ADVERTISEMENT

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್: ಡಿ. 20ರಿಂದ ಗೇಟ್‌ ಅಳವಡಿಸಲು ತಂಗಡಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 8:03 IST
Last Updated 7 ಡಿಸೆಂಬರ್ 2025, 8:03 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು   

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಕಾರ್ಯ ಡಿ. 20ರಿಂದ ಆರಂಭಿಸಿ ನಿಗದಿತ ಕಾಲಮಿತಿ ಮೇ ಅಂತ್ಯದ ಒಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ತೀವ್ರ ನಿಗಾ ವಹಿಸುವಂತೆಯೂ ಹೇಳಿದರು.

ತಾಲ್ಲೂಕಿನ ಮುನಿರಾಬಾದ್‌ನಲ್ಲಿ ಶನಿವಾರ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಎಂಜಿನಿಯರ್‌ ಕಚೇರಿಯಲ್ಲಿ ನಿಗಮದ ಅಧಿಕಾರಿಗಳು ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ‘ಜಲಾಶಯ ನಮ್ಮ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿದ್ದು, ಪ್ರಸ್ತುತ ಹಳೆಯದಾದ ಜಲಾಶಯದ ಎಲ್ಲಾ 33 ಕ್ರಸ್ಟ್‌ಗೇಟ್‌ ಬದಲಿಸಲು ₹52 ಕೋಟಿ ವೆಚ್ಚದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.

‘ಈ ವರ್ಷ ಜಲಾಶಯದ 23 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಿದ್ದು, ಪ್ರಸ್ತುತ ಜಲಾಶಯದ ಮಟ್ಟವು 1621.72 ಅಡಿ ಇದೆ. ಕ್ರಸ್ಟ್‌ಗೇಟ್‌ ಅಳವಡಿಸಲು 1613 ಅಡಿ ಇರಬೇಕು. ಉಳಿದ ಹೆಚ್ಚುವರಿ 9 ಅಡಿಯಷ್ಟು ನೀರು ಬಳಸಿಕೊಂಡು ನಂತರ ಗೇಟ್‌ ಅಳವಡಿಸಲು ಕಾರ್ಯ ಆರಂಭಿಸಲಾಗುವುದು’ ಎಂದು ನಿಗಮದ ಮುನಿರಾಬಾದ್ ತುಂಗಭದ್ರ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್‌ ಶ್ರೀನಿವಾಸ ಬಿ. ಮಲ್ಲಿಗವಾಡ ಹಾಗೂ ಹೊಸಪೇಟೆ ತುಂಗಭದ್ರಾ ಮಂಡಳಿ ಅಧೀಕ್ಷಕ ಎಂಜಿನಿಯರ್‌ ಎಸ್.ನಾರಾಯಣ ನಾಯಕ ಅವರು ಸಚಿವರಿಗೆ ಮಾಹಿತಿ ನೀಡಿದರು.

ADVERTISEMENT

ಸಭೆಯಲ್ಲಿ ಮುನಿರಾಬಾದ್ ಕೇಂದ್ರ ವಲಯದ ಕಾರ್ಯಪಾಲಕ ಎಂಜಿನಿಯರ್‌ ಪ್ರೀತಿ ಪತ್ತಾರ, ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ, ವಡ್ಡರಹಟ್ಟಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಎಂ.ಎಸ್ ಗೋಡೆಕರ್, ಮುನಿರಾಬಾದ್ ವಲಯದ ತಾಂತ್ರಿಕ ಸಹಾಯಕ ಯಲ್ಲಪ್ಪ, ವಿನಾಯಕ ಬಿ., ಬಸಪ್ಪ ಜಾನಕರ್, ಲಿಂಗರಾಜ, ರಾಘವೇಂದ್ರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಧರಂರಾಜ್, ಸಹಾಯಕ ಎಂಜಿನಿಯರ್ ಹುಲಿರಾಜ್ ಮತ್ತು ಕಿರಣ ಪಾಲ್ಗೊಂಡಿದ್ದರು.

ಕ್ರಸ್ಟ್‌ಗೇಟ್‌ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆಯಿಲ್ಲ. ಕಾಲುವೆಗಳ ದುರಸ್ತಿಗೆ ₹430 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ

ಮೂರು ತಂಡಗಳಾಗಿ ರಚನೆ

ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಗುತ್ತಿಗೆಯನ್ನು ಗುಜರಾತ್‌ನ ಅಹಮದಾಬಾದ್‌ನ ಹಾರ್ಡ್‌ವೇರ್‌ ಟೂಲ್ಸ್ ಮತ್ತು ಮಷಿನರಿ ಪ್ರಾಜೆಕ್ಟ್‌ ಲಿಮಿಟೆಡ್ ಕಂಪನಿಗೆ ನೀಡಲಾಗಿದೆ. ಕಂಪನಿ ಪ್ರತಿನಿಧಿಗಳು ಮಾತನಾಡಿ ‘ಪಶ್ಚಿಮ ಬಂಗಾಳದ ಪರಾಕ್ ಬ್ಯಾರೇಜ್ ಜಲಾಶಯದಲ್ಲಿ 124 ಗೇಟ್‌ ಅಳವಡಿಸಿದ್ದೇವೆ. ತುಂಗಭದ್ರಾ ಜಲಾಶಯದ ಗೇಟ್‌ಗಳ ಗಾತ್ರಗಳು ಕೂಡ ಅದೇ ಅಳತೆಯಲ್ಲಿವೆ. ಒಂದು ತಿಂಗಳಲ್ಲಿ ಆರು ಗೇಟ್‌ಗಳನ್ನು ಅಳವಡಿಸಲಾಗುವುದು. ಜಲಾಶಯದ ಎಡ ಬಲ ಮತ್ತು ಮಧ್ಯ ಭಾಗದಲ್ಲಿ ಮೂರು ತಂಡಗಳಾಗಿ ಕಾರ್ಯ ನಡೆಸಲಾಗುವುದು’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.