ADVERTISEMENT

ಗಂಗಾವತಿ: ಅನುದಾನ ಬಳಕೆ, ನಿರ್ಲಕ್ಷಿಸಿದರೆ ಕ್ರಮ, ಡಾ.ಡಿ.ಮೋಹನ್

ಅಧಿಕಾರಿಗಳಿಗೆ ತಾ.ಪಂ. ಇಒ ಡಾ.ಡಿ.ಮೋಹನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 12:33 IST
Last Updated 5 ಆಗಸ್ಟ್ 2021, 12:33 IST
ಗಂಗಾವತಿ ನಗರದ ತಾಲ್ಲೂಕು ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾ.ಪಂ. ಇಒ ಡಾ.ಡಿ.ಮೋಹನ್, ತಾಲ್ಲೂಕಿನ ಇಇ ಕಾವ್ಯರಾಣಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು
ಗಂಗಾವತಿ ನಗರದ ತಾಲ್ಲೂಕು ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾ.ಪಂ. ಇಒ ಡಾ.ಡಿ.ಮೋಹನ್, ತಾಲ್ಲೂಕಿನ ಇಇ ಕಾವ್ಯರಾಣಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು   

ಗಂಗಾವತಿ: ‘ಸರ್ಕಾರದ ವಿವಿಧ ಯೋಜನೆಯಡಿ ಮಂಜೂರಾಗುವ ಅನುದಾನದಲ್ಲಿ ಶೇ 25ರಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಮೀಸಲಿಡಬೇಕು‘ ಎಂದು ತಾ.ಪಂ ಇಒ ಡಾ.ಡಿ.ಮೋಹನ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ಗುರುವಾರ ನಡೆದ ’ಅನುಸೂ­ಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅನು­ಷ್ಠಾನ‘ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು‌.

2020-21ನೇ ಸಾಲಿನಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆ ಯೋಜನೆಯಡಿ ಎಸ್‌ಸಿ ಮತ್ತು ಎಸ್‌ಟಿ ಜನಾಂಗದ ಅಭಿವೃದ್ಧಿಗೆ ಹಂಚಿಕೆಯಾದ ಅನುದಾನ ಪೂರ್ಣವಾಗಿ ಬಳಕೆ ಆಗಬೇಕು. ಅಧಿಕಾರಿಗಳು ನಿಗದಿತ ಅವಧಿಯೊಳಗೆ ಯೋಜನೆಗಳ ಅನುಷ್ಠಾನದ ಜೊತೆಗೆ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯವನ್ನೂ ಕಲ್ಪಿಸಬೇಕು ಎಂದು ಸೂಚಿಸಿದರು.

ADVERTISEMENT

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಪ್ರಕರಣಗಳಲ್ಲಿನ ಆರೋಪಿಗಳಿಗೆ ಶಿಕ್ಷೆ ಆಗುವಂತೆ ತನಿಖಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ದೇವಾಲಯ, ಹೋಟೆಲ್, ಕ್ಷೌರಿಕರ ಅಂಗಡಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಎಸ್‌ಸಿ, ಎಸ್‌ಟಿ ಜನರು ಪ್ರವೇಶಕ್ಕೆ ನಿರ್ಬಂಧ ಹಾಕಿದರೆ ಕ್ರಮ ಕೈಗೊಳ್ಳಬೇಕ. ಅಲ್ಲದೇ ಅವರ ಮೇಲೆ ನಡೆಯುವ ದೌರ್ಜನ್ಯಗಳ ಕುರಿತು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಕೋರಿದರು.

ಅಧಿಕಾರಿಗಳು ಗ್ರಾಮೀಣ ಭಾಗಗಳಿಗೆ ತೆರಳಿ ಅಸ್ಪೃಶ್ಯತೆ ಮತ್ತು ಅನಿಷ್ಟ ಪದ್ಧತಿಗಳ ಆಚರಣೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಸಾವರ್ಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.

ರಾಜ್ಯದಲ್ಲಿ ಕೊರೊನಾ 3ನೇ ಅಲೆಯ ಆತಂಕ ಎದುರಾಗಿದ್ದು, ಆರೋಗ್ಯ ಇಲಾಖೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಬೇಕು. ಜೊತೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಸಹಾಯಕ ನಿರ್ದೇಶಕ ತುಗಲಪ್ಪ ದೇಸಾಯಿ ಮಾತನಾಡಿ, ಎಸ್‌ಸಿ ಮತ್ತು ಎಸ್‌ಟಿ ಜನಾಂಗದ ಅಭಿವೃದ್ದಿಗೆ ಮಂಜೂರಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗಬೇಕು. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ಎಸ್‌ಸಿ, ಎಸ್‌ಟಿ, ದೌರ್ಜನ್ಯ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕನಕಗಿರಿ ತಾಲ್ಲೂಕಿನ ಇಇ ಕಾವ್ಯರಾಣಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಎನ್.ನರಸಪ್ಪ ಸೇರಿದಂತೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.