ಮೊಹರಂ (ಸಾಂದರ್ಭಿಕ ಚಿತ್ರ)
ಕುಷ್ಟಗಿ: ಮೊಹರಂ ಸಂದರ್ಭ ಗ್ರಾಮಾಂತರ ಪ್ರದೇಶದಲ್ಲಿ ಪ್ರಾಥಮಿಕ ಶಾಲೆಗಳ ಬಹಳಷ್ಟು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿರುವುದು ಗೊತ್ತಾಗಿದೆ.
ತರಗತಿ ಕೊಠಡಿಯಲ್ಲಿ ಕುಳಿತು ಪಾಠ ಆಲಿಸಬೇಕಿದ್ದ ಬಾಲಕರು ಮೊಹರಂ ಆಚರಣೆ ಸಂದರ್ಭದಲ್ಲಿ ಹೆಜ್ಜೆ ಕುಣಿತದಲ್ಲಿ ಪಾಲ್ಗೊಂಡು ಪಟ್ಟಣ, ಹಳ್ಳಿ-ಹಳ್ಳಿಗಳಲ್ಲಿ ತಿರುಗುತ್ತಿದ್ದಾರೆ ಎನ್ನಲಾಗಿದೆ. ಪಟ್ಟಣದಲ್ಲಿ ಬುಧವಾರ ಸುರಿಯುತ್ತಿರುವ ಮಳೆಯಲ್ಲಿಯೂ ಮಕ್ಕಳು ಒಂದೇ ಬಣ್ಣದ ಅಂಗಿ ತೊಟ್ಟು, ಬಣ್ಣಬಣ್ಣದ ಕೊಡೆ ಹಿಡಿದು ಹಲಗೆ ಬಡಿಯುತ್ತ ಅಂಗಡಿ, ಹೋಟೆಲ್ ಮುಂದೆ ಹೀಗೆ ರಸ್ತೆಯುದ್ದಕ್ಕೂ ಹೆಜ್ಜೆ ಕುಣಿತ ನಡೆಸಿ ಅಂಗಡಿ ಮಾಲೀರಿಂದ ಹಣಕ್ಕೆ ಕೈಯೊಡ್ಡುತ್ತಿದ್ದ ದೃಶ್ಯ ಕಂಡುಬಂತು.
ಇದು ಕೇವಲ ಪಟ್ಟಣಕ್ಕಷ್ಟೇ ಸೀಮಿತಗೊಂಡಿಲ್ಲ. ಬಹುತೇಕ ಗ್ರಾಮಗಳಲ್ಲಿನ ಸ್ಥಿತಿಯೂ ಇದೇ ಆಗಿದೆ. ಶಾಲೆಗೆ ಚಕ್ಕರ್ ಹೊಡೆಯುವ ಮಕ್ಕಳು ಪಾಠಗಳಿಂದ ವಂಚಿತರಾದರೂ ಸರಿ ಹೆಜ್ಜೆ ಕುಣಿತಕ್ಕೆ ಹೋಗುತ್ತಿದ್ದಾರೆ. 5ರಿಂದ 8ನೇ ತರಗತಿಯ ಮಕ್ಕಳೇ ಹೆಚ್ಚಾಗಿರುತ್ತಾರೆ. ಇದಕ್ಕೆ ಬಹುತೇಕ ಪಾಲಕರ ಪ್ರೋತ್ಸಾಹವೂ ಇರುವುದರಿಂದ ಇದೂ ಒಂದು ರೀತಿಯ ಮಕ್ಕಳ ಶೋಷಣೆಯೂ ಆಗಿದೆ ಎಂದು ಪಟ್ಟಣದ ಸಾರ್ವಜನಿಕರಾದ ಹನುಮೇಶ, ದೇವಪ್ಪ ಇತರರು ಆರೋಪಿಸಿದರು.
ಆದರೆ ಶಾಲೆಗೆ ಮಕ್ಕಳು ಗೈರಾದರೂ ಶಿಕ್ಷಕರು ಅದನ್ನು ಗಮನಿಸದೆ ಹಾಜರಿ ಹಾಕುತ್ತಾರೆ. ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಮಕ್ಕಳು ರಸ್ತೆಯಲ್ಲಿ ಹೆಜ್ಜೆ ಕುಣಿತದಲ್ಲಿ ಭಾಗಿಯಾಗಿದ್ದರೂ ಅಧಿಕಾರಿಗಳೂ ಗಮನಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ‘ಯಾವುದೇ ಹಬ್ಬದ ಸಂದರ್ಭದಲ್ಲಿ ಕೆಲ ಮಕ್ಕಳು ಶಾಲೆಗೆ ಗೈರಾಗುವುದು ಸಹಜ. ಆದರೆ ಶಾಲೆ ಬಿಟ್ಟು ಹೆಜ್ಜೆ ಕುಣಿತದಲ್ಲಿ ಭಾಗಿಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನಿಗಾವಹಿಸಿ ಮಕ್ಕಳು ಶಾಲೆಗೆ ಬರುವಂತೆ ಕ್ರಮ ಕೈಗೊಳ್ಳಲು ತಾಲ್ಲೂಕಿನ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗುತ್ತದೆ. ಅಲ್ಲದೆ ಮಕ್ಕಳನ್ನು ಅನ್ಯ ಕೆಲಸಕ್ಕೆ ಕಳಿಸದೆ ಶಾಲೆಗೆ ಕಳಿಸುವಂತೆ ಪಾಲಕರಲ್ಲಿ ಮನವಿ ಮಾಡುವಂತೆಯೂ ತಿಳಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.