ADVERTISEMENT

ರುದ್ರಭೂಮಿ ಒತ್ತುವರಿ ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 10:39 IST
Last Updated 15 ಸೆಪ್ಟೆಂಬರ್ 2022, 10:39 IST
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರುದ್ರಭೂಮಿ ಒತ್ತುವರಿ ಸ್ಥಳಕ್ಕೆ ತಹಶೀಲ್ದಾರ್ ಯು.ನಾಗರಾಜ ಭೇಟಿ ನೀಡಿ ಪರಿಶೀಲಿಸಿರುವುದು
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರುದ್ರಭೂಮಿ ಒತ್ತುವರಿ ಸ್ಥಳಕ್ಕೆ ತಹಶೀಲ್ದಾರ್ ಯು.ನಾಗರಾಜ ಭೇಟಿ ನೀಡಿ ಪರಿಶೀಲಿಸಿರುವುದು   

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮಕ್ಕೆ ರುದ್ರಭೂಮಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಕಡೆಬಾಗಿಲು ಕ್ರಾಸ್ ಬಳಿ ಈಚೆಗೆ ಪ್ರತಿಭಟನೆ ನಡೆಸಿದ್ದು, ಇದರ ಭಾಗವಾಗಿ ತಾಲ್ಲೂಕು ಆಡಳಿತ ಅಧಿಕಾರಿಗಳು ಬುಧವಾರ ರುದ್ರಭೂಮಿ ಸ್ಥಳಕ್ಕೆ ಭೇಟಿ‌ ನೀಡಿದರು.

ಆನೆಗೊಂದಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಲು ಭೂಮಿ ಇಲ್ಲ. ಶವ ಹೂಳಲು ತೊಂದರೆಯಾಗಿದೆ. ಸರ್ಕಾರದಿಂದ ಸರ್ವೆ 194ರಲ್ಲಿ 2 ಎಕರೆ ಭೂಮಿ ನೀಡಲಾಗಿದೆ ಎನ್ನಲಾಗುತ್ತಿದೆ. ಅಂತ್ಯ ಸಂಸ್ಕಾರ ಮಾಡಲು 20 ಗುಂಟೆ ಭೂಮಿ ಇಲ್ಲ. ನದಿಪಾತ್ರದಲ್ಲಿ ತಡೆಗೋಡೆಯಾಗಿ ಹಿಂದಿನ ರಾಜರು ಕೋಟೆ ನಿರ್ಮಿಸಿದ್ದು, ಈ ಸ್ಥಳದಲ್ಲಿ ಶವ ಸಂಸ್ಕಾರಕ್ಕೆ ಗುಂಡಿಗಳೇ ಬೀಳುವುದಿಲ್ಲ‌. ನದಿ ಪ್ರವಾಹದಿಂದ ಎಲ್ಲ ಮಣ್ಣು ಕೊಚ್ಚಿ ನೀರು ಪಾಲಾಗಿದೆ. ತಾಲ್ಲೂಕು ಆಡಳಿತ ಬೇರಡೆಗೆ 2ಎಕರೆ ರುದ್ರಭೂಮಿ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ವೇಳೆ ಕಂದಾಯ ಅಧಿಕಾರಿ ಮಂಜುನಾಥ ಹಿರೇಮಠ ಮಾತನಾಡಿ, ಸರ್ಕಾರದಿಂದ ಒದಗಿಸಿಕೊಟ್ಟ ರುದ್ರಭೂಮಿ ಸ್ಥಳ ಇದೇ ಆಗಿದ್ದು, ಜಾಲಿ, ಮುಳ್ಳುಗಳಿಂದ ಬೆಳೆದಿದೆ. ಮೊದಲಿಗೆ ಇದನ್ನ ಸ್ವಚ್ಛಗೊಳಿಸಿ ಎಂದರು. ಈ ವೇಳೆ ಗ್ರಾಮಸ್ಥರು 2 ಎಕರೆ ಸ್ಥಳ ಎಲ್ಲಿದೆ ಎಂದು ಪ್ರಶ್ನಿಸಿದರು.

ADVERTISEMENT

ಜೆಸಿಬಿಯಿಂದ ಜಾಲಿ, ಮುಳ್ಳುಕಂಟಿ ತೆರವಿನ ವೇಳೆ ಕೋಟೆ ಕಲ್ಲುಗಳು ಹೊರ ಬಂದಿದ್ದು, ಕೂಡಲೇ ನಿಲ್ಲಿಸಿ, ತಹಶೀಲ್ದಾರ್ ಗಮನಕ್ಕೆ ತರಲಾಯಿತು. ಕೂಡಲೇ ಘಟನಾ ಸ್ಥಳಕ್ಕೆ ತಹಶೀಲ್ದಾರ‌್ ಯು.ನಾಗರಾಜ ಭೇಟಿ ನೀಡಿ ರುದ್ರಭೂಮಿ ಸ್ಥಳ ಪರಿಶೀಲಿಸಿದರು.

ನಂತರ ಸರ್ವೆ ಸಿಬ್ಬಂದಿಯನ್ನ ಕರೆಯಿಸಿ ಈಗಾಗಲೇ ಸರ್ವೆ 194ರಲ್ಲಿ ರುದ್ರಭೂಮಿಗೆ 2 ಎಕರೆ ಸ್ಥಳ ಕಾಯ್ದಿರಿಸಿದ್ದು, ಈ ಸ್ಥಳ ಒತ್ತುವರಿ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಸರ್ವೆ ನಂಬರ್ 194, 196ರಲ್ಲಿ ಸರ್ವೆ ನಡೆಸಿ ವರದಿ ನೀಡಿ ಎಂದರು.

ಈ ವೇಳೆ ರಾಜವಂಶಸ್ಥ ಕೃಷ್ಣದೇವರಾಯ, ಆನೆಗೊಂದಿ ಗ್ರಾ.ಪಂ ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ, ಮಲ್ಲಿಕಾರ್ಜುನ, ಟಿ.ಜಿ ಬಾಬು, ಕುಪ್ಪರಾಜ್, ವೆಂಕಟೇಶ ಬಾಬು, ಕಂಪ್ಲಿ ಮಾಬುಹುಸೇನ್, ಕೆ.ಮುರಳಿ, ನರಸಿಂಹ ಸೇರಿದಂತೆ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.