ಕೊಪ್ಪಳ: ‘ಪ್ರಸ್ತುತ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣದಲ್ಲಿ ಕೋವಿಡ್ ಸಮಯದಂತೆ ಆರೋಗ್ಯ ತುರ್ತುಪರಿಸ್ಥಿತಿ ಎಂದು ಪರಿಗಣಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಡೆಂಗಿ ಜ್ವರ ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಡೆಂಗಿ ಜ್ವರಕ್ಕೆ ನಿರ್ದಿಷ್ಟ ಔಷಧಗಳಿಲ್ಲ. ರೋಗಲಕ್ಷಣ ಆಧಾರಿತ ಚಿಕಿತ್ಸೆ, ಔಷಧೋಪಚಾರದ ಮೂಲಕ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಕೋವಿಡ್ ಸಮಯದಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಡೆಂಗಿ ಜ್ವರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಡೆಂಗಿ ಹರಡದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.
‘ಡೆಂಗಿ ಉಂಟಾಗುವಿಕೆ ಮತ್ತು ಹರಡುವಿಕೆಗೆ ಮುಖ್ಯ ಕಾರಣವಾಗುವ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸುವ ಕೆಲಸ ಆಗಬೇಕು. ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ, ತೆರೆದ ಸಂಗ್ರಾಹಕಗಳಲ್ಲಿ ನೀರು ಸಂಗ್ರಹಣೆ ಮಾಡದಂತೆ, ಮನೆಯಲ್ಲಿ ಸೊಳ್ಳೆ ಪರದೆ, ಸೊಳ್ಳೆ ಸಿಂಪಡಕಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಬೇಕು’ ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣ, ಜಿಲ್ಲಾ ಗುಣಮಟ್ಟ ಭರವಸೆ ಸಮಿತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಡಿಎಚ್‌ಒ ಡಾ.ಲಿಂಗರಾಜು ಟಿ., ಡಿಎಸ್‌ಒ ಡಾ.ನಂದಕುಮಾರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಡಿಟಿಒ ಡಾ.ಶಶಿಧರ ಎ., ಡಿಎಲ್‌ಒ ಡಾ.ಪ್ರಕಾಶ ಎಚ್. ಸಿಎಂಒ ಡಾ.ಈಶ್ವರ ಸವಡಿ, ಕಿಮ್ಸ್ ಎಚ್‌ಒಡಿ ಡಾ.ನಾರಾಯಣ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ, ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.