ADVERTISEMENT

ಅಂಜನಾದ್ರಿಯೇ ಹನುಮ ಜನಿಸಿದ ನಾಡು: ಸಂಸದ ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 4:49 IST
Last Updated 4 ಏಪ್ರಿಲ್ 2022, 4:49 IST
ಗಂಗಾವತಿ ನವಬೃಂದಾವನ ಗಡ್ಡೆಯಲ್ಲಿನ ಯತಿಗಳಿಗೆ ಸಂಸದ ತೇಜಸ್ವಿ ಸೂರ್ಯ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಮುಖಂಡರು ಇದ್ದರು
ಗಂಗಾವತಿ ನವಬೃಂದಾವನ ಗಡ್ಡೆಯಲ್ಲಿನ ಯತಿಗಳಿಗೆ ಸಂಸದ ತೇಜಸ್ವಿ ಸೂರ್ಯ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಮುಖಂಡರು ಇದ್ದರು   

ಗಂಗಾವತಿ: ಹನುಮನ ಜನ್ಮಸ್ಥಳ ಅಂಜನಾದ್ರಿಯೇ ಎಂಬುದಕ್ಕೆ ರಾಮಾಯಣದಲ್ಲಿನ ಉಲ್ಲೇಖಗಳ ಜೊತೆಗೆ ಸಾಕಷ್ಟು ಇತಿಹಾಸದ ಮೂಲಗಳು ಲಭ್ಯವಿವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ತಾಲ್ಲೂಕಿನ ಆನೆಗೊಂದಿ ಗ್ರಾಮದಲ್ಲಿನ ನವವೃಂದಾವನ ಗಡ್ಡೆಗೆ ಭಾನುವಾರ ಭೇಟಿ ಮಾತನಾಡಿದರು.

ರಾಮಾಯಣ ಕಾಲದಲ್ಲಿ ರಾಮನಿಗೆ ಹನುಮ ಕಿಷ್ಕಿಂದೆಯಲ್ಲಿ ಸಹಾಯ ಮಾಡಿದ ಎನ್ನುವುದನ್ನು ವಾಲ್ಮೀಕಿ ಬರೆದ ರಾಮಾಯಣ ಪುಸ್ತಕದಲ್ಲಿ ಕಾಣಬಹುದು. ರಾಮಾಯಣದ ಪ್ರಕಾರ ಹನುಮ ಜನಿಸಿದ್ದು, ಕಿಷ್ಕಿಂದ ನಾಡಿನಲ್ಲಿ ಈ ಕುರಿತು ಯಾವ ಅನುಮಾನವು ಇಲ್ಲ ಎಂದರು.

ADVERTISEMENT

ಭಕ್ತರು ಅಯೋಧ್ಯೆಯ ರಾಮ ಕ್ಷೇತ್ರಕ್ಕೆ ಎಷ್ಟು ಪ್ರಮುಖ್ಯತೆ ನೀಡುತ್ತಾರೋ, ಅಷ್ಟೇ ಪ್ರಾಮುಖ್ಯತೆ ಕಿಷ್ಕಿಂದ ಕ್ಷೇತ್ರಕ್ಕೆ ಹನುಮ ಭಕ್ತರು ನೀಡುತ್ತಾರೆ. ಹಾಗಾಗಿ ಹಲವು ವರ್ಷಗಳಿಂದ ಮಧ್ಯಪ್ರದೇಶ, ಉತ್ತರ ಪ್ರದೇಶಗಳಿಂದ ರಾಮ ಭಕ್ತರು ಹನುಮನ ದರ್ಶನ ಪಡೆಯಲು ಅಂಜನಾದ್ರಿಗೆ ಆಗಮಿಸುತ್ತಾರೆ. ಸದ್ಯ ಬಿಜೆಪಿ ಪಕ್ಷದಿಂದ ಭಾರತ ದರ್ಶನ ಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡು ಬಿಜೆಪಿ ಯುವ ಮೋರ್ಚಾದ ವಿವಿಧ ರಾಜ್ಯಗಳ 40 ಜನ ಸದಸ್ಯರನ್ನು ಕಟ್ಟಿಕೊಂಡು ಭಾರತದ ಕ್ಷೇತ್ರಗಳ ದರ್ಶನ ಯಾತ್ರೆ ನಡೆಸಲಾಗುತ್ತಿದೆ ಎಂದರು.

ಈಗಾಗಲೇ ಹಂಪಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ದರ್ಶನ ಪಡೆದು ಮಾಹಿತಿ ಪಡೆಯಲಾಗಿದೆ. ಸದ್ಯ ಅಂಜನಾದ್ರಿ ಆಂಜನೇಯಸ್ವಾಮಿ ದೇವಸ್ಥಾನ, ನವ ವೃಂದಾವನಗಡ್ಡೆಗೆ ಭೇಟಿ ನೀಡಲಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸಿದ ಬಿಜೆಪಿ ಪಕ್ಷದ ಮುಖಂಡರಿಗೆ ಇಲ್ಲಿನ ಕ್ಷೇತ್ರಗಳ ಮಾಹಿತಿ ನೀಡಲಾಗುವುದು ಎಂದರು.

ನಂತರ ಅಂಜನಾದ್ರಿ ಆಂಜನೇಯಸ್ವಾಮಿ ದೇವಸ್ಥಾನ, ನವವೃಂದಾವನ ಗಡ್ಡೆಯಲ್ಲಿಯ ಯತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದುಕೊಂಡರು.

ಈ ವೇಳೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಪಕ್ಷದ ಮುಖಂಡರಾದ ಯಮನೂರ ಚೌಡ್ಕಿ, ಶಿವಕುಮಾರ ಹರಿಕೇರಿ, ಚೆನ್ನಪ್ಪ ಮಳಗಿ, ಸಂತೋಷ ಕೆಲೋಜಿ, ವಿನಯ ಗಾಳಿ, ವಾಸುದೇವ ನವಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.