ADVERTISEMENT

ಕೊರೊನಾ ತಂದೊಡ್ಡಿದ ಸಂಕಷ್ಟ: ಅಲೆಮಾರಿಗಳ ಬದುಕಾಯ್ತು ಮತ್ತಷ್ಟು ದುಸ್ತರ

ಗ್ರಾಮದೊಳಕ್ಕೆ ಬಿಟ್ಟುಕೊಳ್ಳಲು ಜನರ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 12:23 IST
Last Updated 18 ಜುಲೈ 2020, 12:23 IST
ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಕಾಯಕ ನಿರತ ಕೊರಮ ಸಮುದಾಯ
ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಕಾಯಕ ನಿರತ ಕೊರಮ ಸಮುದಾಯ   

ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮ ಅನೇಕ ಅಲೆಮಾರಿಗಳಿಗೆ ಬದುಕು ಕಲ್ಪಿಸಿಕೊಟ್ಟಿದೆ. ಪ್ರಮುಖವಾಗಿ ಭಜಂತ್ರಿ, ಕೊರವ ಜನಾಂಗದ ಜನರು ಸಣ್ಣಪುಟ್ಟ ಉದ್ಯೋಗ ಮಾಡಿ ಊರು, ಊರು ಅಲೆದು ವಸ್ತುಗಳನ್ನು ಮಾರಾಟ ಮಾಡಿ ಹೊಟ್ಟೆ ಹೊರೆಯುತ್ತಿದ್ದಾರೆ.

ಈಗ ಕೆಲವು ಗ್ರಾಮಸ್ಥರು ಕೋವಿಡ್ ಸೋಂಕಿನ ಭಯದಿಂದ ಇವರನ್ನು ಗ್ರಾಮದಲ್ಲಿ ಬಿಟ್ಟುಕೊಳ್ಳುತ್ತಿಲ್ಲ. ಪರಿಣಾಮವಾಗಿ ತುತ್ತಿನ ಚೀಲ ತುಂಬಿಸಿಕೊಳ್ಳುವುದು ಇವರಿಗೆ ಕಷ್ಟವಾಗಿದೆ.ಅಲೆಮಾರಿ ಜನಾಂಗಕ್ಕೆ ಸೇರಿದ ಇವರು ಏಳೆಂಟು ದಶಕಗಳಿಂದ ಗ್ರಾಮದಲ್ಲೇ ನೆಲೆಸಿದ್ದಾರೆ. ಬಿದರಿನ ಬುಟ್ಟಿ, ಹುಲ್ಲಿನ ಪೊರಕೆ, ಬಳ್ಳಿಯ ಹಗ್ಗ ಸೇರಿದಂತೆ ಸಣ್ಣಪುಟ್ಟ ಸಾಮಗ್ರಿಗಳನ್ನು ಮಾರಾಟ ಮಾಡಿ, ಅದರಿಂದ ಬಂದಂ ಹಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಇವರು ಕೆಲವೊಮ್ಮೆ ಭಿಕ್ಷೆ ಬೇಡುವುದು ಉಂಟು. ಪ್ರಸ್ತುತಕೊರೊನಾ ಮಹಾಮಾರಿಯು ಎಲ್ಲೆಡೆಯೂ ಹಬ್ಬಿದ್ದು ಭಜಂತ್ರಿ ಜನಾಂಗದವರು ಹಳ್ಳಿಗಳಿಗೆ ವ್ಯಾಪಾರಕ್ಕೆ ಹೋಗಲು ಆಗುತ್ತಿಲ್ಲ. ಹೋದರೂ ಹಳ್ಳಿಗಳಲ್ಲಿ ಬೇರೆ ಊರೂಗಳಿಂದ ಬಂದವರಿಂದ ವಸ್ತುಗಳನ್ನು ಕೊಳ್ಳುವುದಿರಲಿ ಊಟ ಕೇಳಿದರೂ ಇವರಿಗೆ ಯಾರೂ ಊಟ ಕೊಡುವುದಿಲ್ಲ. ನಮ್ಮೂರಿಗೆ ಬರಬೇಡಿ' ಎಂದು ಸ್ಥಳೀಯರು ಹೇಳುತ್ತಾರೆ. ಇದರಿಂದಾಗಿ ಇವರ ಜೀವನ ಮತ್ತೊಷ್ಟು ತೊಂದರೆಗೆ ಸಿಲುಕಿದೆ.

ADVERTISEMENT

'ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇವರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಕೈತೊಳೆದುಕೊಂಡಿದ್ದಾರೆ. ಈ ಜನರಿಗೆ ಇರುವ ಅನೇಕ ಯೋಜನೆಗಳನ್ನು ಮಂಜೂರು ಮಾಡಿಸಿ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವಲ್ಲಿ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕಿದೆ. ಆದರೆ ಗ್ರಾಮದ ಅಲೆಮಾರಿ ಜನರ ಕೂಗು ಇಲಾಖೆಗೆ ಕೇಳುತ್ತಿಲ್ಲ' ಎನ್ನುತ್ತಾರೆ ಯುವ ಮುಖಂಡ ಮೌನೇಶ ಕಿನ್ನಾಳ.

ಆಹಾರದ ಕಿಟ್‌ಗಳು ಅನೇಕ ಕುಟುಂಬಗಳಿಗೆ ತಲುಪಿಲ್ಲ. ಪಡಿತರ ನೀಡುವಲ್ಲಿ ಕೂಡಾ ಕೆಲವು ಕಡೆ ತಾರತಮ್ಯ ಮತ್ತು ತಾಂತ್ರಿಕ ತೊಂದರೆಯಾಗಿದೆ. ಕೆಲಸ ಮಾಡಿ ಹಣ ಗಳಿಸಬೇಕು ಎಂಬ ಸದುದ್ದೇಶ ಸಮಾಜದ ಜನರಲ್ಲಿ ಇದ್ದರೂ ಇದ್ದ ಸಾಮಗ್ರಿಗಳನ್ನು ಕೊಳ್ಳುವವರು ಇಲ್ಲ.

ನಗರ ಪ್ರದೇಶದಲ್ಲಿ ಲಾಕ್‌ಡೌನ್‌ ಇದ್ದರೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನಡೆದುಕೊಂಡೇ ಬರುತ್ತಾರೆ. ಕೆಲವರು ಪೊರಕೆ, ಬುಟ್ಟಿ ಸೇರಿದಂತೆ ಸಣ್ಣ, ಪುಟ್ಟ ಸಾಮಗ್ರಿ ಖರೀದಿಸಿದರೆ ಅನುಕೂಲವಾಗುತ್ತದೆ.

ಸಂಬಂಧಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿವಿಧ ಸೌಲಭ್ಯಗಳ ಜೊತೆ ಅವರು ಶ್ರಮದಿಂದ ತಯಾರಿಸಿದ ಸಾಮಗ್ರಿಗಳಾದ ಹಗ್ಗ, ಬಿದರಿನ ಬುಟ್ಟಿ ಅವುಗಳಿಗೆ ಮಾರುಕಟ್ಟೆ ಒದಗಿಸಬೇಕಾದ ಕೆಲಸ ಇಲಾಖೆಯದ್ದು, ತುರ್ತಾಗಿ ಈ ಜನಾಂಗದ ನೆರವಿಗೆ ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.