
ಹನುಮಸಾಗರ: ಗ್ರಾಮದ ಸರ್ಕಾರಿ ಶಾಲೆ, ಸಂಕೀರ್ಣಗಳ ಬಳಿ ನಿರ್ಮಾಗೊಂಡಿರುವ ಸಾರಿಗೆ ಬಸ್ ಪ್ರಯಾಣಿಕರ ತಂಗುದಾಣ ಅವ್ಯವಸ್ಥೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕುಷ್ಟಗಿ ಮತ್ತು ಇಳಕಲ್ ಮಾರ್ಗದ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣ ನಿರ್ಮಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ಅದು ಪ್ರಯಾಣಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕಟ್ಟಡ ಅಲ್ಲಲ್ಲಿ ಶಿಥಿಲಗೊಂಡಿದ್ದು, ಒಳಗಿನ ಆವರಣ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಕಸ, ವಿವಿಧ ರೀತಿಯ ತ್ಯಾಜ್ಯದಿಂದ ಮಲೀನಗೊಂಡಿದ್ದರಿಂದ ಇದರಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪ, ಮಳೆಗಾಲದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಯಾಣಿಕರಿಗೆ ಆಶ್ರಯ ನೀಡಬೇಕಿರುವ ತಂಗುದಾಣ ಅವ್ಯವಸ್ಥೆಯ ಆಗರವಾಗಿ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಪ್ರಯಾಣಿಕರು ದೂರಿದರು.
ಅಷ್ಟೇ ಅಲ್ಲದೇ ಶೌಚಾಲಯದ ಗುಂಡಿ, ತ್ಯಾಜ್ಯ ಹೀರುವ ಯಂತ್ರಗಳ ಮಾಲೀಕರು ತಮ್ಮ ಪ್ರಚಾರಕ್ಕಾಗಿ ತಂಗುದಾಣದ ಎಲ್ಲ ಗೋಡೆಗಳ ತುಂಬ ಅಸಹ್ಯ ರೀತಿಯಲ್ಲಿ ಬರಹಗಳನ್ನು ಬರೆದು ಅಂದಗೆಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಪ್ರಯಾಣಿಕರು ಅಲ್ಲಿಗೆ ಬರುವುದೇ ಇಲ್ಲ. ಹಾಗಾಗಿ ಬಸ್‌ಗಳೂ ಸಹ ಅಲ್ಲಿ ನಿಲ್ಲುವುದಿಲ್ಲ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ಪ್ರಯಾಣಿಕರು ಬಸ್ ಏರುವ ಸಮಸ್ಯೆ ಎದುರಾಗಿದೆ. ತಂಗುದಾಣವನ್ನು ದುರಸ್ತಿಗೊಳಿಸಿ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿ ಮುಂದಾಗಬೇಕು. ಅಲ್ಲದೆ ಎಲ್ಲ ಬಸ್‌ಗಳು ನಿಲುಗಡೆಗೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಸ್ಥಳೀಯ ನಿವಾಸಿ ಖಲೀಲ್ ಅಹ್ಮದ್ ಈ ಕುರಿತು ಪ್ರತಿಕ್ರಿಯಿಸಿ ‘ಹಲವು ವರ್ಷಗಳ ಹಿಂದೆ ಬಸ್ ತಂಗುದಾಣ ನಿರ್ಮಿಸಲಾಗಿದ್ದು, ಶಿಕ್ಷಕರಿಗೆ, ಮಕ್ಕಳಿಗೆ ಹಾಗೂ ಇಲ್ಲಿಯ ಹೊಸ ಬಡಾವಣೆ ಜನರಿಗೆ ಅನುಕೂಲವಾಗುತ್ತಿಲ್ಲ. ಇಲ್ಲಿ ಯಾವ ಬಸ್ಸುಗಳು ನಿಲ್ಲುವುದಿಲ್ಲ, ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ತ್ವರಿತವಾಗಿ ಇದನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿದರು.
ಹನುಮಸಾಗರದ ತಂಗುದಾಣದ ಬಳಿಯೇ ಬಸ್ ನಿಲ್ಲಿಸಲು ಚಾಲಕರು ಹಾಗೂ ನಿರ್ವಾಹಕರಿಗೆ ಸೂಚನೆ ಕೊಡುತ್ತೇನೆ. - ಸುಂದರಗೌಡ ಪಾಟೀಲ ಘಟಕ ವ್ಯವಸ್ಥಾಪಕರು ಕುಷ್ಟಗಿ
ಹನುಮಸಾಗರದಲ್ಲಿ ಹೆಸರಿಗಷ್ಟೇ ಬಸ್ ತಂಗುದಾಣವಿದ್ದು ಇದು ಉಪಯೋಗಕ್ಕೆ ಬರುತ್ತಿಲ್ಲ. ಜನರ ಉಪಯೋಗಕ್ಕೆ ಬಾರದ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ.- ವಿರೂಪಾಕ್ಷಪ್ಪ ಪಟ್ಟಣಶೆಟ್ಟರ್ ಸ್ಥಳೀಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.