ADVERTISEMENT

‘ಶಾಂತಿ ಸೌಹಾರ್ದದಿಂದ ಜಯಂತಿ ಆಚರಿಸಿ’

ಹನುಮ ಮಾಲಾ ಜಯಂತಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 11:21 IST
Last Updated 6 ಡಿಸೆಂಬರ್ 2019, 11:21 IST
ಗಂಗಾವತಿಯ ಐಎಂಎ ಭವನದಲ್ಲಿ ಗುರುವಾರ ಹನುಮ ಜಯಂತಿ ಪ್ರಯುಕ್ತ ನಡೆದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಮಾತನಾಡಿದರು
ಗಂಗಾವತಿಯ ಐಎಂಎ ಭವನದಲ್ಲಿ ಗುರುವಾರ ಹನುಮ ಜಯಂತಿ ಪ್ರಯುಕ್ತ ನಡೆದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಮಾತನಾಡಿದರು   

ಗಂಗಾವತಿ: ‘ನಗರದಲ್ಲಿ ಡಿಸೆಂಬರ್ 9 ರಂದು ನಡೆಯುವ ಹನುಮ ಮಾಲಾ ಸಂಕೀರ್ತನಾ ಯಾತ್ರೆಯನ್ನು ಶಾಂತಿ, ಸೌಹಾರ್ದದಿಂದ ಆಚರಣೆ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಹೇಳಿದರು.‌

ನಗರದ ಐಎಂಎ ಭವನದಲ್ಲಿ ಗುರುವಾರ ಹನುಮ ಜಯಂತಿ ಪ್ರಯುಕ್ತ ನಡೆದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದರು.

ಈ ಬಾರಿ ಹನುಮಮಾಲಾ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳಲು ತಾಲ್ಲೂಕಿನ ಅಂಜನಾದ್ರಿಗೆ ಸುಮಾರು 30 ರಿಂದ 35 ಸಾವಿರ ಹನುಮ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಆ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು

ADVERTISEMENT

ನಗರದ ಎಪಿಎಂಸಿಯಿಂದ ಸುಮಾರು ಆರು ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಯಾತ್ರೆ ಹೊರಡಲಿದ್ದು, ಪ್ರತಿಯೊಬ್ಬರು ಸರತಿ ಸಾಲಿನಲ್ಲಿ ಹೋಗಬೇಕು. ಯಾವುದೇ ಗಲಾಟೆಗಳಿಗೆ ಅಸ್ಪದ ಕೊಡಬಾರದು. ನಗರದ ಮುಸ್ಲಿಂ ಸಮಾಜದ ಜನರು ಕೂಡ ಹನುಮ ಮಾಲಾಧಾರಿಗಳಿಗೆ ಜಾಮೀಯಾ ಮಸೀದಿ ಮುಂದೆ ಫಲ-ಪುಷ್ಪ ನೀಡಿ ಸ್ವಾಗತ ಕೋರುತ್ತೇವೆ ಎಂದು ಹೇಳಿದ್ದಾರೆ. ಅವರಿಗೂ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಮಾತನಾಡಿ, ಹನುಮ ಜಯಂತಿಗೆ ಜಿಲ್ಲಾಡಳಿತವು ಸಾಕಷ್ಟು ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಅಂಜನಾದ್ರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಅಳವಡಿಸಲಾಗಿದೆ. ಹನುಮ ಭಕ್ತರಿಗೆ ಪ್ರಸಾದದ ವ್ಯವಸ್ಥೆ, ಕುಡಿಯುವ ನೀರು, ಬಸ್ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.‌

ಅಂಜನಾದ್ರಿ ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ ಮಾತನಾಡಿ, ಅಂದು ಪ್ರತಿಯೊಬ್ಬ ಭಕ್ತರಿಗೂ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಶಾಮೀಯಾನ, ಅಲ್ಲಲ್ಲಿ ಧ್ವನಿವರ್ಧಕಗಳು, ಸಿಸಿಟಿವಿಯನ್ನು ಅಳವಡಿಸಲಾಗಿದೆ. ಇನ್ನು, ಈ ಬಾರಿ ಬರುವಂತ ಪ್ರತಿಯೊಬ್ಬ ಭಕ್ತರಿಗೂ ಲಾಡು ಪ್ರಸಾದ ವಿತರಣೆ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಮಾಡ ಲಾಗಿದ್ದು, ಸಾರ್ವಜನಿಕರು ಪ್ಲಾಸ್ಟಿಕ್‌ ಬಳಸದಂತೆ ಮನವಿ ಮಾಡಿದರು.

ನಂತರ ವಿವಿಧ ಸಮುದಾಯದ ಮುಖಂಡರು ಮಾತನಾಡಿ, ಹನುಮ ಜಯಂತಿಯನ್ನು ಜಾತಿ, ಭೇದ-ಭಾವ ಮರೆತು ಸೌಹಾರ್ದದಿಂದ ಆಚರಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ತಹಶೀಲ್ದಾರ್‌ ಎಲ್.ಡಿ.ಚಂದ್ರಕಾಂತ್‌, ತಾ.ಪಂ ಇಒ ಡಿ.ಮೋಹನ್‌, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್‌, ಪಿಐ ಉದಯರವಿ, ಸಿಪಿಐ ಸುರೇಶ್‌ ತಳವಾರ್‌, ಪಿಎಸ್‌ಐ ದೊಡ್ಡಬಸಪ್ಪ, ವಿವಿಧ ಸಮಾಜದ ಮುಖಂಡರಾದ ತಿಪ್ಪೇರುದ್ರಸ್ವಾಮಿ, ವಿರುಪಾಕ್ಷಪ್ಪ ಸಿಂಗನಾಳ, ಸಂತೋಷ ಕೆಲೋಜಿ, ಶಾಮೀದ್‌ ಮನಿಯಾರ್‌, ನವಾಬ್‌ ಸಾಬ್‌ ಖಾದ್ರಿ, ಜೋಗದ ನಾರಾಯಣಪ್ಪ, ಮತ್ತು ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಹನುಮ ಮಾಲಾಧಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.