ADVERTISEMENT

ಪೊಲೀಸರ ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 18 ಮೇ 2021, 3:08 IST
Last Updated 18 ಮೇ 2021, 3:08 IST
ಕನಕಗಿರಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಕುರಿತು ಪಿಎಸ್ಐ ತಾರಾಬಾಯಿ ನೇತೃತ್ವದಲ್ಲಿ ಸೋಮವಾರ ಮಿಂಚಿನ ಸಂಚಾರ ನಡೆಸಿ ಜಾಗೃತಿ ಮೂಡಿಸಲಾಯಿತು
ಕನಕಗಿರಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಕುರಿತು ಪಿಎಸ್ಐ ತಾರಾಬಾಯಿ ನೇತೃತ್ವದಲ್ಲಿ ಸೋಮವಾರ ಮಿಂಚಿನ ಸಂಚಾರ ನಡೆಸಿ ಜಾಗೃತಿ ಮೂಡಿಸಲಾಯಿತು   

ಕನಕಗಿರಿ: ಜಿಲ್ಲಾಡಳಿತ ಜಾರಿ ಮಾಡಿರುವ ಸಂಪೂರ್ಣ ಲಾಕ್‌ಡೌನ್‌ಗೆ ಸೋಮವಾರ ಇಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಬೆಳಗಿನ ಜಾವದಿಂದಲೇ ಪೊಲೀಸರು ಪಟ್ಟಣದಲ್ಲಿ ಮಿಂಚಿನ ಸಂಚಾರ ನಡೆಸಿ ಸಂಪೂರ್ಣ ಲಾಕ್‌ಡೌನ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ರಾಜಬೀದಿ, ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮೋಚಿ, ಭೋವಿ ಕಾಲೊನಿ, ಇಂದಿರಾನಗರ ಸೇರಿದಂತೆ ಪ್ರತಿಯೊಂದು ವಾರ್ಡ್‌ಗಳಲ್ಲಿ ಪೊಲೀಸರು ಸಂಚರಿಸಿ, ಲಾಕ್‌ಡೌನ್ ಕುರಿತು ತಿಳಿವಳಿಕೆ ಮೂಡಿಸಿದರು.

ADVERTISEMENT

ವಾಹನಗಳನ್ನು ವಶಕ್ಕೆ ಪಡೆದುಕೊಂಡು ತಪಾಸಣೆ ನಡೆಸಿದರು. ಕಿರಾಣಿ ಅಂಗಡಿ, ಹೋಟೆಲ್, ಖಾನಾವಳಿ ಇತರೆ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸಂಪೂರ್ಣ ಬಂದ್ ಮಾಡಿಕೊಂಡು ಲಾಕ್‌ಡೌನ್‌ಗೆ ಸ್ಪಂದಿಸಿದರು. ಬ್ಯಾಂಕ್ ಸೇರಿದಂತೆ ಸರ್ಕಾರಿ, ಕಚೇರಿಗಳು ಸಹ ಬಂದ್ ಆಗಿದ್ದವು.

ತಹಶೀಲ್ದಾರ್ ರವಿ ಅಂಗಡಿ, ಪಿಎಸ್ಐಗಳಾದ ತಾರಾಬಾಯಿ ಪವಾರ , ಕಾಶೀಂಸಾಬ ಮಾತನಾಡಿ, ಜನರು ಅಗತ್ಯ ಸಮಯದಲ್ಲಿ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕೆಂದು ಹೇಳಿದರು.

ವಾಹನಗಳ ಓಡಾಟಕ್ಕೆ ಅವಕಾಶ ನೀಡುವುದಿಲ್ಲ. ಗೊಬ್ಬರ ಖರೀದಿ, ಔಷಧಿ, ಚಿಕಿತ್ಸೆಗೆ ಬರುವವರು ಕಡ್ಡಾಯವಾಗಿ ರಶೀದಿಗಳನ್ನು ತೋರಿಸಬೇಕೆಂದು ತಾಕೀತು ಮಾಡಿದರು.

ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಜಾಫರುದ್ದೀನ್, ಮಂಜುನಾಥ ಹುಲ್ಲೂರು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೊಲೀಸರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.