ಶಿವರಾಜ ತಂಗಡಗಿ
ಕೊಪ್ಪಳ: ಮೂರು ರಾಜ್ಯಗಳಿಗೆ ನೀರೊದಗಿಸುವ ತಾಲ್ಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯದಿಂದ ಹಿಂಗಾರು ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲ, ಆದ್ದರಿಂದ ರೈತರು ಜಲಾಶಯದ ನೀರು ನೆಚ್ಚಿಕೊಂಡು ಈ ಬಾರಿ ಕೃಷಿ ಚಟುವಟಿಕೆ ಕೈಗೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಐಸಿಸಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
‘ಎರಡನೇ ಬೆಳೆಗೂ ನೀರು ಕೊಡುವಂತೆ ವಿರೋಧ ಪಕ್ಷದವರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಯಾರೇ ಆಗಲಿ ವಾಸ್ತವಿಕತೆ ಅರಿತು ಮಾತನಾಡಬೇಕು. ಈ ಸಲದ ಮುಂಗಾರು ಆರಂಭದಲ್ಲಿಯೇ ವರ್ಷಕ್ಕೆ ಒಂದು ಬೆಳೆಗೆ ಮಾತ್ರ ನೀರು ಒದಗಿಸಲಾಗುವುದು ಎಂದು ಕೇಂದ್ರ ಜಲ ಆಯೋಗ ಹಾಗೂ ತುಂಗಭದ್ರಾ ಬೋರ್ಡ್ ನಿರ್ಧರಿಸಿದೆ’ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
’ಈಗ 80 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ನವೆಂಬರ್ ಅಂತ್ಯದ ಬಳಿಕ ಉಳಿಯುವ ನೀರಿನ ಮೇಲೆ ಮುಂದಿನ ನೀರು ಹಂಚಿಕೆ ಲೆಕ್ಕಾಚಾರ ನಡೆಯಲಿದೆ. ಇನ್ನೂ 30 ದಿನ ಕಾಲುವೆಗಳಿಗೆ ನೀರು ಹರಿಸಬೇಕಿದ್ದು’ ಎಂದು ಮಾಹಿತಿ ನೀಡಿದ ಅವರು ಮಾಜಿ ಸಚಿವ ವೆಂಕಟರಾವ್ ನಾಡಗೌಡರಿಗೆ ಎಲ್ಲ ಗೊತ್ತಿದ್ದರೂ ’ಇರುವ ನೀರು ಎರಡನೇ ಬೆಳೆಗೂ ನೀಡಲು ಸಾಧ್ಯವಿದೆ’ ಎನ್ನುವ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
‘ಸದ್ಯಕ್ಕೆ ಇರುವ ನೀರಿನ ಸದ್ಬಳಕೆ ಹೇಗೆ ಎನ್ನುವುದರ ಬಗ್ಗೆ ಚರ್ಚಿಸಲು ನ. 5ರಂದು ಸಭೆ ನಡೆಯಲಿದ್ದು, ಇದಾದ ಬಳಿಕ ನ. 9 ಅಥವಾ 10ರಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ತುಂಗಭದ್ರಾ ಮಂಡಳಿಯ ಸಭೆ ನ. 21ರಂದು ನಡೆಯಲಿದ್ದು ಅಷ್ಟರೊಳಗೆ ಸಭೆ ನಡೆಸಿ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.
ಶೀಘ್ರ ಪರಿಹಾರ: ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಸೆಪ್ಟೆಂಬರ್‌ನಲ್ಲಿ 403 ಹೆಕ್ಟೇರ್ (ಅಂದಾಜು ₹2.70 ಕೋಟಿ), ಅಕ್ಟೋಬರ್‌ನಲ್ಲಿ 1,995 ಹೆಕ್ಟೇರ್ (ಅಂದಾಜು ₹15.8 ಕೋಟಿ) ನಷ್ಟವಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರುಗೆ ಲೆಕ್ಕಪತ್ರ ಗೊತ್ತಾಗಲ್ಲ. ಆಂಧ್ರ, ತೆಲಂಗಾಣ ಸರ್ಕಾರಕ್ಕೂ ನಾವು ಮನವಿ ಮಾಡುತ್ತೇವೆ. ಕೇಂದ್ರ ಸಚಿವ ಕುಮಾರಸ್ವಾಮಿ ಮಂಡಳಿಗೆ ಹೇಳಿ ನೀರು ಬಿಡಿಸುವ ಕೆಲಸ ಮಾಡಲಿ.ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.