ADVERTISEMENT

ಧರ್ಮಗ್ರಂಥಗಳಲ್ಲಿದೆ ಸಹಬಾಳ್ವೆ, ಸಾಮರಸ್ಯದ ಸಂದೇಶ: ಹುಸೇನ್‌ ಕಂದಗಲ್‌

ಕನ್ನಡದಲ್ಲಿ ಕುರ್‌ಆನ್‌ ಪ್ರವಚನದಲ್ಲಿ ಲಾಲ್‌ ಹುಸೇನ್‌ ಕಂದಗಲ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:37 IST
Last Updated 26 ಆಗಸ್ಟ್ 2025, 7:37 IST
ಕುಷ್ಟಗಿಯಲ್ಲಿ ನಡೆದ ಕನ್ನಡದಲ್ಲಿ ಕುರ್‌ಆನ್‌ ಪ್ರವಚನ ಕಾರ್ಯಕ್ರಮದಲ್ಲಿ ಲಾಲ್‌ ಹುಸೇನ್‌ ಕಂದಗಲ್‌ ಉಪನ್ಯಾಸ ನೀಡಿದರು. ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕ ಕೆ.ಶರಣಪ್ಪ ಇತರರು ಉಪಸ್ಥಿತರಿದ್ದರು
ಕುಷ್ಟಗಿಯಲ್ಲಿ ನಡೆದ ಕನ್ನಡದಲ್ಲಿ ಕುರ್‌ಆನ್‌ ಪ್ರವಚನ ಕಾರ್ಯಕ್ರಮದಲ್ಲಿ ಲಾಲ್‌ ಹುಸೇನ್‌ ಕಂದಗಲ್‌ ಉಪನ್ಯಾಸ ನೀಡಿದರು. ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕ ಕೆ.ಶರಣಪ್ಪ ಇತರರು ಉಪಸ್ಥಿತರಿದ್ದರು   

ಕುಷ್ಟಗಿ: ‘ಧರ್ಮವೆಂದರೆ ಜನಮನಗಳನ್ನು ಒಂದುಗೂಡಿಸುವುದು. ಧರ್ಮಗಳು, ಧರ್ಮಗ್ರಂಥಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗದೆ ಅವುಗಳಲ್ಲಿನ ಸಾರವನ್ನು ಅರಿತು ನಡೆಯಬೇಕು. ಕುರ್‌ಆನ್‌ ಪ್ರವಚನದ ಮಾದರಿಯಲ್ಲಿಯೇ ವೇದ, ಭಗವದ್ಗೀತೆ, ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಚನಗಳೂ ನಡೆಸುವ ಮೂಲಕ ಸಹಬಾಳ್ವೆಗೆ ಮುಂದಾಗುವುದು ಶ್ರೇಷ್ಠತೆ ಎನಿಸಿಕೊಳ್ಳುತ್ತದೆ’ ಎಂದು ಕುರ್‌ಆನ್‌ ಪ್ರವಚನಕಾರ ಲಾಲ್‌ ಹುಸೇನ್‌ ಕಂದಗಲ್‌ ಹೇಳಿದರು.

ಪಟ್ಟಣದಲ್ಲಿ ಮುಸ್ಲಿಂ ಯುವ ಸಮಿತಿ, ಜಮಾತೆ ಇಸ್ಲಾಮಿ ಹಿಂದ್‌ ಸಹಯೋಗದಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡದಲ್ಲಿ ಕುರ್‌ಆನ್‌ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್‌ ಹಾಗೂ ಅವರ ಸಂದೇಶಗಳು ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಇಸ್ಲಾಂನಲ್ಲಿ ಕೋಮುವಾದ ಇಲ್ಲ. ಬಸವಣ್ಣನವರ ಸಂದೇಶದಂತೆ ಮಾನವೀಯತೆ, ಆತ್ಮೀಯತೆ, ಸಮಾನತೆ ಭ್ರಾತೃತ್ವದಿಂದ ಬದುಕು ಸಾಗಿಸುವ ಸಂದೇಶವಿದೆ. ಅದರಲ್ಲಿ ಸಮಾನತೆ ಆದರ್ಶ ಕಾಣಬಹುದಾಗಿದೆ. ಭಾರತದ ಏಕತೆ ಧರ್ಮ ನಿಷ್ಠೆ, ಸತ್ಯ, ನ್ಯಾಯದ ಪರ ಪ್ರಜ್ಞೆ ನಮ್ಮಲ್ಲಿ ಜಾಗೃತಿಗೊಳ್ಳಬೇಕು. ಜಾತಿಗಿಂತ ದೇಶ ಬೆಳೆಯಬೇಕು ಎಂಬ ಹೃದಯ ವೈಶಾಲ್ಯತೆಯಲ್ಲಿಯೇ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ’ ಎಂದು ಹೇಳಿದರು.

ಶಿರೂರಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಕೆ.ಶರಣಪ್ಪ, ವಕೀಲ ಫಕೀರಪ್ಪ ಚಳಗೇರಿ, ಮೌಲಾಸಾಬ್ ಗುಮಗೇರಿ ಇತರರು ಮಾತನಾಡಿದರು. ಸಯ್ಯದ್ ಅತ್ತಾರ, ಬಿ.ಎಂ. ಜೋಷಿ, ಬಾಲಾಜಿ ಬಳಿಗಾರ, ಮೋಹನಲಾಲ್‌ ಜೈನ್‌, ನಬಿಸಾಬ್ ಕುಷ್ಟಗಿ, ಡಾ.ಶೇಖ ಜವ್ವಾದ ಹುಸೇನ್‌, ಡಾ.ಶಾಮೀದ ದೋಟಿಹಾಳ, ವಕೀಲ ಅಮರೇಗೌಡ ಪಾಟೀಲ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು. ಮೆಹಬೂಬ್‌ಸಾಬ್‌ ಸ್ವಾಗತಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.