ADVERTISEMENT

ಕಲಿಕಾ ಅಂತರ ಸರಿದೂಗಿಸಲು ಶ್ರಮಿಸಿ: ಹನುಮಂತಪ್ಪ ಕುರಿ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 4:52 IST
Last Updated 1 ಜುಲೈ 2021, 4:52 IST
ಕೊಪ್ಪಳ ತಾಲ್ಲೂಕಿನ ಬಹದ್ದೂರ್ ಬಂಡಿ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹೊಸ ಗೊಂಡಬಾಳ ಶಾಲೆ ತಯಾರಿಸಿದ ಇಲಾಖೆ ಯೋಜನೆಗಳನ್ನು ಒಳಗೊಂಡ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು
ಕೊಪ್ಪಳ ತಾಲ್ಲೂಕಿನ ಬಹದ್ದೂರ್ ಬಂಡಿ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹೊಸ ಗೊಂಡಬಾಳ ಶಾಲೆ ತಯಾರಿಸಿದ ಇಲಾಖೆ ಯೋಜನೆಗಳನ್ನು ಒಳಗೊಂಡ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು   

ಕೊಪ್ಪಳ: ‘ಕೊರೊನಾದಿಂದ ಮಕ್ಕಳ ಕಲಿಕೆಯಲ್ಲಿ ಉಂಟಾದ ಕಲಿಕಾ ಅಂತರ ಸರಿದೂಗಿಸಲು ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ಕ್ರಿಯಾ ಯೋಜನೆ ರೂಪಿಸಿಕೊಂಡು ಮಕ್ಕಳನ್ನು ಕಲಿಕಾ ವಾತಾವರಣಕ್ಕೆ ತರಲು ಪ್ರಯತ್ನಿಸೋಣ’ ಎಂದು ಬಹದ್ದೂರಬಂಡಿ ಸಿಆರ್‌ಪಿ ಹನುಮಂತಪ್ಪ ಕುರಿ ಹೇಳಿದರು.

2021-22 ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಕುರಿತು ಬಹದ್ದೂರಬಂಡಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಮುಖ್ಯಶಿಕ್ಷಕರ ಪೂರ್ವಭಾವಿ ಸಭೆ ಹಾಗೂ ಹೊಸ ಗೊಂಡಬಾಳ ಶಾಲೆ ತಯಾರಿಸಿದ ಇಲಾಖೆ ಯೋಜನೆಗಳನ್ನು ಒಳಗೊಂಡ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣ ಇಲಾಖೆಯ ಆದೇಶದಂತೆ ಯೋಜನೆ-1 ಹಾಗೂ ಯೋಜನೆ -2 ರಂತೆ ಮಕ್ಕಳ ಪಟ್ಟಿಯನ್ನು ಪ್ರತಿಯೊಂದು ಶಾಲೆಯಲ್ಲಿ ತಯಾರಿಸಿ 30 ಮಕ್ಕಳಿಗೆ ಒಬ್ಬರಂತೆ ಮಾರ್ಗದರ್ಶಿ ಶಿಕ್ಷಕರನ್ನು ನಿಯುಕ್ತಿಗೊಳಿಸಿ ಮಕ್ಕಳಿಗೆ ಸೇತುಬಂಧ ಹಾಗೂ ಸಾಮರ್ಥ್ಯಗಳನ್ನು ನೀಡಲು ಪ್ರತಿಯೊಬ್ಬರೂ ಕ್ರಿಯಾಯೋಜನೆ ತಯಾರಿಸಬೇಕು ಎಂದರು.

ADVERTISEMENT

ಅನುಪಾಲನೆ ಮಾಡುವುದರ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳುವ ಸಂವಾದ ಹಾಗೂ ರೇಡಿಯೊ ಪಾಠಗಳನ್ನು ಇಲಾಖೆಯ ವೇಳಾಪಟ್ಟಿಯಂತೆ ಪಾಠ ವೀಕ್ಷಿಸಲು ತಿಳಿಸುವುದರ ಜತೆಗೆ ಪಾಲಕರಿಗೆ ಈ ಕಾರ್ಯಕ್ರಮದ ಕುರಿತಾಗಿ ಜಾಗೃತಿ ಮೂಡಿಸಿ ಸಮುದಾಯದ ಸಹಕಾರದಿಂದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಯಾಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಗೊಂಡಬಾಳ ಶಾಲೆಯು ತಯಾರಿಸಿದ ಇಲಾಖೆ ಯೋಜನೆಗಳ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಶಾಲೆಗಳಿಗೆ ತಳಿರು ತಿರಣಗಳಿಂದ ಶೃಂಗಾರಗೊಳಿಸಿ ಶಾಲಾ ಪ್ರಾರಂಭೋತ್ಸವ ಮಾಡಲು ತಿಳಿಸಿದರು.

ನೌಕರರ ಸಂಘದ ನಿರ್ದೇಶಕ ರವೀಂದ್ರ ಜೋಶಿ, ಮುಖ್ಯಶಿಕ್ಷಕ ಜೆ.ಡಿ.ಲಮಾಣಿ, ಭೀಮಪ್ಪ ಹೂಗಾರ್, ಟಿ.ಗೋವಿಂದಪ್ಪ, ವಿಶ್ವೇಶ್ವರಯ್ಯ, ವೆಂಕಟೇಶ್, ಓಂ ಪ್ರಕಾಶ್, ವಿಜಯಕುಮಾರ್, ಲೀಲಾವತಿ, ಬಸವರಾಜ್,ರಿಜ್ವಾನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.