ADVERTISEMENT

ಬಣವಿಗೆ ಬೆಂಕಿ ಬಿದ್ದರೂ ನಟನೆ ಬಿಡದ ಪ್ಯಾಟೆಪ್ಪ!: ನವಲಿ ಗ್ರಾಮದ ಕಲಾವಿದನ ಸಾಧನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 5:59 IST
Last Updated 13 ಏಪ್ರಿಲ್ 2025, 5:59 IST
ಕನಕಗಿರಿ ಸಮೀಪದ ನವಲಿ ಗ್ರಾಮದ ಪ್ಯಾಟೆಪ್ಪ ನಾಯಕ ಅವರು ಸುರಪುರದ ಶೂರಸಿಂಹ ವೆಂಕಟಪ್ಪ ನಾಯಕ ಪಾತ್ರದಲ್ಲಿ ( ಮಧ್ಯೆದಲ್ಲಿರುವವರು)
ಕನಕಗಿರಿ ಸಮೀಪದ ನವಲಿ ಗ್ರಾಮದ ಪ್ಯಾಟೆಪ್ಪ ನಾಯಕ ಅವರು ಸುರಪುರದ ಶೂರಸಿಂಹ ವೆಂಕಟಪ್ಪ ನಾಯಕ ಪಾತ್ರದಲ್ಲಿ ( ಮಧ್ಯೆದಲ್ಲಿರುವವರು)   

ಕನಕಗಿರಿ: ನಾಟಕವು ದೇಶದ ಕಲಾ ಸಂಸ್ಕೃತಿಯ ಅವಿಭಾಜ್ಯ ಅಂಗ. ಇಂತಹ ನಾಟಕ ಕಲೆಗೆ ತಾಲ್ಲೂಕಿನ ನವಲಿ ಗ್ರಾಮ ಪ್ರಸಿದ್ಧಿಯಾಗಿದ್ದು ಸ್ಥಳೀಯರು ನಾಟಕ ಕಲೆಯನ್ನು ಇಂದಿಗೂ ಪೋಷಿಸಿಕೊಂಡು ಬರುತ್ತಿದ್ದು, ಅವರಲ್ಲಿ ಗ್ರಾಮದ ಹಿರಿಯ ಕಲಾವಿದ ಪ್ಯಾಟೆಪ್ಪ ನಾಯಕ ಸಹ ಒಬ್ಬರು.

ಮೂರನೇ ತರಗತಿ ಮಾತ್ರ ಓದಿರುವ ಪ್ಯಾಟೆಪ್ಪ ಅವರಿಗೆ ರಂಗಭೂಮಿ ಕಲೆ ಎಂದರೆ ಎಲ್ಲಿಲ್ಲದ ಹುಚ್ಚು. 40ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು ಹಲವಾರು ನಾಟಕಗಳಿಗೆ‌ ನಿರ್ದೇಶನ ನೀಡಿದ್ದಾರೆ.‌

ಚಿಕ್ಕವರಿದ್ದಾಗ ಜೀತದಾಳು ಆಗಿ ಧನಿಕರ ಮನೆಯಲ್ಲಿದ್ದು ಕಷ್ಟ, ನೋವು ಕಂಡಿರುವ ಅವರು ಬಾಲ್ಯದಲ್ಲಿ ಯಾದಗಿರಿ ಜಿಲ್ಲೆಯ
ತಿಂಥಣಿ ಮೌನೇಶ್ವರ ಜಾತ್ರೆಗೆ ಹೋಗಿದ್ದ ಸಮಯದಲ್ಲಿ ಗೌಡರ ಗದ್ದಲ ನಾಟಕದಲ್ಲಿ ನಟ ಸುಧೀರ ಅವರ ವಿಲನ್ ಪಾತ್ರಕ್ಕೆ ಮನಸೋತು ರಂಗಭೂಮಿಯಲ್ಲಿಯೇ ಜೀವನ ಕಂಡುಕೊಂಡಿದ್ದಾರೆ.

ADVERTISEMENT

ತಮ್ಮ 22ರ ವಯಸ್ಸಿನಲ್ಲಿ ‌ಮುಖಕ್ಕೆ ಬಣ್ಣ ಹಚ್ಚಿಕೊಂಡ ಪ್ಯಾಟೆಪ್ಪಗೆ‌ ಇಂದು ಅರವತ್ತರ ಸಂಭ್ರಮ. ವಿಲನ್ ಪಾತ್ರ ಅಂದರೆ ಪ್ಯಾಟೆಪ್ಪ, ಪ್ಯಾಟೆಪ್ಪ ಅಂದರೆ ವಿಲನ್ ಎನ್ನುವಂತ ವಾತಾವರಣ ತಾಲ್ಲೂಕಿನಲ್ಲಿದೆ. ಮೊದಲ ಸಲ 'ಕರ್ತವ್ಯದ ಕಾಣಿಕೆ' ಎಂಬ ನಾಟಕದಲ್ಲಿ ರುದ್ರಗೌಡನ ಪಾತ್ರದಲ್ಲಿ ಮಿಂಚಿದ ಪ್ಯಾಟೆಪ್ಪ ಅವರ ಕಲಾ ಪ್ರದರ್ಶನ ನಾಟಕ ಆಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಪೌರಾಣಿಕ, ಸಾಮಾಜಿಕ, ದಪ್ಪಿನಾಟಕ, ಭಕ್ತಿ ಹೀಗೆ ಎಲ್ಲಾ ಪ್ರಕಾರದ ರಂಗಭೂಮಿಯಲ್ಲಿ ಹೆಸರುವಾಸಿಯಾಗಿದ್ದಾರೆ. ಕಳ್ಳ ನೀನಲ್ಲ, ಕೆರಳಿದ ಗಂಡು‌ ಹುಲಿ, ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ, ಬೆಂಕಿಯಲ್ಲಿ ಅರಳಿದ‌ಹೂ, ಬಡವ ಸಾಕಿದ ಬಹದ್ದೂರು‌ ಹುಲಿ, ಬದುಕೊಂದು ಮೂರು ದಿನದ ಸಂತೆ, ಗೌಡರ ಗದ್ದಲ ಹೀಗೆ ಹಲವಾರು ಸಾಮಾಜಿಕ ನಾಟಕಗಳಲ್ಲಿ‌ ಬಣ್ಣ ಹಚ್ಚಿಕೊಂಡಿದ್ದಾರೆ.

ಈ ಭಾಗದ‌ ಜನಪ್ರಿಯ‌ ನಾಟಕಗಳಲ್ಲಿ ಒಂದಾಗಿರುವ ಸಂಗ್ಯಾ–ಬಾಳ್ಯದಲ್ಲಿ ವೀರಣ್ಣನ ಪಾತ್ರದಲ್ಲಿ ಅಭಿನಯಿಸಿ ಜನರ ಮನಸಿನಲ್ಲಿ‌ ಉಳಿದುಕೊಂಡಿದ್ದಾರೆ. ಬಾಲಾಭೀಕ್ಷಾರಾಜ, ಛತ್ರಪತಿರಾಜ ಇತರೆ ಪೌರಾಣಿಕ ಕಥೆಗಳ ಆಧಾರಿತ ನಾಟಕದ ಪಾತ್ರಗಳು‌ ಗಮನ ಸೆಳೆದಿವೆ.
ಸುರಪುರದ ರಾಜಾ ವೆಂಕಟಪ್ಪ ನಾಯಕ ಎಂಬ ನಾಟಕದಲ್ಲಿ ಪ್ಯಾಟೆಪ್ಪ ಅವರು ವೆಂಕಟಪ‌ನಾಯಕ ಪಾತ್ರದಲ್ಲಿ‌ ಕಾಣಿಸಿಕೊಂಡು‌ ಸೈ ಎನ್ನಿಸಿಕೊಂಡಿದ್ದಾರೆ.

ಹೇಮರೆಡ್ಡಿ ಮಲ್ಲಮ್ಮ, ಘಡಿವಡಿಕಿ ಮಹಾತ್ಮೆ, ಧರ್ಮ‌ ತುಂಬಿದ ಮನೆ, ಅಣ್ಣನ ಒಡಲು, ಬಂಗಾರದ‌ ಕಡಲು,‌ಇತರೆ ಭಕ್ತಿಪ್ರದಾನ ನಾಟಕಗಳು‌ ನಟಿಸಿದ್ದಾರೆ. ನವಲಿ ಮಾತ್ರವಲ್ಲದೆ ಗಂಗಾವತಿ, ನಾಗನಕಲ್, ಕಕ್ಕರಗೋಳ, ಕಾರಟಗಿ, ಹಿರೇಡಂಕನಲ್, ನವಲಿ ತಾಂಡ, ಬೂದಗುಂಪಾ, ಆಕಳಕುಂಪಿ, ಇತರೆ ಕಡೆಗಳಲ್ಲಿ ಪ್ರದರ್ಶನ ಕಂಡಿವೆ.

ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ, ನಾಟಕ 12 ಸಲ, ಕರ್ತವ್ಯದ ಕಾಣಿಕೆ -8, ಅಣ್ಣನ ಬಂಗಾರದ ಕಡಲು ನಾಟಕ 15 ಸಲ ಪ್ರಯೋಗ ಕಂಡು ಹಿರಿಮೆಯನ್ನು ಹೆಚ್ಚಿಸಿವೆ.

ನಿರ್ದೇಶನಕ್ಕೂ ಸೈ:

ನಾಟಕದಲ್ಲಿ ಅಭಿನಯ ಮಾತ್ರವಲ್ಲದೆ ನಿರ್ದೇಶನಕ್ಕೂ ಪ್ಯಾಟೆಪ್ಪ ನಾಯಕ ಮುಂದೆ ಇದ್ದಾರೆ. ಗೌರಿ ಬಂದಳು, ನರನಾಗರ, ರಕ್ತರಾತ್ರಿ, ಹುತ್ತಿನಲ್ಲಿ ಕೈಯಿಟ್ಟ ಮುತ್ತೈದೆ, ಇತರೆ ನಾಟಕಗಳಿಗೆ ಮಲ್ಲಾಪುರ,‌ಆದಾಪುರ, ಸೋಮನಾಳ, ಚಿರ್ಚನಗುಡ್ಡ, ಗುಡೂರು ವಿವಿಧ ಗ್ರಾಮಗಳಲ್ಲಿ ನಿರ್ದೇಶನ ನೀಡಿ ಜನಪ್ರಿಯರಾಗಿದ್ದಾರೆ.

ಬಡ ಕಲಾವಿದರ ಸಹಾಯಾರ್ಥ ನಾಟಕ, ಬಣವಿಗೆ ಬೆಂಕಿ: ಪ್ಯಾಟೆಪ್ಪಗೆ ನಾಟಕ, ಕಲಾವಿದರು ಎಂದರೆ ಬಹಳ ಪ್ರೀತಿ. ಬಡ ಕಲಾವಿದರು ಸಂಕಷ್ಟದಲ್ಲಿದ್ದಾಗ ಅವರ ಆರ್ಥಿಕ ಸಹಾಯಾರ್ಥವಾಗಿ ನಾಟಕಗಳನ್ನು ಆಯೋಜಿಸಿ ಹಣಕಾಸಿನ ಸಹಾಯ ಮಾಡಿದ ಉದಾಹರಣೆಗಳು ಬಹಳಷ್ಟಿವೆ.

ಇಂಥ ಸಹಾಯಾರ್ಥದಿಂದ ಬಹಳ ಜನಪ್ರಿಯರಾಗಿದ್ದನ್ನು ಸಹಿಸದ ಕೆಲ ಕುತಂತ್ರಿಗಳು ಸಹಾಯಾರ್ಥ ನಾಟಕ ನಡೆಯುತ್ತಿದ್ದಾಗ ಪ್ಯಾಟೆಪ್ಪನ ಅಭಿನಯ ಬರುವ ಸಮಯದಲ್ಲಿಯೇ ಪ್ಯಾಟೆಪ್ಪನ ಹೊಲದಲ್ಲಿದ್ದ ಭತ್ತದ ಹುಲ್ಲು, ಶೇಂಗಾ ಹೊಟ್ಟು, ಇತರೆ ಧವಸ ದಾನ್ಯಗಳ ಬಣವಿಗೆ ಬೆಂಕಿ ಹಚ್ಚಿ‌ ವಿಕೃತಿ ಮರೆಯುತ್ತಾರೆ. ಈ ಕಹಿ ಸುದ್ದಿ ತಿಳಿದ ಪ್ಯಾಟೆಪ್ಪ ಎದೆಗುಂದಲಿಲ್ಲ. ನಾಟಕದಲ್ಲಿ ಅಭಿನಯಿಸಿ ಮತ್ತೊಬ್ಬರಿಗೆ ಆಸರೆಯಾಗುವುದನ್ನು ಮರೆಯಲಿಲ್ಲ.

ಪಾತ್ರದಲ್ಲಿ ಪ್ಯಾಟೆಪ್ಪ ನಾಯಕ

ಶ್ರೀಮಂತ ರೈತರು ನಾಟಕ ಮುಗಿದ‌ ಮರು‌ದಿನ ಪ್ಯಾಟೆಪ್ಪನ ಮನೆಗೆ ಬಂದು ತಮ್ಮ ಹೊಲದಲ್ಲಿ ಹೊಟ್ಟು, ಭತ್ತದ ಹುಲ್ಲನ್ನು ಇದೆ ತೆಗೆದುಕೊಂಡು‌ ಹೋಗು ಎಂದು ಆಹ್ವಾನಿಸಿದರೆ, ರಾಜಕೀಯ ನಾಯಕರು ಹಣ ನೀಡಿ ಮಾನವೀಯತೆ ಮೆರೆದರು.

ಯುಜಜನ ಮೇಳ: ಯುವ ಸಬಲೀಕರಣ ಇಲಾಖೆ ನಡೆಸುತ್ತಿದ್ದ ಯುವ ಜನ ಮೇಳದ ಸಣ್ಣಾಟ, ಭಜನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿಯೂ ಮಿಂಚಿದ್ದಾರೆ. ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಸುವ ಗಿರಿಜನ ಉತ್ಸವ, ಅನೆಗೊಂದಿ‌ ಉತ್ಸವದಲ್ಲಿಯೂ ಅಭಿನಯಿಸಿದ್ದಾರೆ.

ಇವರ ಕಲೆಯನ್ನು ಮೆಚ್ಚಿ ಕೊಟ್ಟೂರು, ಬೆಳಗಾವಿ, ಹುಬ್ಬಳ್ಳಿ ಸಂಘಟನೆಗಳು ವಿವಿಧ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿವೆ. ಕನಕಗಿರಿ, ಗಂಗಾವತಿ ಕಸಾಪ ತಾಲ್ಲೂಕು ಘಟಕ ಹಾಗೂ ಕೊಪ್ಪಳದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ಯಾಟೆಪ್ಪ ಅವರನ್ನು ಸನ್ಮಾನಿಸಲಾಗಿದೆ.

 

ನನಗೆ ರಂಗಭೂಮಿ‌ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದ್ದು ಗೌಡರ ಗದ್ದಲ ನಾಟಕ ಹಾಗೂ ನಟ ಸುಧೀರ ಅವರು.‌ ನನಗೆ ವಿಲನ್ ಪಾತ್ರ ಅಂದರೆ ಅಚ್ವುಮೆಚ್ಚು. ಪೌರಾಣಿಕ, ಸಾಮಾಜಿಕ, ಭಕ್ತಿ, ಸಣ್ಣಾಟಗಳಲ್ಲಿಯೂ ಅಭಿನಯಿಸಿದ್ದೇನೆ
ಪ್ಯಾಟೆಪ್ಪ ನಾಯಕ, ಹಿರಿಯ ಕಲಾವಿದ
ಪ್ಯಾಟೆಪ್ಪ ನಾಯಕ ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದರಾಗಿದ್ದು ನಾಟಕ ರಂಗದ ಕ್ಷೇತ್ರದಲ್ಲಿ ನವಲಿಯ ಹೆಸರನ್ನು ತಂದಿದ್ದಾರೆ. ರಂಗಭೂಮಿ ಕಲೆ ಉಳಿವಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅರವತ್ತು ವರ್ಷವಾದರೂ ಅವರಲ್ಲಿ ನಾಟಕದ ಉತ್ಸಾಹ ಕುಗ್ಗಿಲ್ಲ.
- ವಿರುಪಣ್ಣ ಕಲ್ಲೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ನವಲಿ
ನನಗೆ ರಂಗಭೂಮಿ‌ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದ್ದು ಗೌಡರ ಗದ್ದಲ ನಾಟಕ ಹಾಗೂ ನಟ ಸುಧೀರ ಅವರು.‌ ನನಗೆ ವಿಲನ್ ಪಾತ್ರ ಅಂದರೆ ಅಚ್ವುಮೆಚ್ಚು. ಪೌರಾಣಿಕ ಸಾಮಾಜಿಕ ಭಕ್ತಿ ಸಣ್ಣಾಟಗಳಲ್ಲಿಯೂ ಅಭಿನಯಿಸಿದ್ದೇನೆ. ನಾಟಕಪ್ರಿಯರ ಆಶೀರ್ವಾದ ತಮ್ಮ ಯಶಸ್ಸಿಗೆ ಕಾರಣವಾಗಿದೆ.
ಪ್ಯಾಟೆಪ್ಪ ನಾಯಕ ಹಿರಿಯ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.