ADVERTISEMENT

ಕೊಳವೆಬಾವಿ ಹಗರಣ; ಕ್ರಮಕ್ಕೆ ತಾಕೀತು

ತನಿಖೆಗೆ ರಾಜಕಾರಣಿಗಳು, ಎಂಜಿನಿಯರ್‌ಗಳೇ ಅಡ್ಡಿ; ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 4:12 IST
Last Updated 4 ಸೆಪ್ಟೆಂಬರ್ 2022, 4:12 IST

ಕುಷ್ಟಗಿ: ಇಲ್ಲಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗದ ವತಿಯಿಂದ ತಾಲ್ಲೂಕಿನ ಬಹಳಷ್ಟು ಹಳ್ಳಿಗಳಲ್ಲಿನ ಜನರಿಗೆ ಕುಡಿಯುವ ನೀರು ಪೂರೈಸುವ ನೆಪದಲ್ಲಿ ಇಲ್ಲದ ಕೊಳವೆಬಾವಿಗಳ ಹೆಸರಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ.

ಈ ಕುರಿತು ‘ಕೊಳವೆಬಾವಿ ನಾಪತ್ತೆ, ಹಣ ದುರ್ಬಳಕೆ’ ಶೀರ್ಷಿಕೆಯಲ್ಲಿ ಆ.1ರ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಉಲ್ಲೇಖಿಸಿರುವ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆ.2 ರಂದು ಪತ್ರ ಬರೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಅಗತ್ಯ ಕ್ರಮಕೈಗೊಳ್ಳಬೇಕು ಮತ್ತು ಅದರ ಬಗ್ಗೆ ಪಾಲನಾವರದಿ ಸಲ್ಲಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ ವಿಭಾಗ ಹಾಗೂ ಕುಷ್ಟಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ನಿಯಮಗಳ ಪ್ರಕಾರ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.

ADVERTISEMENT

2018-19 ರಿಂದ 2022-23ನೇ ಹಣಕಾಸು ವರ್ಷದ ಅವಧಿಯಲ್ಲಿ ಸುಮಾರು 350ಕ್ಕೂ ಅಧಿಕ ಸಂಖ್ಯೆಯಲ್ಲಿ ಕೊಳವೆಬಾವಿಗಳನ್ನು ತೋಡಿರುವುದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಎರಡು ಬೋರವೆಲ್‌ ಏಜೆನ್ಸಿಗಳಿಗೆ ಹಣ ಪಾವತಿಸಲಾಗಿದೆ. ಆದರೆ ಕೊಳವೆಬಾವಿಗಳನ್ನೇ ತೋಡಿಲ್ಲ ಎಂಬ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು.

ಈ ಕುರಿತು ಕಳೆದ ಆಗಸ್ಟ್‌ ತಿಂಗಳಲ್ಲಿ ಒಂದು ವಾರದ ಅವಧಿಯಲ್ಲಿ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ್ದ ಉಪ ವಿಭಾಗದ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ ಬಹುತೇಕ ಹಳ್ಳಿಗಳಲ್ಲಿ ಕೊಳವೆಬಾವಿಗಳೇ ಇಲ್ಲ ಎಂಬುದನ್ನು ಪತ್ತೆಹಚ್ಚಿದ್ದರು. ಈ ವಿಷಯ ಪತ್ರಿಕೆಮೂಲಕ ಬಹಿರಂಗ ಗೊಳ್ಳುತ್ತಿದ್ದಂತೆ ದಿಗಿಲುಗೊಂಡ ಪ್ರಭಾವಿ ಚುನಾಯಿತ ಪ್ರತಿನಿಧಿಯೊಬ್ಬರು ಅಕ್ರಮದ ತನಿಖೆಗೆ ಮುಂದಾಗಿದ್ದ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಹಾಗಾಗಿ ಈವರೆಗೂ ತನಿಖೆ ಪ್ರಗತಿ ಕಂಡಿಲ್ಲ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಮೂಲಗಳು ತಿಳಿಸಿವೆ.

ಈ ಅಕ್ರಮದ ದೂರಿಗೆ ಸಂಬಂಧಿಸಿ ದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ಬಂದಿರುವುದರಿಂದ ಉಪ ವಿಭಾಗದ ಸಿಬ್ಬಂದಿ ಪೇಚಿಗೆ ಸಿಲುಕಿದ್ದಾರೆ. ಒಂದೆಡೆ ಸರ್ಕಾರದ ಆದೇಶ ಇನ್ನೊಂದೆಡೆ ರಾಜಕಾರಣಿಗಳ ಮತ್ತು ಕೆಲ ಹಿರಿಯ ಎಂಜಿನಿಯರ್‌ಗಳ ಒತ್ತಡದಿಂದ ಎಂಜಿನಿಯರ್‌ಗಳು ಇಕ್ಕಟ್ಟಿ ನಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.