ADVERTISEMENT

ಲಾಕ್‍ಡೌನ್‍: ತತ್ತರಿಸಿದ ಹಕ್ಕಿಪಿಕ್ಕಿ ಸಮುದಾಯ

ಕೆಲಸವಿಲ್ಲದೆ ಸಂಕಷ್ಟ, ಒಪ್ಪತ್ತಿನ ಊಟಕ್ಕೂ ಪರದಾಟ: ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಅಲೆಮಾರಿಗಳು

ಸಿದ್ದನಗೌಡ ಪಾಟೀಲ
Published 29 ಮೇ 2021, 3:46 IST
Last Updated 29 ಮೇ 2021, 3:46 IST
ಕೊಪ್ಪಳದ ಸಜ್ಜಿಹೊಲ ಪ್ರದೇಶದಲ್ಲಿ ಲಾಕ್‍ಡೌನ್‍ನಿಂದಾಗಿ ಕೆಲಸ, ಆಹಾರವಿಲ್ಲದೆ ಚಿಂತಾಕ್ರಾಂತರಾಗಿ ಕುಳಿತಿರುವ ಹಕ್ಕಿಪಿಕ್ಕಿ ಜನಾಂಗದವರು ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಕೊಪ್ಪಳದ ಸಜ್ಜಿಹೊಲ ಪ್ರದೇಶದಲ್ಲಿ ಲಾಕ್‍ಡೌನ್‍ನಿಂದಾಗಿ ಕೆಲಸ, ಆಹಾರವಿಲ್ಲದೆ ಚಿಂತಾಕ್ರಾಂತರಾಗಿ ಕುಳಿತಿರುವ ಹಕ್ಕಿಪಿಕ್ಕಿ ಜನಾಂಗದವರು ಪ್ರಜಾವಾಣಿ ಚಿತ್ರ: ಭರತ್ ಕಂದಕೂರ   

ಕೊಪ್ಪಳ: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಲಾಕ್‍ಡೌನ್‍ನಿಂದಾಗಿಅಲೆಮಾರಿಗಳು ಸೇರಿದಂತೆ ವಿಶೇಷವಾಗಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಒಪ್ಪಿತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಗವಿಮಠ ಸಮೀಪದ ಸಜ್ಜಿಹೊಲ ಪ್ರದೇಶದಲ್ಲಿ ಈ ಸಮುದಾಯದ ಸುಮಾರು 33 ಮನೆಗಳಿವೆ. ಗವಿಮಠದವಸತಿ ನಿಲಯದ ಹಿಂಬದಿಯಲ್ಲಿಯೇ ಇವರು ವಾಸವಾಗಿದ್ದು, ಪುರುಷರು ಸಣ್ಣಪುಟ್ಟ ಕೂಲಿ ಕೆಲಸ. ಮಹಿಳೆಯರು ಕಸಬರಿಗೆ (ಪೊರಕೆ) ತಯಾರಿಕೆ, ಪಿನ್ನು, ಸೂಜಿ, ರಿಬ್ಬನ್ ಮಾರಾಟ, ಭಿಕ್ಷಾಟನೆ, ಚಿಂದಿ ಆಯುವ ಕೆಲಸ ನಂಬಿ ಬದುಕುತ್ತಿದ್ದಾರೆ. ಆದರೆ ಲಾಕ್‍ಡೌನ್‍ನಿಂದಾಗಿ ಇವರಿಗೆ ಕೆಲಸವೇ ಇಲ್ಲದಂತಾಗಿದೆ.

ಇಲ್ಲಿ ಅನೇಕ ವರ್ಷಗಳಿಂದ ಈ ಸಮುದಾಯದ ಜನರು ವಾಸವಾಗಿದ್ದರೂ ಅವರಿಗೆ ಶಾಶ್ವತವಾದ ಸೂರು ಇನ್ನೂ ದೊರೆತಿಲ್ಲ. ಕಣ್ಣಿಗೆ ಕಾಣುವಂತೆ ತೂತು ಬಿದ್ದ ಗುಡಿಸಲುಗಳು, ಹರಿದ ಬಟ್ಟೆ, ಮಾಸಿದ ಮನೆಗಳು, ದೈನ್ಯದ ಮುಖಭಾವ, ಬಡತನ, ಅನಕ್ಷರತೆ ಢಾಳವಾಗಿ ಕಾಣುತ್ತದೆ. ಅಂದೇ ದುಡಿದು ಅಂದೇ ತಿಂದು ಜೀವನ ನಡೆಸುವ ಈ ಜನಾಂಗಕ್ಕೆ ಶಾಶ್ವತವಾದ ಪರಿಹಾರವನ್ನು ಇಲ್ಲಿಯವರೆಗೆ ಯಾರೂ ನೀಡಿಲ್ಲ.

ADVERTISEMENT

ಲಾಕ್‌ಡೌನ್‌ನಿಂದ ಕೆಲಸವೂ ಇಲ್ಲ. ಭಿಕ್ಷೆಯೂ ಇಲ್ಲ. ಹೊರಗೆ ಹೋಗಲು ಸಾಧ್ಯವಾಗದೇ ಸಹಾಯ ಮಾಡುವವರ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿದ್ದಾರೆ. ಇಲ್ಲಿರುವ ಬಹುತೇಕರಿಗೆ ರೇಷನ್‌ ಕಾರ್ಡ್ ಇಲ್ಲ. ಸರ್ಕಾರದ ಯೋಜನೆಗಳ ಮಾಹಿತಿಯೂ ಇಲ್ಲ. ಮುಟ್ಟಿಸಬೇಕಾದವರೂ ಈ ಪ್ರದೇಶದತ್ತ ಬರುವುದು ಕಡಿಮೆ ಹೀಗಾಗಿ ಗುಡಿಸಲು, ಹಸಿವು ಮುಕ್ತ ದೇಶ ನಿರ್ಮಾಣ ಐದು ದಶಕಗಳಿಂದ ಕನಸಾಗಿಯೇ ಉಳಿದಿರುವುದು ದುರಂತ.

‘ಇವರು ವಾಸಿಸುವ ಪ್ರದೇಶ ನಗರದ ಮಧ್ಯಭಾಗದಲ್ಲಿ ಇದ್ದರೂ ಸಹ ಹೊರಗಿನವರೊಂದಿಗೆ ಇವರ ಸಂಪರ್ಕ ಕಡಿಮೆಯೇ ಎನ್ನಬಹುದು. ಹಾಗಾಗಿ ಈವರೆಗೆ ಯಾರೂ ಇವರ ಸಹಾಯಕ್ಕೆ ಆಗಮಿಸಿಲ್ಲ. ಸರ್ಕಾರದ ಕಣ್ಣಿಗೂ ಕೂಡ ಇವರು ಬಿದ್ದಿಲ್ಲ. ಲಾಕ್‍ಡೌನ್ ಆರಂಭದಿಂದ ನಗರಸಭೆ ವತಿಯಿಂದ ಇಂದಿರಾ ಕ್ಯಾಂಟೀನ್‍ನಿಂದ ನಿರ್ಗತಿಕರಿಗೆ ಹಾಗೂ ರೋಗಿಗಳಿಗೆ ಉಚಿತವಾಗಿ ಆಹಾರ ವಿತರಿಸುತ್ತದೆ. ಆದರೆ ಅವರೂ ಸಹ ಇಲ್ಲಿಯವರೆಗೆಆಹಾರ ನೀಡಿಲ್ಲ’ ಎಂದು ಬಸವರಾಜ ಎಂಬುವವರು ವಿಷಾದದಿಂದ ಹೇಳುತ್ತಾರೆ.

‘ನಮ್ಮದು ಎಪಿಎಂಸಿಯಲ್ಲಿ ಕೂಲಿ ಕೆಲಸ. ಲಾಕ್‍ಡೌನ್‍ನಿಂದಾಗಿ ಎಪಿಎಂಸಿ ಬಂದ್ ಆಗಿದೆ. ಇದರಿಂದ ನಮಗೆ ಕೂಲಿ ಸಿಗುತ್ತಿಲ್ಲ. ಸರ್ಕಾರವೇನೋ ಸಮಯ ನಿಗದಿ ಮಾಡಿ ಕೂಲಿ ಕೆಲಸಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ಆ ಸಮಯಕ್ಕೆ ನಮಗೆ ಕೂಲಿ ಸಿಗಬೇಕಲ್ಲ. ಇಂದಿಗೆ ನನಗೆ ಕೂಲಿ ಕೆಲಸ ಸಿಗದೇ ಸುಮಾರು 27 ದಿನ ಆಯಿತು. ಇಷ್ಟು ದಿನ ಇದ್ದುದರಲ್ಲಿಯೇ ಜೀವನ ನಡೆಸಿದ್ದೇವೆ. ಲಾಕ್‍ಡೌನ್ ಮುಂದುವರಿದರೆ ಬದುಕು ಚಿಂತಾಜನಕವಾಗುವುದರಲ್ಲಿ ಸಂಶಯವಿಲ್ಲ’ ಎಂದು ಸಮುದಾಯದ ಮೈಲಾರಪ್ಪ ಗದ್ಗದಿತರಾದರು. ‘ಬುಡಕಟ್ಟು, ಅರೆಅಲೆಮಾರಿ, ಅಲೆಮಾರಿಗಳಿಗೆ ಸರ್ಕಾರ ಚಂದದ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಪ್ರಾಮಾಣಿಕ ಅನುಷ್ಠಾನ ಆಗಿಲ್ಲ. ಲಾಕ್‌ಡೌನ್‌ ಪರಿಸ್ಥಿತಿ ಬಂದರೆ ದೇವರೇ ಕಾಪಾಡಬೇಕು. ದುಡಿದು ತಿನ್ನುವುದೇ ಅನಿವಾರ್ಯವಾಗಿದೆ. ವೃದ್ಧರು, ಅಶಕ್ತರು, ಮಕ್ಕಳ ಏನು ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ಜನಾಂಗದ ಮುಖಂಡ ಮೈಲಾರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.