ಕಾರಟಗಿ: ‘ದೇಶದ ಅತ್ಯಂತ ಅಪಾಯದಲ್ಲಿರುವ ನದಿಗಳಲ್ಲಿ ತುಂಗಭದ್ರಾ ಒಂದಾಗಿದೆ. ವಿವಿಧ ನೀರಾವರಿ ಯೋಜನೆಗಳು, ಕೈಗಾರಿಕಾ ತ್ಯಾಜ್ಯ ಮತ್ತು ಕೃಷಿ ರಾಸಾಯನಿಕಗಳಿಂದ ನದಿಯು ಜೀವಸಂಕುಲಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿದೆ’ ಎಂದು ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ರಾಜ್ಯ ಸಂಚಾಲಕ ಮಹಿಮಾ ಪಟೇಲ್ ತೀವ್ರ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಮತ್ತು ಕೊಪ್ಪಳ ಜಿಲ್ಲಾ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಸಹಯೋಗದಲ್ಲಿ ನಡೆದ ಅಭಿಯಾನದ ಕಿಷ್ಕಿಂದೆಯಿಂದ ಮಂತ್ರಾಲಯದವರಿಗಿನ 3ನೇ ಹಂತದ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಹಿಂದಿನವರು ನಿಷ್ಠೆಯಿಂದ ನೀರಿನ ಮೂಲವನ್ನು ಸಂರಕ್ಷಿಸುತ್ತಿದ್ದರು. ಈಗೆಲ್ಲಾ ಸ್ವಾರ್ಥಮಯ ಜನರಿಂದ ನದಿಗಳು ಅಪಾಯದ ಸ್ಥಿತಿಯಲ್ಲಿವೆ. ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ನದಿ 2040ರ ವೇಳೆಗೆ ಅತ್ಯಂತ ವಿಷಕಾರಿ ಮಟ್ಟ ತಲುಪಲಿದೆ. ಜಲಾನಯನ ಪ್ರದೇಶದಲ್ಲಿ ಅರಣ್ಯ ನಾಶದಿಂದ ಮಳೆ ನೀರು ಇಂಗುವಿಕೆ ಪ್ರಮಾಣ ಕಡಿಮೆಯಾಗಿ ಮಳೆಗಾಲದಲ್ಲಿ ಪ್ರವಾಹ ಮತ್ತು ಬೇಸಿಗೆಯಲ್ಲಿ ಬರ ಪರಿಸ್ಥಿತಿ ಸಹಜವಾಗಿ ಅನೇಕ ಸಮಸ್ಯೆಗಳು ಹುಟ್ಟುತ್ತಿವೆ. ನದಿ ಪಾತ್ರದಲ್ಲಿ ಚರಂಡಿ ನೀರು ಶುದ್ಧೀಕರಣ ಘಟಕಗಳಿರದೇ, ಆ ನೀರು ನದಿ ಸೇರುತ್ತಿದೆ. ಹೀಗೆಯೇ ಮುಂದುವರಿದರೆ ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತು ನಗೆಪಾಟಲಿಗೀಡಾಗಲಿದೆ. ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಅಭಿಯಾನ, ಜಾಗೃತಿ ಕಾರ್ಯದ ಮೂಲಕ ಸರ್ಕಾರಕ್ಕೆ ಎಚ್ಚರಿಸಲಾಗುತ್ತಿದೆ’ ಎಂದು ಹೇಳಿದರು.
ಜಿಲ್ಲಾ ಸಂಚಾಲಕ ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ‘ತುಂಗಭದ್ರಾ ನೀರಿನ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಣಾಮವಾಗಿ ಕ್ಯಾನ್ಸರ್, ಜಾಂಡೀಸ್ ಸೇರಿದಂತೆ ಹಲವು ಮಾರಕ ರೋಗಗಳು ವ್ಯಾಪಿಸುತ್ತಿವೆ. ನದಿಯ ಪಾವಿತ್ರ್ಯತೆ ಕಾಪಾಡಿ, ಮುಂದಿನ ಪೀಳಿಗೆಗೆ ಉಳಿಸಲು ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆ ಅರಿಯಬೇಕಾಗಿದೆ’ ಎಂದರು.
ಆಂದೋಲನದ ದಕ್ಷಿಣ ಭಾರತ ಸಂಚಾಲಕ ಟಿ.ಮಾಧವನ್, ಜಿಲ್ಲಾ ಸಂಚಾಲಕ ರಾಘವೇಂದ್ರ ತೂನಾ, ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ರಫೀ, ವಿಷ್ಣು ಜೋಷಿ, ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಪ್ರಮುಖರಾದ ಗಿರಿಜಾಶಂಕರ ಪಾಟೀಲ್, ಕರಿಸಿದ್ದನಗೌಡ ಪಾಟೀಲ್ ಬೂದಗುಂಪಾ, ಖಾಜಾ ಹುಸೇನ್ ಮುಲ್ಲಾ, ಶರಣಯ್ಯಸ್ವಾಮಿ ಯರಡೋಣಾ, ವಿಜಯಲಕ್ಷ್ಮಿ ಮೇಲಿನಮನಿ, ರೈತ ಮುಖಂಡರಾದ ಸಿದ್ದರಾಮ ರ್‍ಯಾವಳದ ಚಳ್ಳೂರು, ವೀರನಗೌಡ ಮಾಲಿಪಾಟೀಲ್, ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ, ಸುರೇಶ ಚಿರ್ಚನಗುಡ್ಡ, ಚನ್ನಬಸಪ್ಪ ಸುಂಕದ, ಶಿಲ್ಪಾ ದಿವಟರ್, ಬಸವರಾಜ ಪಗಡದಿನ್ನಿ, ಮಂಜುನಾಥ ಮಸ್ಕಿ ಉಪಸ್ಥಿತರಿದ್ದರು. ತಲೇಖಾನ ವೀರಭದ್ರ ಶರಣರು ಸಾನ್ನಿಧ್ಯ ವಹಿಸಿದ್ದರು. ಅಭಿಯಾನದ ಪ್ರತಿಜ್ಞಾ ವಿಧಿಯನ್ನು ಪ್ರಭು ಉಪನಾಳ ಬೋಧಿಸಿದರು. ಕಸಾಪ ತಾಲ್ಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಗದೀಶ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.