾಯದವರನ್ನು ಸರ್ಕಾರ ಕೂಡಲೇ ಪ್ರವರ್ಗ 1ರಲ್ಲಿ ಮರುಸ್ಥಾಪಿಸಬೇಕು. ಪರಿಶಿಷ್ಟ ಪಂಗಡ(ಎಸ್‌ಟಿ) ಪ್ರಮಾಣ ಪತ್ರ ನಮ್ಮ ಸಮುದಾಯಕ್ಕೆ ಮಾತ್ರ ದೊರೆಯುವಂತೆ ಮಾಡಬೇಕು. ಈ ಬಗ್ಗೆ ನಡೆಯಲಿರುವ ಜಾತ್ರೆಯಲ್ಲಿಯೇ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಗುಡಿತಿಮ್ಮಪ್ಪ ಕ್ಯಾಂಪ್‍ನ ವಾಲ್ಮೀಕಿ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ಹರಿಹರದ ರಾಜನಹಳ್ಳಿಯಲ್ಲಿ ಫೆ. 8, 9ರಂದು ಜರುಗುವ ವಾಲ್ಮೀಕಿ ಜಾತ್ರೋತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

‘ವಾಲ್ಮೀಕಿ ಸಮುದಾಯದ ತಳವಾರ, ಪರಿವಾರ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಜಾರಿ ಮಾಡಿ ಸಂವಿಧಾನದಲ್ಲಿ ಸೇರಿಸಲಾಗಿದೆ. ಅವನ್ನು ಹೊರತುಪಡಿಸಿ, ಬೇರೆ ಸಮುದಾಯದವರಿಗೂ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಿಂದಾಗಿ ಅರ್ಹ ಎಸ್‌ಟಿ ಜನಾಂಗಕ್ಕೆ ಅನ್ಯಾಯ ಆಗುತ್ತಿದೆ. ಸರ್ಕಾರ ದುರುಪಯೋಗ ಆಗುವುದನ್ನು ತಪ್ಪಿಸಬೇಕು. ಇದರ ಬಗ್ಗೆ ನಿರ್ಲಕ್ಷಿಸಿದರೆ ಮುಂದೆ ತಕ್ಕ ಪಾಠ ಕಲಿಯಬೇಕಾದೀತು’ ಎಂದು ಎಚ್ಚರಿಸಿದರು.

ADVERTISEMENT

ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ಕಾರಟಗಿ ತಾಲ್ಲೂಕಿನ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ, ಪ್ರಮುಖರಾದ ಶಿವರೆಡ್ಡಿ ನಾಯಕ ವಕೀಲ, ಸೋಮನಾಥ ಹೆಬ್ಬಡದ ವಕೀಲ, ಶರಣಪ್ಪ ಚಾಗಿ ಮಾತನಾಡಿದರು.

ವಾಲ್ಮೀಕಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸಿ.ಗದ್ದೆಪ್ಪ ನಾಯಕ, ಪ್ರಮುಖರಾದ ಗಿರಿಯಪ್ಪ ಬೂದಿ, ಜಾತ್ರಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸೋಮನಾಥ ದೊಡ್ಡಮನಿ, ದುರುಗೇಶ ಪ್ಯಾಟ್ಯಾಳ, ಸುರೇಶ ಬೆಳ್ಳಿಕಟ್ಟಿ, ವೀರೇಶ ತಳವಾರ, ರಾಘವೇಂದ್ರ ಹುಳ್ಕಿಹಾಳ, ಸೋಮಶೇಖರಪ್ಪ ಗ್ಯಾರೇಜ, ಭೋಗೇಶ ಗುತ್ತಿಗೆದಾರ, ಹನುಮೇಶ ಗುರಿಕಾರ, ಕನಕಪ್ಪ ಸಿದ್ದಾಪುರ, ಮಂತ್ರೇಶ ಸಿದ್ದಾಪುರ, ಹುಲುಗೆಪ್ಪ ಪಾಳ್ಯ, ಮುದಿಯಪ್ಪ ಕಕ್ಕರಗೋಳ, ಕರಿಯಪ್ಪ ಸಿಂಗನಾಳ, ಕೆ.ಪರುಶರಾಮ ವಕೀಲ, ನಾಗರಾಜ ವಕೀಲ, ರಮೇಶ ಜನೌಷಧ, ಆಂಜನೇಯ ಹಗೇದಾಳ, ಶರಣಬಸವ ಡಂಕನಕಲ್, ವಿಜಯಲಕ್ಷ್ಮೀ ಉಳೇನೂರು, ಹುಲಿಗೆಮ್ಮ ನಾಯಕ ಸಹಿತ ಸಮುದಾಯದ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.