ADVERTISEMENT

ಕುಕನೂರು: ಶಿವಸಂಗಮೇಶ್ವರ ಶಿವಾಚಾರ್ಯರು ಲಿಂಗೈಕ್ಯ

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:14 IST
Last Updated 28 ಮೇ 2025, 16:14 IST
ಕುಕನೂರು ತಾಲ್ಲೂಕಿನ ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯರಿಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಅಂತಿಮ ನಮನ ಸಲ್ಲಿಸಿದರು
ಕುಕನೂರು ತಾಲ್ಲೂಕಿನ ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯರಿಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಅಂತಿಮ ನಮನ ಸಲ್ಲಿಸಿದರು   

ಕುಕನೂರು: ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಮಾಜದ ಅಭಿವೃದ್ಧಿಗೂ ಶ್ರಮಿಸಿದ್ದ ತಾಲ್ಲೂಕಿನ ಬೆದವಟ್ಟಿ ಗ್ರಾಮದ ಹಿರೇಮಠದ 10ನೇ ಪೀಠಾಧಿಪತಿ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ (80) ಬುಧವಾರ ಲಿಂಗೈಕ್ಯರಾಗಿದ್ದಾರೆ.

ಜಿಲ್ಲೆ ಮಾತ್ರವಲ್ಲದೆ ಸುತ್ತಲಿನ ಜಿಲ್ಲೆಗಳಲ್ಲಿ ಎಲ್ಲಿಯೇ ಧಾರ್ಮಿಕ ಚಟುವಟಿಕೆಗಳು ನಡೆದರೂ ಅಲ್ಲಿ ಸ್ವಾಮೀಜಿಯನ್ನು ಭಕ್ತರು ಕರೆಸುತ್ತಿದ್ದರು. ಆಧ್ಯಾತ್ಮ, ಸಮಾಜ ಸೇವೆ, ಶೈಕ್ಷಣಿಕ ಬೆಳವಣಿಗೆ, ಸಾಂಸ್ಕೃತಿಕ ವಿಚಾರ ಮತ್ತು ವೈಚಾರಿಕತೆಯನ್ನು ಪಸರಿಸಿದ ಹೆಗ್ಗಳಿಕೆಯನ್ನು ಸ್ವಾಮೀಜಿ ಹೊಂದಿದ್ದಾರೆ.

ಈ ಭಾಗದಲ್ಲಿ ಧಾರ್ಮಿಕತೆ ತಾತ್ವಿಕ ತಳಹದಿಯನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಿದ್ದಾರೆ. ಜೀವಾತಾವಧಿಯಲ್ಲಿ 2,600ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಗೋಪುರಗಳ ಉದ್ಘಾಟನೆ ಬಹುತೇಕವಾಗಿ ಇದೇ ಸ್ವಾಮೀಜಿ ಮಾಡಿದ್ದರು.

ADVERTISEMENT

1970ರ ದಶಕದಲ್ಲಿ ಪೀಠಾಧಿಪತಿಗಳಾದ ಅವರು 1996ರಲ್ಲಿ ಬೆದವಟ್ಟಿಯಲ್ಲಿ ಲಕ್ಷ ದೀಪೋತ್ಸವ, 1993ರಿಂದ ಮಠದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಮಾಡಿದ್ದರು. 1996ರಲ್ಲಿ ಬೆದವಟ್ಟಿಗೆ ಪಂಚ ಪೀಠಾಧಿಪತಿಗಳನ್ನು ಕರೆಯಿಸಿ 300 ಜೋಡಿ ಸಾಮೂಹಿಕ ವಿವಾಹ ಮಾಡಿದ್ದು ಸ್ಮರಣೀಯ  ಎಂದು ಭಕ್ತರು ನೆನಪಿಸಿಕೊಳ್ಳುತ್ತಾರೆ.

ಅಂದು ನೆರೆದಿದ್ದ ಸಾವಿರಾರು ಭಕ್ತರಿಗೆ ಮಾದಲಿ ಮಾಡಿಸಿ 1008 ಕೆ.ಜಿ. ತುಪ್ಪವನ್ನು ಭಕ್ತರ ಸಹಕಾರದಲ್ಲಿ ಬಡಿಸಿದ್ದರು. 2018ರಲ್ಲಿ ಮಠಕ್ಕೆ ನೂತನ ರಥ ನಿರ್ಮಿಸಿ ರಥೋತ್ಸವ ನೆರವೇರಿಸಿದರು. ಪ್ರತಿವರ್ಷ ಜಂಗಮ ವಟುಗಳಿಗೆ ದೀಕ್ಷಾ, ಪುರಾಣ ಪ್ರವಚನ ನೆರವೇರಿಸಿದ್ದಾರೆ. ಅನೇಕ ಮಕ್ಕಳಿಗೆ ಮಠದಲ್ಲಿ ವಿದ್ಯಾದಾನ ಮಾಡಿದ್ದಾರೆ.

ಲಿಂಗಾಪೂಜಾ ಪ್ರಿಯರು:

ಸ್ವಾಮೀಜಿ ನಿತ್ಯ ಮೂರು ಹೊತ್ತು ಲಿಂಗಪೂಜೆ ಮಾಡುತ್ತಿದ್ದರು. ಯಾವುದೇ ಕಾರ್ಯಕ್ರಮವಿರಲಿ ಲಿಂಗಪೂಜೆ ಮಾತ್ರ ತಪ್ಪಿಸುತ್ತಿರಲಿಲ್ಲ.  ಧಾರ್ಮಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಿದ್ದರಿಂದ ಜನಸಾಮಾನ್ಯರ ಸ್ವಾಮೀಜಿ ಎಂದೇ ಹೆಸರಾಗಿದ್ದರು.

ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆದವಟ್ಟಿ ಗ್ರಾಮಕ್ಕೆ ಅಪಾರ ಭಕ್ತರು ಬಂದು ಕಂಬನಿ ಮಿಡಿದರು. ವಿವಿಧ ಮಠಗಳ ಸ್ವಾಮೀಜಿಗಳು ಕೂಡ ಬಂದಿದ್ದರು. ಮಾಜಿ ಸಚಿವ ಹಾಲಪ್ಪ ಆಚಾರ್ ಬುಧವಾರ ಬೆದವಟ್ಟಿಗೆ ಭೇಟಿ ನೀಡಿ ಶ್ರೀಗಳ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.