ADVERTISEMENT

ವೈಯಕ್ತಿಕ ನೈತಿಕತೆಯಿಂದ ಪ್ರಪಂಚ ಬದಲಿಸಲು ಸಾಧ್ಯ: ನಟ ರಮೇಶ ಅರವಿಂದ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 8:59 IST
Last Updated 14 ಜನವರಿ 2020, 8:59 IST
ಕೊಪ್ಪಳದ ಕೈಲಾಸ ಮಂಟಪದಲ್ಲಿ ಸೋಮವಾರ ಗವಿಸಿದ್ದೇಶ್ವರ ಜಾತ್ರೆ ಪ್ರಯುಕ್ತ ನಡೆದ ಭಕ್ತ ಹಿತಚಿಂತನ ಸಭೆಯಲ್ಲಿ ಬೆಂಗಳೂರಿನ ಅಂಬಿ ಸುಬ್ರಹ್ಮಣ್ಯಂ ಹಾಗೂ ತಂಡದವರಿಂದ ನಾದ ತರಂಗ ಸಂಗೀತ ಕಾರ್ಯಕ್ರಮ ನಡೆಯಿತು
ಕೊಪ್ಪಳದ ಕೈಲಾಸ ಮಂಟಪದಲ್ಲಿ ಸೋಮವಾರ ಗವಿಸಿದ್ದೇಶ್ವರ ಜಾತ್ರೆ ಪ್ರಯುಕ್ತ ನಡೆದ ಭಕ್ತ ಹಿತಚಿಂತನ ಸಭೆಯಲ್ಲಿ ಬೆಂಗಳೂರಿನ ಅಂಬಿ ಸುಬ್ರಹ್ಮಣ್ಯಂ ಹಾಗೂ ತಂಡದವರಿಂದ ನಾದ ತರಂಗ ಸಂಗೀತ ಕಾರ್ಯಕ್ರಮ ನಡೆಯಿತು   

ಕೊಪ್ಪಳ: ವೈಯಕ್ತಿಕ ನೈತಿಕತೆಯಿಂದ ಸಮಾಜವನ್ನು‌ ಹಾಗೂ ಪ್ರಪಂಚವನ್ನು ಬದಲಿಸಬಹುದು. ಇದು ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿದೆ ಎಂದು ನಟ, ನಿರ್ದೇಶಕ ರಮೇಶ ಅರವಿಂದ ಹೇಳಿದರು.

ನಗರದ ಗವಿಸಿದ್ಧೇಶ್ವರ ಮಠದ ಕೈಲಾಸ ಮಂಟಪದಲ್ಲಿ ಸೋಮವಾರ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅನುಭಾವಿಗಳ ಅಮೃತ-ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಾಗರದ ನೀರನ್ನು ಕುಡಿಯಲಾಗುವುದಿಲ್ಲ. ಸಮಾಜ, ನಾಡು ಆಕಾಶದಿಂದ ಬಿದ್ದಿಲ್ಲ. ನಾವೆಲ್ಲಸೇರಿ ಸಮಾಜ, ದೇಶ. ಅವನು ಅನ್ಯಾಯ ಮಾಡುತ್ತಾನೆ, ಇವನೂ ಭ್ರಷ್ಟಾಚಾರ ಮಾಡುತ್ತೇನೆ ಎನ್ನುವುದಕ್ಕಿಂತ ನಾನು ಸರಿಯಾಗಿ ಇರುತ್ತೇನೆ ಎಂದು ನಿರ್ಧರಿಸಬೇಕು. ಅಂದಾಗ ಸಮಾಜ ತಾನಾಗಿಯೇ ಬದಲಾಗುತ್ತದೆ. ನಿಮಗೆ ಪ್ರಪಂಚ ಬದಲು ಮಾಡಲು ಆಗುವುದಿಲ್ಲ. ಆದರೆ‌ ನೀವು ಬದಲಾಗಬಹುದು ಎಂದರು.

ADVERTISEMENT

ಬೇರೆಯವರು ನಿಮ್ಮ ನಿಯಂತ್ರಣದಲ್ಲಿ‌ ಇರುವುದಿಲ್ಲ. ನಿಮ್ಮ ನಿಯಂತ್ರಣದಲ್ಲಿರುವುದು ನೀವು ಮಾತ್ರ.‌ ಹಾಗಾಗಿ ಇಂದು ನಿರ್ಧರಿಸಿ, ಒಳ್ಳೆಯ ಸೇವಕ, ಮಗ, ಶಿಕ್ಷಕ, ಜನಪ್ರತಿನಿಧಿ,‌ ಅಧಿಕಾರಿ ಆಗುತ್ತೇನೆ ಎಂದು. ಆಗ ಸಮಾಜ ಒಳ್ಳೆಯ ರೀತಿಯಲ್ಲಿ ಇರುತ್ತದೆ ಎಂದರು.

ನೀವು ಸರಿ ಇದ್ದರೇ ಪ್ರಪಂಚ ಸರಿ ಇರುತ್ತದೆ. ನೀವು ಸರಿ ಇದ್ದರೇ ದೇಶ ಸರಿಯಾಗಿ ಇರುತ್ತದೆ. ಹಾಗಾಗಿ ಮೊದಲು ನೀವು ಸರಿಯಾಗಿರಬೇಕು.‌ ಅಂದಾಗ ಪ್ರಪಂಚ ಸರಿಯಾಗಿ ಇರುತ್ತದೆ ಎಂದರು‌.

ಸಿಂದಗಿ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮೀಜಿ ಮಾತನಾಡಿ, ಹೃದಯ ಪರಿವರ್ತನೆ ಮಾಡುವ ಜಾತ್ರೆ ಗವಿಸಿದ್ಧೇಶ್ವರ ಜಾತ್ರೆ. ನಾವು ಹೀಗೆ ಬದುಕಬೇಕು ಎಂದುಕೊಳ್ಳಿ. ಬೇರೆಯವರ ಸಲುವಾಗಿ ಬದುಕಬೇಡಿ. ದೇಹ, ಮುಖ ಚಂದ ಇಟ್ಟುಕೊಳ್ಳಿ ಎಂದು ಹೇಳುವವರು ಬಹಳಷ್ಟು ಜನರಿದ್ದಾರೆ. ಬ್ಯೂಟಿ ಪಾರ್ಲರ್ ನಲ್ಲಿ ಮಾಡಿಕೊಂಡ ಮೇಕಪ್ ಬಹಳ ಸಮಯ ಇರುವುದಿಲ್ಲ. ಆದರೆ ಗವಿಮಠದ ಜಾತ್ರೆಗೆ ಬಂದುಭಸ್ಮ ಹಚ್ಚಿಕೊಂಡರೇ ಜೀವನ ಪೂರ್ತಿ ಚೆನ್ನಾಗಿ ಇರುತ್ತಾರೆ ಎಂದರು‌.

ಜಾಣತನ, ಹೃದಯ ವಂತಿಕೆ, ಶ್ರೀಮಂತಿಕೆ ಇವೆಲ್ಲವೂ ವಿಭಿನ್ನ. ಆದರೆ ಅಂದು ಕಿಸೆ ತುಂಬಿರಲಿಲ್ಲ. ಹೃದಯ ತುಂಬಿರುತ್ತಿತ್ತು. ಆದರೆ‌ ಈಗ ಕಿಸೆ ತುಂಬಿದೆ. ಆದರೆ ಹೃದಯ ಖಾಲಿ ಇದೆ.‌ ಇದು ವಿಪರ್ಯಾಸ ಎಂದರು.

ನೈತಿಕತೆಯಿಂದ ಬದುಕಬೇಕಾಗಿದೆ. ಸಂಬಂಧಗಳು ಛಿದ್ರವಾಗುತ್ತದೆ. ಜನರಲ್ಲಿ ವೈಚಾರಿಕತೆಯನ್ನು ಭಿತ್ತುವ ಜಾತ್ರೆ ಇದಾಗಿದೆ. ನಿನ್ನ ನೋವು ನಿನಗೆ ಅರ್ಥವಾಗದೇ ಬದುಕಿದ್ದೀಯಾ ಎಂದರ್ಥ, ಕುಟುಂಬದ ನೋವು ಅರ್ಥವಾದರೇ ಮನುಷ್ಯ, ಮತ್ತೋರ ನೋವು ಅರ್ಥವಾದರೇ ಮಹಾತ್ಮ ಆಗುತ್ತೀಯಾ ಎಂದರು.

ಮಣಕವಾಡ ದೇವ ಮಂದಿರಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.