ADVERTISEMENT

ಕುಷ್ಟಗಿ ‘ಗುರು ಭವನ’ಕ್ಕೆ ಜೀವಕಳೆ

ಶಿಕ್ಷಕರ ಸಾಂಘಿಕ ಪ್ರಯತ್ನಕ್ಕೆ ಫಲ: ಶೈಕ್ಷಣಿಕ ಚಟುವಟಿಕೆಗಳಿಗೆ ವೇದಿಕೆಯಾದ ಕಟ್ಟಡ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 3:58 IST
Last Updated 5 ಜುಲೈ 2021, 3:58 IST
ಕುಷ್ಟಗಿ ಗುರುಭವನದ ಹೊರನೋಟ
ಕುಷ್ಟಗಿ ಗುರುಭವನದ ಹೊರನೋಟ   

ಕುಷ್ಟಗಿ: ವರ್ಷದ ಹಿಂದೆ ಹಾಳು ಬಂಗಲೆಯಂತಾಗಿದ್ದ ‘ಗುರು ಭವನ’ ಕಟ್ಟಡ ಈಗ ಹೊಸರೂಪ ಪಡೆಯುವ ಮೂಲಕ ಜನರ ಗಮನ ಸೆಳೆಯುತ್ತಿದೆ. ಶಿಕ್ಷಕರಲ್ಲೂ ಅಭಿಮಾನ ಮೂಡಿಸಿದೆ.

1998-99ರ ಅವಧಿಯಲ್ಲಿ ಪಟ್ಟಣದ ಕಾಲೇಜು ರಸ್ತೆಯಲ್ಲಿ ನಿರ್ಮಾಣಗೊಂಡಾಗ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಆಶಾಕಿರಣವಾಗಿದ್ದ ಗುರುಭವನದ ಗೋಡೆಗಳಲ್ಲೆಲ್ಲ ಕೆಲವೇ ವರ್ಷಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಶಿಕ್ಷಕರಿಗೆ ತರಬೇತಿ, ಶೈಕ್ಷಣಿಕ ಸಮಾವೇಶ, ಸಭೆ, ಸಮಾರಂಭ ನಡೆಸಲು ತೊಂದರೆ ಆಗುತಿತ್ತು.

ಆದರೆ, ಈಗ ಅದರ ಚಿತ್ರಣ ಸಂಪೂರ್ಣ ಬದಲಾಗಿದೆ. ಗುರು ಭವನಕ್ಕೆ ಮತ್ತೆ ಜೀವಕಳೆ ಬಂದಿದೆ. ಕೊರೊನಾ ಸಮಸ್ಯೆ ಇಲ್ಲದಿದ್ದರೆ ಈ ವೇಳೆಗೆ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು ಎಂದು ಶಿಕ್ಷಕರು ಹೇಳುತ್ತಾರೆ.

ADVERTISEMENT

ಭವನ ಹಾಳಾಗಿದ್ದರೂ ಹೊರಗಿನ ಎರಡು ಕೊಠಡಿಗಳ ಪೈಕಿ ಒಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಇನ್ನೊಂದರಲ್ಲಿ ಕಡೆ ಶಿಕ್ಷಕರ ಪತ್ತಿನ ಸಹಕಾರ ಸಂಘಗಳ ಕಚೇರಿ ಇತ್ತು. ₹20 ಸಾವಿರ ಮೊತ್ತವನ್ನು ಶಿಕ್ಷಕರದ್ದೇ ಆಗಿರುವ ಪತ್ತಿನ ಸಹಕಾರ ಸಂಘ ದೇಣಿಗೆ ರೂಪದಲ್ಲಿ ನೀಡಿತ್ತು.

‘ಪಿಲ್ಲರ್‌ಗಳನ್ನು ಹೊರುತುಪಡಿಸಿ ಉಳಿದ ಗೋಡೆಯನ್ನು ಪುನಃ ನಿರ್ಮಿಸಲಾಗಿದೆ. ಕೆಲ ಸಮಾನ ಮನಸ್ಕ ಶಿಕ್ಷಕರು ಅಂದಾಜು ₹37 ಸಾವಿರ ಖರ್ಚು ಮಾಡಿ ಸುಣ್ಣ, ಬಣ್ಣ ಬಳಿದು ಸುಂದರ ರೂಪ ನೀಡಲಾಗಿದೆ’ ಎಂದು ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಲಕ್ಕಲಕಟ್ಟಿ ಹೇಳುತ್ತಾರೆ.

ಶಿಕ್ಷಕರ ದೇಣಿಗೆ ಹಣದಲ್ಲಿ ಗುರುಭವನದ ಒಳ ಆವರಣ ಸುಂದರವಾಗಿ ನಿರ್ಮಿಸಲಾಗಿದೆ. ವೇದಿಕೆ ಬಲಭಾಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆಳೆತ್ತರದ ಭಾವಚಿತ್ರ ಅಳವಡಿಸಲಾಗಿದೆ. 200 ಆಸನಗಳ ಸಭಾಂಗಣ, ಪುಟ್ಟ ಸಭಾಂಗಣ, ವೇದಿಕೆ ಸೌಲಭ್ಯ ಇದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಪೂಜಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.