ಕುಷ್ಟಗಿ: ‘ಮಕ್ಕಳಿಗೆ ನೀಡುವ ಶಿಕ್ಷಣ ಅವರ ಜ್ಞಾನಪ್ರಸರಣಕ್ಕೆ ಪೂರಕವಾಗಿರಬೇಕು. ಆದರೆ ಸರ್ಕಾರದ ನೂತನ ಕ್ರಮದ ಪ್ರಕಾರ ಅಂಕಗಳೇ ಜ್ಞಾನಾರ್ಜನೆಯ ಮಾನದಂಡವಾಗುತ್ತಿರುವುದು ಶೈಕ್ಷಣಿಕ ವ್ಯವಸ್ಥೆಯ ಅಣಕವಾಗಿದೆ’ ಎಂದು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಹೇಳಿದರು.
ಪಟ್ಟಣದ ವಿಜಯಚಂದ್ರಶೇಖರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪರೀಕ್ಷಾ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಟ 33 ಅಂಕಗಳನ್ನು ಪಡೆಯಬೇಕು ಎಂಬ ನೂತನ ಪದ್ಧತಿ ರಾಜ್ಯದ ಪ್ರಸಕ್ತ ಶೈಕ್ಷಣಿಕ ಪರಿಸ್ಥಿತಿಯಲ್ಲಿ ಸಮಂಜಸ ಅಲ್ಲ’ ಎಂದರು.
‘ಕಲಿಕೆಯ ಪ್ರಕ್ರಿಯೆಯೇ ಇಲ್ಲದೆ ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಭವಿಷ್ಯದಲ್ಲಿ ಅವರ ಶೈಕ್ಷಣಿಕ ಪ್ರಗತಿಗೆ ಮಾರಕವಾಗುತ್ತದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಅನ್ಯ ಕೆಲಸಗಳ ಒತ್ತಡದಿಂದಾಗಿ ಕಲಿಸುವುದಕ್ಕೆ ಶಿಕ್ಷಕರಿಗೆ ಇದ್ದ ಸಮಯದಲ್ಲೂ ಕಡಿಮೆಯಾಗಿದ್ದರೆ ಇನ್ನೊಂದೆಡೆ ಪುಸ್ತಕಗಳ ಗಾತ್ರ ಹಿಗ್ಗಿದೆ. ನೂತನ ಪದ್ಧತಿಯನ್ನು ಹಿಂದಿನ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಸಂಘದವರಿಂದ ವಿರೋಧ ವ್ಯಕ್ತವಾಗಿದೆ.
ಅಲ್ಲದೆ ರಾಜ್ಯ ಪಠ್ಯಕ್ರಮದ ಪರೀಕ್ಷಾ ಪದ್ಧತಿಯನ್ನು ಸಿಬಿಎಸ್ಇ ಪಠ್ಯಕ್ರಮದ ಪರೀಕ್ಷಾ ಮಾದರಿಯಲ್ಲಿ ಬದಲಾಯಿಸಲಾಗಿದ್ದು ಸಿಬಿಎಸ್ಇ ಪಠ್ಯಕ್ರಮ ಅತ್ಯಂತ ಕ್ಲಿಷ್ಟಕರವಾಗಿದೆ. ಆದರೆ ಉತ್ತೀರ್ಣರಾಗಲು ಅತ್ಯಂತ ಕಡಿಮೆ ಅಂಕ ನಿಗದಿ ಮಾಡಿರುವುದು ಸರಿಯಲ್ಲ. ಪಠ್ಯ ಮತ್ತು ಪರೀಕ್ಷಾ ಪದ್ಧತಿಯ ನಡುವಿನ ಅತಿ ದೊಡ್ಡ ಕಂದಕ ಸೃಷ್ಟಿಯಾಗಿ ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರಿದೆ. ಇದೇ ಮಾದರಿಯನ್ನು ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವುದು ಸಮಂಜಸವಲ್ಲ’ ಎಂದರು.
ಕಮ್ಮಟದ ಅಂಗವಾಗಿ ನಡೆದ ಪೋಷಕರ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಅರವಿಂದ ಚೊಕ್ಕಾಡಿ ಉತ್ತರಿಸಿದರು.
ವಿಜಯ ಚಂದ್ರಶೇಖರ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಅಂಗಡಿ, ನಿವೃತ್ತ ಉಪನ್ಯಾಸಕ ಬಸವರಾಜ ಸವಡಿ, ರಾಜ್ಯ ಆಂಗ್ಲ ಭಾಷಾ ಸಂಪನ್ಮೂಲ ವ್ಯಕ್ತಿ ಸಿ.ವಿ.ಪಾಟೀಲ, ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ವಿದ್ಯಾರ್ಥಿಗಳು ಕಮ್ಮಟದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.