ADVERTISEMENT

ಕುಷ್ಟಗಿ | ರೈತನ ಬದುಕಿಗೆ ‘ಸಿಹಿ’ ನೀಡಿದ ಕಬ್ಬು

ಮಾದರಿಯಾದ ತಳುವಗೇರಾ ರೈತ ತಿಪ್ಪಣ್ಣ ಅವರ ಸಾವಯವ ಕೃಷಿ

ನಾರಾಯಣರಾವ ಕುಲಕರ್ಣಿ
Published 27 ಅಕ್ಟೋಬರ್ 2024, 4:46 IST
Last Updated 27 ಅಕ್ಟೋಬರ್ 2024, 4:46 IST
ಕುಷ್ಟಗಿ ತಾಲ್ಲೂಕು ತಳುವಗೇರಾದ ತಿಪ್ಪಣ್ಣ ಹಡಪದ ಜಮೀನಿನಲ್ಲಿ ಸಾವಯವ ಪದ್ಧತಿಯೊಂದಿಗೆ ಬೆಳೆದಿರುವ ಕಬ್ಬು
ಕುಷ್ಟಗಿ ತಾಲ್ಲೂಕು ತಳುವಗೇರಾದ ತಿಪ್ಪಣ್ಣ ಹಡಪದ ಜಮೀನಿನಲ್ಲಿ ಸಾವಯವ ಪದ್ಧತಿಯೊಂದಿಗೆ ಬೆಳೆದಿರುವ ಕಬ್ಬು   

ಕುಷ್ಟಗಿ: ಕಳೆದ ಒಂದು ದಶಕದಿಂದಲೂ ಸಾವಯವ ಕೃಷಿಯಲ್ಲಿ ಉತ್ಕೃಷ್ಟ ಕಬ್ಬು ಬೆಳೆಯುವಲ್ಲಿ ಯಶಸ್ವಿಯಾಗಿರುವ ತಾಲ್ಲೂಕಿನ ತಳುವಗೇರಾ ಗ್ರಾಮದ ತಿಪ್ಪಣ್ಣ ಹಡಪದ ರೈತಕುಟುಂಬದ ಬದುಕಿಗೆ ಕಬ್ಬು ಸಿಹಿ ತಂದಿದೆ.

ಗಜೇಂದ್ರಗಡ ರಸ್ತೆಯಿಂದ ಬೆಂಚಮಟ್ಟಿ ತಳುವಗೇರಾ ರಸ್ತೆ ಪಕ್ಕದಲ್ಲಿರುವ ಕಟಾವಿಗೆ 4-5 ತಿಂಗಳ ಮೊದಲೇ ಆಳೆತ್ತರ ಬೆಳೆದು ನಿಂತಿರುವ ಕಬ್ಬಿನ ತೋಟ ದಾರಿಹೋಕರ ಗಮನಸೆಳೆಯದೆ ಇರದು. 2 ಕಿ.ಮೀ ವ್ಯಾಪ್ತಿಯಲ್ಲಿ ಜನವಸತಿಯೇ ಇಲ್ಲದ ತೋಟದಲ್ಲಿಯೇ ವಾಸವಾಗಿರುವ ಈ ರೈತ ಕುಟುಂಬದ ರೈತರು ಮತ್ತು ಭೂಮಿಯೊಂದಿಗಿನ ಒಡನಾಟ, ಕೃಷಿ ಬದುಕಿನೊಂದಿಗಿನ ಅವಿನಾಭಾವ ಸಂಬಂಧ, ದುಡಿಮೆ ನಂಬಿ ಬದುಕು ಕಟ್ಟಿಕೊಳ್ಳಬೇಕೆನ್ನುವ ಸದಾಶಯ ಇತರೆ ರೈತರಿಗೆ ಮಾದರಿಯಾಗುವಂತಿದೆ.

ಕೊಳವೆಬಾವಿ ನೀರಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು 7 ಎಕರೆ ನೀರಾವರಿ ಹೊಂದಿರುವ ರೈತ ತಿಪ್ಪಣ್ಣ 6 ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. 9 ವರ್ಷದ ಅವಧಿಯಲ್ಲಿ ತಲಾ ಮೂರರಂತೆ ಕುಳೆ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಕಬ್ಬಿನ ಬೆಳೆಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಸೋಕಿಲ್ಲ. ಕೇವಲ ಕೊಟ್ಟಿಗೆ ಗೊಬ್ಬರವೇ ಆಧಾರ. ಭೂಮಿಗೆ ವಿಷ ಉಣಿಸದೆ ಸಾವಯವದಲ್ಲಿಯೇ ಕಬ್ಬು ಬೆಳೆಸಬೇಕೆನ್ನುವ ಛಲ ರೈತ ತಿಪ್ಪಣ್ಣ ಮತ್ತು ಪತ್ನಿ ಮಲ್ಲಮ್ಮ ಅವರಲ್ಲಿದೆ.

ADVERTISEMENT

ಸದ್ಯ ಮೂರನೇ ಕುಳೆ ಬೆಳೆಯಿದ್ದು ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ. ಅಂತರಬೇಸಾಯ, ಕಳೆ ನಿರ್ವಹಣೆ ಸೇರಿ ಮೂರು ತಿಂಗಳವರೆಗೆ ಮಾತ್ರ ಶ್ರಮ ನಂತರ ಕೇವಲ ನೀರು ಹನಿಸಿದರೆ ಸಾಕು. ಉತ್ತಮ ಬೆಳೆ ಬರುತ್ತದೆ. ಕಬ್ಬಿನ ಬೆಳೆ ತಮ್ಮ ಬದುಕಿನಲ್ಲಿ ಖುಷಿ ತಂದಿದೆ ಎನ್ನುತ್ತಾರೆ ರೈತ ದಂಪತಿ. ಬೇರೆ ಬೆಳೆಯಾದರೆ ಅಧಿಕ ಖರ್ಚು, ಕೂಲಿಕಾರ್ಮಿಕರ ಸಮಸ್ಯೆ, ರೋಗಬಾಧೆ ಇತರೆ ಸಮಸ್ಯೆಗಳಿರುತ್ತವೆ ಎಂದರು.

ವಿಜಯಪುರ ಜಿಲ್ಲೆಯ ಬಾಲಾಜಿ ಶುಗರ್ಸ್ ಕಾರ್ಖಾನೆಯವರು ಟನ್‌ಗೆ ₹2,600ರಂತೆ ಕಬ್ಬು ಖರೀದಿಸಲು ಒಪ್ಪಿಕೊಂಡಿದ್ದಾರೆ. ಈ ಬಾರಿ ಎಕರೆಗೆ ಕನಿಷ್ಠ 30 ಟನ್‌ ಇಳುವರಿ ಬರುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ₹ 1 ಲಕ್ಷ ಮಾತ್ರ ಖರ್ಚು ತಗುಲಿದೆ. ಮೊದಲ ಬೆಳೆಗೆ ಮಾತ್ರ ಬೀಜದ ಕಬ್ಬಿನ ಖರ್ಚು ಇರುತ್ತದೆ ಎಂದು ತಿಪ್ಪಣ್ಣ ವಿವರಿಸಿದರು.

ಕಷ್ಟಕಾರ್ಪಣ್ಯದ ಬದುಕು

ತಮ್ಮ ಹಿರಿಯರ ಕಾಲದಲ್ಲಿ ಇಷ್ಟೇ ಜಮೀನು ಇದ್ದರೂ ಅನ್ನಕ್ಕೆ ಅಭಾವವಿತ್ತು. ಸಂಕಷ್ಟದಲ್ಲಿ ಸವೆಸಿದ ಬದುಕಿನಲ್ಲಿ ಎದುರಾದ ಕಷ್ಟಗಳೇ ಸಂಸಾರಕ್ಕೆ ಅನುಭವದ ಪಾಠ ಕಲಿಸಿವೆ. ಭೂಮಿ ತಾಯಿ ಸೇವೆಯಿಂದ ಬಡತನ ದೂರವಾಗಿದೆ. ನೆಮ್ಮದಿಯ ನಿದ್ರೆಯೇ ನಮ್ಮ ಶ್ರೀಮಂತಿಕೆ ಎನ್ನುತ್ತಾರೆ ತಿಪ್ಪಣ್ಣ, ಮಲ್ಲಮ್ಮ ದಂಪತಿ. ತಮ್ಮ ಪಾರಂಪರಿಕ ವೃತ್ತಿಯನ್ನೂ ಬಿಡದ ತಿಪ್ಪಣ್ಣ ದೇವಿ ಆರಾಧಕರಾಗಿದ್ದು ಆಧ್ಯಾತ್ಮಿಕ ಚಿಂತನೆ ಹೊಂದಿದ್ದಾರೆ. ನಂಬಿ ದುಡಿದರೆ ಭೂತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆ ರೈತ ದಂಪತಿಯದ್ದು.

ದುಡಿಮೆ ನಂಬಿ ಬದುಕಿದ ಕೃಷಿಯಲ್ಲಿ ಖುಷಿಯಿದೆ. ಕಬ್ಬಿನ ಬೇಸಾಯ ನೆಮ್ಮದಿ ತಂದಿದೆ
ಮಲ್ಲಮ್ಮ ಹಡಪದ ರೈತ ಮಹಿಳೆ
ಮಣ್ಣಿನೊಂದಿಗಿನ ಒಡನಾಟದಿಂದ ಎಂದಿಗೂ ಕೇಡಾಗಿಲ್ಲ. ಭೂತಾಯಿ ಕೊಟ್ಟಷ್ಟರಲ್ಲಿಯೇ ಖುಷಿಯಾಗಿದ್ದೇವೆ
ತಿಪ್ಪಣ್ಣ ಹಡಪದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.