ADVERTISEMENT

ಹನುಮಸಾಗರ | ಯೂರಿಯಾಗೆ ಹೆಚ್ಚಿದ ಬೇಡಿಕೆ; ಮುಗಿಬಿದ್ದ ರೈತರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:50 IST
Last Updated 24 ಜುಲೈ 2025, 5:50 IST
ಹನುಮಸಾಗರದ ಆಗ್ರೋ ಕೇಂದ್ರದ ಮುಂದೆ ಬುಧವಾರ ಯೂರಿಯಾ ಖರೀದಿಸಲು ಮುಗಿಬಿದ್ದಿದ್ದ ರೈತರು
ಹನುಮಸಾಗರದ ಆಗ್ರೋ ಕೇಂದ್ರದ ಮುಂದೆ ಬುಧವಾರ ಯೂರಿಯಾ ಖರೀದಿಸಲು ಮುಗಿಬಿದ್ದಿದ್ದ ರೈತರು   

ಹನುಮಸಾಗರ: ತಾಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೋಬಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಆಗ್ರೋ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. 

ಕಡಿಮೆ ದರದಲ್ಲಿ ಯೂರಿಯಾ ಲಭ್ಯವಿರುವುದರಿಂದ ಮೆಕ್ಕೆಜೋಳ, ತೊಗರಿ, ಸಜ್ಜೆ ಬೆಳೆದಿರುವ ರೈತರು ದೊಡ್ಡ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ.

ಗ್ರಾಮದ ಒಂದು ಅಂಗಡಿಯಲ್ಲಿ ಮಾತ್ರ ಗೊಬ್ಬರ ಲಭ್ಯವಿದ್ದು ಪ್ರತಿ ರೈತನಿಗೆ ಎರಡು ಪ್ಯಾಕೆಟ್‌ ವಿತರಣೆ ಮಾಡಲಾಗಿದೆ. ಬುಧವಾರ ಬೆಳಿಗ್ಗೆ 7 ಗಂಟೆಯಿಂದಲೇ ಅಂಗಡಿ ಮುಂದೆ ಸಾಲು ಕಂಡು ಬಂತು. ಗದ್ದಲ ಹೆಚ್ಚಾದಾಗ ಪೊಲೀಸ್ ಸಿಬ್ಬಂದಿ ರೈತರನ್ನು ಸರದಿಯಲ್ಲಿ ನಿಲ್ಲಿಸಿದರು.

ADVERTISEMENT

ಇದಕ್ಕೊಂದು ಬದಲಿ ಮಾರ್ಗವಾಗಿ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರದ ಬಳಕೆ ಕೂಡಾ ಹೆಚ್ಚಾಗಿದೆ. ಆದರೆ, ಕಾಂಪ್ಲೆಕ್ಸ್ ಹಾಕಿದ ನಂತರ ಯೂರಿಯಾ ಅಗತ್ಯವಿರುವುದರಿಂದ ಇದರ ಬೇಡಿಕೆ ಇನ್ನಷ್ಟು ಜೋರಾಗಿದೆ.

‘ಯೂರಿಯಾ ಮತ್ತು ಫಾಸ್ಫೇಟ್ ಗೊಬ್ಬರಗಳು ನೆಲ ಮತ್ತು ಜೀವಜಾಲಕ್ಕೆ ಹಾನಿಕರ. ರೈತರು ನ್ಯಾನೋ ಗೊಬ್ಬರದತ್ತ ಗಮನ ಹರಿಸಬೇಕು. ಇವು ಕಡಿಮೆ ಪ್ರಮಾಣದಲ್ಲಿಯೇ ಹೆಚ್ಚು ಫಲಿತಾಂಶ ನೀಡಬಹುದಾದ ಶಕ್ತಿಯುತ ಗೊಬ್ಬರಗಳಾಗಿವೆ’ ಎಂದು ಕೃಷಿತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹನುಮಸಾಗರದ ಆಗ್ರೋ ಕೇಂದ್ರದ ಮುಂದೆ ಬುಧವಾರ ಯೂರಿಯಾ ಖರೀದಿಸಲು ಸರದಿಯಲ್ಲಿ ನಿಂತಿದ್ದ ರೈತರು

ನ್ಯಾನೊ ಯೂರಿಯಾ ಬಳಸಲು ಸಲಹೆ

ಅಳವಂಡಿ: ‘ನ್ಯಾನೊ ಯೂರಿಯಾ ದ್ರವರೂಪದ ರಸಗೊಬ್ಬರವಾಗಿದ್ದು ಸಾಂಪ್ರದಾಯಿಕ ಯೂರಿಯಾಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಜೀವನ ಸಾಬ್ ಕುಷ್ಟಗಿ ಹೇಳಿದರು.

ಗ್ರಾಮದ ಎಣ್ಣೆ ಬೀಜ ಸಹಕಾರ ಸಂಘದಲ್ಲಿ ನ್ಯಾನೊ ಯೂರಿಯಾ ಹಾಗೂ ಡಿಎಪಿ ಕುರಿತು ಮಾಹಿತಿ ಹಾಗೂ ರಾಸಾಯನಿಕ ಗೊಬ್ಬರ ಸಂಗ್ರಹ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.

‘ಸಸ್ಯಗಳಿಗೆ ಸಾರಜನಕ ಒದಗಿಸುತ್ತದೆ. ನ್ಯಾನೊ ಯೂರಿಯಾ ಸಣ್ಣ ಕಣಗಳ ಗಾತ್ರ ಹೊಂದಿದ್ದು ಸಸ್ಯಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.  ಪರಿಸರಕ್ಕೆ ಹಾನಿಕಾರಕವಲ್ಲ. ಬೆಳೆಯ ಅಗತ್ಯಕ್ಕೆ ತಕ್ಕಂತೆ ಸರಿಯಾದ ಪ್ರಮಾಣದಲ್ಲಿ ನ್ಯಾನೊ ಯೂರಿಯಾ ಬಳಸಬೇಕು’ ಎಂದರು.

ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ ಮಾತನಾಡಿ, ‘ರೈತರು ಸಂಪ್ರದಾಯಕ ಯೂರಿಯಾವನ್ನು ಬಿಟ್ಟು ನ್ಯಾನೊ ಯೂರಿಯಾ ಬಳಸಬೇಕು. ಇದು ಇಳುವರಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಖರ್ಚು ಕಡಿಮೆ ಆಗಲಿದೆ’ ಎಂದರು.

ರೈತರಾದ ಮಾಂತೇಶ ಇಟಗಿ, ಕರಿಯಪ್ಪ ಮ್ಯಾಗಡಿ, ಸಂಜು ರೆಡ್ಡಿ ನಾಗರಹಳ್ಳಿ, ಬಸವರಾಜ, ಶೇಷರೆಡ್ಡಿ ತವದಿ, ಖಾದರ ಸಾಬ, ವಿರುಪಣ್ಣ ಹಕ್ಕಂಡಿ, ಕೋಟೆಪ್ಪ ಇಟಗಿ, ಸತೀಶರೆಡ್ಡಿ, ಸುರೇಶಗೌಡ ಮಾಲಿ ಪಾಟೀಲ, ಈರಪ್ಪ, ಬಸನಗೌಡ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.