ADVERTISEMENT

ಟಕ್ಕಳಕಿ ಬಳಿ ಅವೈಜ್ಞಾನಿಕ ಕಳಪೆ ಸೇತುವೆ

ಪಂಚಾಯತ್‌ ರಾಜ್‌ ಇಲಾಖೆ ಎಂಜಿನಿಯರ್‌ಗಳ ನಿರ್ಲಕ್ಷ್ಯ, ಜನರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 16:04 IST
Last Updated 13 ಏಪ್ರಿಲ್ 2025, 16:04 IST
ಕುಷ್ಟಗಿ ತಾಲ್ಲೂಕು ಟಕ್ಕಳಕಿ ಬಳಿ ನಿರ್ಮಾಣಗೊಳ್ಳುತ್ತಿರುವ ಸೇತುವೆ
ಕುಷ್ಟಗಿ ತಾಲ್ಲೂಕು ಟಕ್ಕಳಕಿ ಬಳಿ ನಿರ್ಮಾಣಗೊಳ್ಳುತ್ತಿರುವ ಸೇತುವೆ   

ಕುಷ್ಟಗಿ: ಜನರ ಅನುಕೂಲಕ್ಕೆಂದು ಸರ್ಕಾರ ರಸ್ತೆಸೇತುವೆಯನ್ನೇನೊ ನಿರ್ಮಿಸುತ್ತಿರುವುದು ಸರಿ. ಆದರೆ ಅವೈಜ್ಞಾನಿಕ ಕಾಮಗಾರಿ ಭವಿಷ್ಯದಲ್ಲಿ ತಮಗೆ ಸಂಕಷ್ಟ ತಂದೊಡ್ಡಬಹುದೆಂಬ ಆತಂಕ ತಾಲ್ಲೂಕಿನ ಟಕ್ಕಳಕಿ ಗ್ರಾಮಸ್ಥರಲ್ಲಿದೆ.

ಟಕ್ಕಳಕಿ ಬಳಿಯ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣಗೊಳ್ಳುತ್ತಿದೆ. ನೀರು ಹರಿಯುವ ದಿಕ್ಕು ಒಂದೆಡೆಯಾದರೆ ಸೇತುವೆ ನಿರ್ಮಾಣಗೊಂಡಿರುವುದೇ ಬೇರೆ ದಿಕ್ಕಿನಲ್ಲಿ. ಮಳೆಗಾಲದಲ್ಲಿ ಪ್ರವಾಹ ಬಂದಾಗ ಹಳ್ಳ ಉಕ್ಕಿ ಹರಿಯುತ್ತಿರುತ್ತದೆ. ಈಗ ಅವೈಜ್ಞಾನಿಕ ಸೇತುವೆಯಿಂದ ಹಳ್ಳದ ನೀರು ಅಕ್ಕಪಕ್ಕದ ಹೊಲಗಳಿಗೆ ಮತ್ತು ಊರೊಳಗೆ ನುಗ್ಗಬಹುದು ಎಂಬ ಚಿಂತೆ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 2023-24ನೇ ಹಣಕಾಸು ವರ್ಷದಲ್ಲಿ ₹82 ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಗಾರಿ ಕೈಗೊಂಡಿದ್ದು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ಉಪವಿಭಾಗದ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಟೆಂಡರ್‌ನ್ನು ಬೀದರ್‌ ಮೂಲದ ಗುತ್ತಿಗೆದಾರ ಪಡೆದುಕೊಂಡಿದ್ದಾರೆ. ಆದರೆ ಕೆಲಸ ನಿರ್ವಹಿಸುವವರು ಮಾತ್ರ ಸಿಂಧನೂರಿನ ಬೇನಾಮಿ ವ್ಯಕ್ತಿ. ಯಾವುದೇ ಮಾಹಿತಿ ಕೇಳಿದರೂ ಸ್ಥಳದಲ್ಲಿರುವ ಕಾರ್ಮಿಕರು ಬೇನಾಮಿ ಗುತ್ತಿಗೆದಾರನತ್ತ ಬೆರಳು ತೋರಿಸಿದರೆ ಅವರು ಮೂಲ ಗುತ್ತಿಗೆದಾರರ ಹೆಸರು ಹೇಳಿ ನುಣುಚಿಕೊಂಡರು. ಈ ಕುರಿತು ಮಾಹಿತಿಗಾಗಿ 'ಪ್ರಜಾವಾಣಿ' ಹತ್ತಾರು ಬಾರಿ ಸಂಪರ್ಕಿಸಿದರೆ ಪಂಚಾಯತ್‌ ರಾಜ್‌ ಇಲಾಖೆ ಎಇಇ ಧರಣೇಂದ್ರ ಕರೆ ಸ್ವೀಕರಿಸಲಿಲ್ಲ. ಕಾಮಗಾರಿ ಹೇಗೆ ನಡೆಯತ್ತಿದೆ, ಗುತ್ತಿಗೆದಾರರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಒಬ್ಬ ಎಂಜಿನಿಯರ್‌ ಸಹ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ದೂರಿದರು.

ADVERTISEMENT

ಆಗಿದ್ದೇನು: ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಅದರ ವಿನ್ಯಾಸವೇ ಸರಿಯಾಗಿಲ್ಲ. ಹಳ್ಳದ ನೀರು ಹರಿಯುವ ದಿಕ್ಕು ಬದಲಿಸಲಾಗಿದೆ. ವಿನ್ಯಾಸ ತಪ್ಪಾಗಿರುವುದು ಸಾಮಾನ್ಯ ಜನರಿಗೆ ಗೋಚರಿಸುತ್ತದೆ. ಆದರೆ ಅಂದಾಜು ಪತ್ರಿಕೆ ಸಿದ್ಧಪಡಿಸಿರುವ ಎಂಜಿನಿಯರ್‌ಗಳಿಗೆ ಇದು ಅರಿವಿಗೆ ಬರಲಿಲ್ಲವೆ? ಎಂದು ಗ್ರಾಮಸ್ಥರಾದ ಶರಣಪ್ಪ ಬನ್ನಿಗೋಳ, ಹನುಮಪ್ಪ ಹರ್ಲಾಪುರ, ವಸಂತಕುಮಾರ ಹೊಸೂರು, ಪ್ರಕಾಶ ಹಗೇದಾಳ, ನಿಂಗನಗೌಡ, ರಾಯಪ್ಪ, ಯಮನೂರಪ್ಪ ಇತರರು ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳಕ್ಕೆ ಪ್ರವಾಹ ಬಂದರೆ ನೀರು ನುಗ್ಗಿ ಅಕ್ಕಪಕ್ಕದ ಹೊಲಗಳು ಹಾಳಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ ರೈತರು ಕನಿಷ್ಟ ನೀರು ನುಗ್ಗದಂತೆ ತಡೆಗೋಡೆಯನ್ನಾದರೂ ನಿರ್ಮಿಸಬೇಕಿದೆ ಎಂದರು.

ನಿರ್ಲಕ್ಷ್ಯ: ಅವೈಜ್ಞಾನಿಕ ಕಾಮಗಾರಿ ಕುರಿತು ಎಂಜಿನಿಯರ್‌ಗಳ ಗಮನಕ್ಕೆ ತಂದರೂ ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಎಂಜಿನಿಯರ್‌ಗಳ ನಿರ್ಲಕ್ಷ್ಯ ಮಿತಿಮೀರಿದೆ. ಈಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಗುತ್ತಿಗೆದಾರ ಮಾಡಿದ್ದೇ ಮಾನ್ಯ ಎನ್ನುವಂತಾಗಿದೆ. ಸ್ಥಳದಲ್ಲಿದ್ದ ಮಣ್ಣನ್ನೇ ಫಿಲ್ಟರ್‌ ಮಾಡಿದ ಮರಳು ಮತ್ತು ಅಲ್ಲಿಯೇ ಇರುವ ಮಣ್ಣನ್ನೇ ಕಾಮಗಾರಿಗೆ ಬಳಸಿಕೊಂಡಿದ್ದಾರೆ. ತೀರಾ ಕಳಪೆ ದರ್ಜೆಯ ಸಿಮೆಂಟ್ ಬಳಸಲಾಗಿದೆ. ಕಟ್ಟಡಕ್ಕೆ ಕಾಟಾಚಾರಕ್ಕೆ ನೀರುಣಿಸುತ್ತಿದ್ದಾರೆ ಗ್ರಾಮಸ್ಥರ ಮನವಿಯನ್ನು ಗುತ್ತಿಗೆದಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಕಾಮಗಾರಿಯ ವಿವರ ತಿಳಿದಿಲ್ಲ ಈ ಕುರಿತು ಉಪ ವಿಭಾಗದಿಂದ ಮಾಹಿತಿ ಪಡೆಯುತ್ತೇನೆ
ಎಚ್‌.ಸತ್ಯಪ್ಪ ಇಇ ಪಂ.ರಾ ಇಲಾಖೆ ಕೊಪ್ಪಳ ವಿಭಾಗ
ಸೇತುವೆ ಕಾಮಗಾರಿ ಅವೈಜ್ಞಾನಿಕ ಎಂಬುದು ಸಾಮಾನ್ಯ ರೈತರಿಗೂ ತಿಳಿಯುತ್ತದೆ. ಆದರೆ ಇಂತಹ ಸಣ್ಣ ವಿಚಾರ ಎಂಜಿನಿಯರ್‌ಗಳಿಗೆ ತಿಳಿಯದಿರುವುದು ಅಚ್ಚರಿ
ಶರಣಪ್ಪ ಟಕ್ಕಳಕಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.