ADVERTISEMENT

ಕೊಪ್ಪಳ: ಶಾಲಾ ಮಕ್ಕಳಿಗೆ ಶೇಂಗಾ ಚಿಕ್ಕಿ ಪೂರೈಕೆ

ಎಂಟು ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಠಿಕ ನಿವಾರಣೆಗೆ ಸರ್ಕಾರದ ಕ್ರಮ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 2:43 IST
Last Updated 27 ಜುಲೈ 2022, 2:43 IST

ಕೊಪ್ಪಳ: ಅಪೌಷ್ಠಿಕತೆಯಿಂದ ಬಳಲುತ್ತಿರುವ ರಾಜ್ಯದ ಎಂಟು ಜಿಲ್ಲೆಗಳ 1ರಿಂದ 8ನೇ ತರಗತಿಯ ಶಾಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೌಷ್ಠಿಕ ಆಹಾರ ನೀಡುತ್ತಿದೆ.

ವಿಜಯಪುರ, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕೊಪ್ಪಳ, ಬೀದರ್‌, ರಾಯಚೂರು, ಕಲಬುರ್ಗಿ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 6ರಿಂದ 15 ವರ್ಷದ ವಯಸ್ಸಿನ ತನಕದ ಮಕ್ಕಳಿಗೆ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡುತ್ತಿದೆ.

2019–20ರಲ್ಲಿ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಎನ್‌ಎಫ್‌ಎಚ್‌ಎಸ್‌) ನಡೆಸಿದ ಅಧ್ಯಯನದಲ್ಲಿ ಈ ಎಂಟು ಜಿಲ್ಲೆಗಳ ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ ಇರುವುದು ಕಂಡುಬಂದಿತ್ತು. ಇದರ ನಿವಾರಣೆಗೆ ಸರ್ಕಾರ ‘‍ಪೋಷಣ್‌ ಶಕ್ತಿ ನಿರ್ಮಾಣ್‌’ ಯೋಜನೆಯಡಿ 15,29,713 ಮಕ್ಕಳಿಗೆ ಪೌಷ್ಠಿಕಾಂಶ ನೀಡುತ್ತಿದೆ.

ADVERTISEMENT

ಒಬ್ಬ ವಿದ್ಯಾರ್ಥಿಗೆ ವಾರದಲ್ಲಿ ಎರಡು ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ನೀಡುತ್ತಿದೆ. ಇದೇ ವರ್ಷದ ಜೂನ್‌ನಿಂದ ಸೆಪ್ಟೆಂಬರ್‌ ತನಕ 11 ವಾರ ಮತ್ತು ಅಕ್ಟೋಬರ್‌ನಿಂದ 2023ರ ಫೆಬ್ರುವರಿ ತನಕ 24 ವಾರಗಳ ಅವಧಿಯಲ್ಲಿ ಒಟ್ಟು 48 ದಿನ ಊಟದ ಜೊತೆಗೆ ಹೆಚ್ಚುವರಿ ಪೌಷ್ಠಿಕ ಆಹಾರ ನೀಡಬೇಕು ಎಂದು ಇಲಾಖೆ ಸೂಚನೆ ನೀಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಮುಖ್ಯಸ್ಥೆ ಅನಿತಾ ‘ಮಕ್ಕಳಲ್ಲಿ ಪೌಷ್ಠಿಕಾಂಶ ವೃದ್ಧಿಗೆ ಎಂಟು ಜಿಲ್ಲೆಗಳಲ್ಲಿ ಪೌಷ್ಠಿಕ ಆಹಾರ ನೀಡುವಂತೆ ಸರ್ಕಾರ ಸೂಚಿಸಿದೆ. ಒಂದು ಸಲಕ್ಕೆ ಪ್ರತಿ ವಿದ್ಯಾರ್ಥಿಗೆ ₹6 ನಿಗದಿ ಮಾಡಲಾಗಿದೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಹಾಗೂ ಶೇಂಗಾ ಚಿಕ್ಕಿ ನೀಡಬೇಕು. ಬಾಳೆ ಹಣ್ಣಿನ ಬೆಲೆ ಏರಿಕೆಯಾಗಿದ್ದರೆ ಚಿಕ್ಕಿ ಕೊಡಲಾಗುವುದು’ ಎಂದರು.

ಜಿಲ್ಲಾವಾರು ವಿದ್ಯಾರ್ಥಿಗಳ ಮಾಹಿತಿ

ಜಿಲ್ಲೆ;ಅಪೌಷ್ಠಿಕತೆ ಹೊಂದಿರುವ ಮಕ್ಕಳು;ವಿದ್ಯಾರ್ಥಿಗಳು

ಯಾದಗಿರಿ;ಶೇ 74;1,56,070

ಕಲಬುರ್ಗಿ;ಶೇ 72.4;2,60,824

ಬಳ್ಳಾರಿ;ಶೇ 72.3;1,25,464

ವಿಜಯನಗರ;ಶೇ 72.3;1,48,940

ಕೊಪ್ಪಳ;ಶೇ 70.7;1,73,886

ರಾಯಚೂರು;ಶೇ 70.6;2,33,351

ಬೀದರ್‌;ಶೇ 69.1;1,50,092

ವಿಜಯಪುರ;ಶೇ 68;2,81,086

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.