ADVERTISEMENT

‘ಅವಿಭಕ್ತ ಕುಟುಂಬ ಸಂಸ್ಕೃತಿ ಜೀವಂತವಾಗಿರಲಿ’

ರ್ಯಾವರಣ ಸಂಘಟನೆಯ ರಾಜ್ಯ ಸಂಯೋಜಕ ಜಯರಾಮ ಬೊಳ್ಳಾಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 5:08 IST
Last Updated 24 ಜನವರಿ 2026, 5:08 IST
ಗಂಗಾವತಿ ನಗರದಲ್ಲಿ ನಡೆದ ಭಾರತ ಮಾತೆ ಭಾವಚಿತ್ರದ ಮೆರವಣಿಗೆ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿರುವುದು
ಗಂಗಾವತಿ ನಗರದಲ್ಲಿ ನಡೆದ ಭಾರತ ಮಾತೆ ಭಾವಚಿತ್ರದ ಮೆರವಣಿಗೆ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿರುವುದು   

ಗಂಗಾವತಿ: ‘ಅವಿಭಕ್ತ ಕುಟುಂಬ ಭಾರತದ ಸಂಸ್ಕೃತಿಯಾಗಿದೆ. ಈಚೆಗೆ ಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ವಿಭಕ್ತ ಕುಟುಂಬಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಸಂಬಂಧಗಳ ನಡುವೆ ಸಾಮರಸ್ಯ ಕಳೆಯುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲೆಂದು ಆರ್‌ಎಸ್‌ಎಸ್‌ ಹಿಂದೂ ಸಮ್ಮೇಳನ ನಡೆಸುತ್ತಿದೆ’ ಎಂದು ಪರ್ಯಾವರಣ ಸಂಘಟನೆಯ ರಾಜ್ಯ ಸಂಯೋಜಕ ಜಯರಾಮ ಬೊಳ್ಳಾಡೆ ಹೇಳಿದರು.

ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಸಮ್ಮೇಳದಲ್ಲಿ ಮಾತನಾಡಿದರು.

‘ಜಗತ್ತಿನಲ್ಲಿ ಭಾರತ ಶ್ರೇಷ್ಠ ಸಂಸ್ಕೃತಿ ಹೊಂದಿದ ದೇಶ. ಇದನ್ನು ಉಳಿಸುವ ಕೆಲಸ ಹಿಂದೂಗಳು ಮಾಡಬೇಕು. ರಾಮಾನುಜಾಚಾರ್ಯ, ಶಂಕರಾಚಾರ್ಯ, ಬುದ್ಧ, ಬಸವಣ್ಣ, ಸರ್ವಜ್ಞ, ಅಕ್ಕಮಹಾದೇವಿ, ಕನಕದಾಸ ಸೇರಿ ಹಲವು ಸಂತರು ಜನಿಸಿದ ಪುಣ್ಯ ಭೂಮಿ ಈ ಭಾರತ. ಇಂತವರು ಜನಿಸಿದ ಪುಣ್ಯಭೂಮಿಯಲ್ಲಿ ಜಾತಿ ಹೆಸರಿನಲ್ಲಿ ಕಿತ್ತಾಡುತ್ತಿರುವುದು ಖೇದಕರ’ ಎಂದರು.

ADVERTISEMENT

‘ಸನಾತನ ಹಿಂದೂ ಧರ್ಮ‌ಕ್ಕೆ ಸಂಸ್ಥಾಪಕರಿಲ್ಲ. ತಾನೇ ಹುಟ್ಟಿದೆ. ಹಾಗಾಗಿ ಸನಾತನ ಧರ್ಮಕ್ಕೆ ಸಾವಿಲ್ಲ. ಧರ್ಮವೆಂದರೇ ಕೊರಳಲ್ಲಿ ಕೇಸರಿ ಶಾಲು, ಹಣೆಗೆ ತಿಲಕ, ಜೈಕಾರ ಕೂಗುವುದಲ್ಲ. ಸುಸಂಸ್ಕೃತ ಜೀವನ, ಸುಸಜ್ಜಿತ ನಡವಳಿಕೆ, ಪರಿಸರ ಕಾಳಜಿ, ನೀರಿನ ಮಿತ ಬಳಕೆ, ಪ್ರಾಮಾಣಿಕತೆ ಆಗಿದೆ. ಎಲ್ಲರಿಗೂ, ಎಲ್ಲ ಧರ್ಮ–ಜಾತಿಗಳಿಗೂ ಗೌರವ ನೀಡುವುದೇ ಸನಾತನ ಮತ್ತು ಮಾನವ ಧರ್ಮವಾಗಿದೆ’ ಎಂದು ಹೇಳಿದರು.

‘ಜನರು ವಿದೇಶಿ ಪದ್ಧತಿಗೆ ಮಾರುಹೋಗಿ ಅತಿಹೆಚ್ಚು ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದು ಜೀವಸಂ‌ಕುಲ
ನಾಶಕ್ಕೆ ನಾಂದಿಯಾಗುತ್ತಿದೆ. ಈ ವಿಷಯವನ್ನು ಆರ್‌ಎಸ್‌ಎಸ್ ನೂರು ವರ್ಷಗಳಿಂದ ಹೇಳುತ್ತಾ ಬರುತ್ತಿದೆ’ ಎಂದರು.

ಇದಕ್ಕೂ ಮುನ್ನ ನಗರದ ಭಗೀರಥ ವೃತ್ತದಿಂದ ಭಾರತ ಮಾತೆ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ವೇದಿಕೆ ಕಾರ್ಯಕ್ರ ಮದಲ್ಲಿ ಮಕ್ಕಳಿಂದ ಭರತನಾಟ್ಯ, ಯೋಗ ಪ್ರದರ್ಶನ ಜರುಗಿತು.

ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರಿಗೆ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾದಪೂಜೆ ಮಾಡಿದರು. ಕಾರ್ಯಕ್ರಮಕ್ಕೆ ಬಂದ ತಂದೆ–ತಾಯಿಗಳಿಗೆ ಅವರ ಮಕ್ಕಳು ಪಾದಪೂಜೆ ಮಾಡಿದರು.

ಹಿಂದೂ ಸಮ್ಮೇಳನದ ನಗರ ಸಂಯೋಜಕ ಅಮರೇಶ ಪಾಟೀಲ, ಉತ್ತರ ಭಾಗದ ಸಮಿತಿ ಅಧ್ಯಕ್ಷ ವೆಂಕಟೇಶ ಅಮರಜ್ಯೋತಿ, ಮಾಜಿ ಸಂಸದ ಶಿವರಾಮೆಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡ ಗಿರೇಗೌಡ, ಸಿದ್ಧರಾಮಯ್ಯಸ್ವಾಮಿ, ಅಕ್ಕಿ ಚಂದ್ರು, ಅಯ್ಯನಗೌಡ ಹೇರೂರು, ಉತ್ತರ ಭಾಗದ ಹಿಂದೂ ಸಮ್ಮೇಳನ ಸಮಿತಿ ಉಪಾಧ್ಯಕ್ಷ ಹುಸೇನಪ್ಪ ಸ್ವಾಮಿ, ಸಂಗಮೇಶ ಅಯೋಧ್ಯ, ವೀರೂ ಕೊಟಗಿ, ಗಾದೇಪ್ಪ, ದೇವರಾಜ ಗುಳದಳ್ಳಿ, ಶ್ರೀನಿವಾಸ ಧೂಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.