ಕೊಪ್ಪಳ: ಮಳೆಯಾಗಿ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು ಬರುತ್ತಿರುವುದು ಒಂದೆಡೆಯಾದರೆ, ಆರು ಕ್ರಸ್ಟ್‌ಗೇಟ್‌ಗಳಲ್ಲಿ ಕಾಣಿಸಿಕೊಂಡಿರುವ ದೋಷ ರೈತರನ್ನು ಮತ್ತೆ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ವರ್ಷದ ಹಿಂದೆ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಒಂದು ವಾರದ ಕಾರ್ಯಾಚರಣೆ ಬಳಿಕ ತಾತ್ಕಾಲಿಕವಾಗಿ ಗೇಟ್ ಅಳವಡಿಸಲಾಗಿತ್ತು. ಈಗ 11, 18, 20, 24, 27 ಮತ್ತು 28ನೇ ಕ್ರಸ್ಟ್‌ಗಳು ಬಾಗಿವೆ.
‘ಇವುಗಳ ಮೂಲಕ ಜಲಾಶಯದಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ನೀರು ಹರಿಸಲು ಪ್ರಯತ್ನಿಸಿದರೆ ಗೇಟ್ ತುಂಡಾಗುವ ಅಪಾಯ ಎದುರಾಗುವ ಆತಂಕವಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ನಾಲ್ಕನೇ ಕ್ರಸ್ಟ್‌ಗೇಟ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದ್ದು, ಗರಿಷ್ಠ ಎರಡು ಅಡಿ ಮಾತ್ರ ಗೇಟ್ ಎತ್ತಿ ನೀರು ಹರಿಸಲು ಸಾಧ್ಯವಿದೆ.
ಒಟ್ಟು 105.788 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಗೇಟ್‌ಗಳ ನಿರಂತರ ಸಮಸ್ಯೆಯಿಂದ ಈ ಸಲದ ಮುಂಗಾರಿನಿಂದ 80 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹಿಸಲಾಗಿದೆ. ಜುಲೈನಿಂದ ನೀರು ಹರಿಸಲು ಆರಂಭವಾಗಿದ್ದು ಇದುವರೆಗೆ ಅಂದಾಜು 130 ಟಿಎಂಸಿ ಅಡಿ ನೀರು ನದಿ ಪಾಲಾಗಿದೆ.
ಹಿಂದೆ ಗೇಟ್ ಕೊಚ್ಚಿಕೊಂಡು ಹೋದಾಗ ‘ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಿಸಬೇಕಿದೆ’ ಎಂದು ಜಲಾಶಯದ ಸುರಕ್ಷತಾ ತಜ್ಞರು ವರದಿ ನೀಡಿದ್ದರು. ಶುಕ್ರವಾರ ಜಲಾಶಯಕ್ಕೆ 23 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಇಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ.
ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ರೈತರು ಇದೇ ನೀರನ್ನು ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಬಳಸುತ್ತಾರೆ. ಪ್ರತಿ ವರ್ಷ ಎರಡು ಭತ್ತದ ಬೆಳೆ ಬೆಳೆಯಲು ಈ ನೀರು ಆಸರೆಯಾಗುತ್ತಿತ್ತು. ಈಗ ನೀರು ಇದ್ದರೂ ಸಂಗ್ರಹಿಸಿಕೊಳ್ಳಲು ಆಗದ ಸ್ಥಿತಿಯಿರುವ ಕಾರಣ ಒಂದು ಬೆಳೆಗೆ ಮಾತ್ರ ನೀರು ಸಿಗಲಿದೆ ಎಂದು ಐಸಿಸಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಾಗಿರುವ ಆರು ಗೇಟ್‌ಗಳ ಮೂಲಕ ನೀರು ಹೊರಬಿಡಲು ಸಾಧ್ಯವಿಲ್ಲ. ಉಳಿದ ಗೇಟ್‌ಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಎಲ್ಲ ಗೇಟ್ ಬದಲಾವಣೆ ಮಾಡಲಾಗುತ್ತದೆ.ಶಿವರಾಜ ತಂಗಡಗಿ ಐಸಿಸಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ
ಕಳೆದ ಬೇಸಿಗೆಯಲ್ಲಿಯೇ ಮುತುವರ್ಜಿ ವಹಿಸಿ ಸರ್ಕಾರ ಗೇಟ್ ಬದಲಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಈಗ ಆರು ಗೇಟ್ ಬಾಗಿರುವುದರಿಂದ ಜಲಾಶಯಕ್ಕೆ ಆಪತ್ತು ಎದುರಾಗಿದೆ.ಜನಾರ್ದನ ರೆಡ್ಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.