ADVERTISEMENT

ಯೂರಿಯಾ | ಕೃತಕ ಅಭಾವ ಸೃಷ್ಟಿಸಿದರೆ ಕ್ರಮಕ್ಕೆ ಸೂಚನೆ ನೀಡಿದ ಸಚಿವ ಶಿವರಾಜ ತಂಗಡಗಿ

ಯೂರಿಯಾ ರಸಗೊಬ್ಬರ ಸಮರ್ಪಕ ವಿತರಣೆ ನಿರ್ವಹಣೆಗೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:52 IST
Last Updated 30 ಜುಲೈ 2025, 5:52 IST
ಕೊಪ್ಪಳದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು 
ಕೊಪ್ಪಳದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು    

ಕೊಪ್ಪಳ: ‘ಯೂರಿಯಾ ರಸಗೊಬ್ಬರವನ್ನು ಮಾರಾಟಕ್ಕಾಗಿ ಒಂದೇ ಕಂಪನಿ ಅಥವಾ ಎಜೆನ್ಸಿಯವರಿಗೆ ನೀಡಿದರೆ ಖರೀದಿಸಲು ರೈತರಿಗೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿರುವ ಎಲ್ಲಾ ರೈತರ ಸೊಸೈಟಿ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಟಿಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.   

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯ ಕುರಿತಾಗಿ ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ‘ಜಿಲ್ಲೆಯಲ್ಲಿ ಕೆಲವೇ ಅಂಗಡಿಗಳಿಗೆ ರಸಗೊಬ್ಬರ ಮಾರಾಟ ಮಾಡಲು ನೀಡಿರುವುದಾಗಿ ರೈತರು ದೂರು ನೀಡಿದ್ದಾರೆ. ಇದರಿಂದ ರೈತರು ಸರತಿಯಲ್ಲಿ ನಿಲ್ಲುವಂತಾಗಿದೆ. ಕೂಡಲೇ ಜಿಲ್ಲೆಯ ಸಹಕಾರ ಸಂಘಗಳಿಗೆ ಮತ್ತು ರಸಗೊಬ್ಬರ ಮಾರಾಟ ಎಜೆನ್ಸಿಯವರಿಗೆ ಸಮಾಜವಾಗಿ ಹಂಚಿಕೆ ಮಾಡಿ ರೈತರಿಗೆ ಯೂರಿಯಾ ತಲುಪಿಸಲು ಕೃಷಿ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ನಿಗದಿತ ದರಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡುವ ರಸಗೊಬ್ಬರ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿ ಅನುಮತಿ ರದ್ದುಪಡಿಸಬೇಕು. ಜಿಲ್ಲೆಯಲ್ಲಿ ಈ ವರ್ಷ ಮಳೆ ಬೇಗನೆಯಾಗಿರುವುದರಿಂದ ಭತ್ತದ ನಾಟಿ ಜೊತೆಗೆ ಮುಂಗಾರು ಬೆಳೆಗಳ ಬಿತ್ತನೆಯು ಬೇಗನೆ ಆಗಿದೆ. ಕಳೆದ ಬಾರಿಗಿಂತಲು ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಾಗಿದ್ದು ರಸಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ‘ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯ ನೀರಾವರಿ ಪ್ರದೇಶಗಳಲ್ಲಿ ಭತ್ತದ ಬೆಳೆಗೆ ಹಾಗೂ ಉತ್ತಮ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾದ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳಿಗೂ ಯೂರಿಯಾ ಅವಶ್ಯಕತೆಯಿರುವ ಕಾರಣ ಬೇಡಿಕೆ ಹೆಚ್ಚಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಕೃಷಿ ಇಲಾಖೆ ಉಪ ನಿರ್ದೇಶಕ ಎಲ್.ಸಿದ್ದೇಶ್ ಸೇರಿದಂತೆ ಅನೇಕರು ಇದ್ದರು.

ಗೊಬ್ಬರ ಮಾರಾಟದ ಕುರಿತು ನಿತ್ಯ ವರದಿ ನೀಡಲು ನಿರ್ದೇಶನ      ನಿಗದಿಗಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಕ್ರಮಕ್ಕೆ ಸೂಚನೆ ರೈತರು, ರಸಗೊಬ್ಬರ ಮಾರಾಟಗಾರರ ಜೊತೆಗೂ ಸಭೆ

ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು ಅಂಥ ಅಂಗಡಿಗಳಿಗೆ ಭೇಟಿ ನೀಡಿ ಅಧಿಕಾರಿಗಳು ನಿಗಾ ವಹಿಸಬೇಕು.

-ರಾಘವೇಂದ್ರ ಹಿಟ್ನಾಳ ಶಾಸಕ

ರಸಗೊಬ್ಬರ ಸಮರ್ಪಕ ವಿಲೇವಾರಿ ಕುರಿತು ನಿಗಾ ವಹಿಸಲು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ.

-ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ

ಹೆಚ್ಚುವರಿಯಾಗಿ 85 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿರುವುದರಿಂದ ಬೇಡಿಕೆ ಹೆಚ್ಚಿದೆ. ಕಳೆದ ವರ್ಷ ಜುಲೈನಲ್ಲಿ 9610 ಮತ್ತು ಈ ಬಾರಿ 10360 ಮೆಟ್ರಿಕ್‌ ಟನ್ ಬೇಡಿಕೆಯಿದೆ. ಈಗಾಗಲೇ 11252 ಟನ್ ಯೂರಿಯಾ ಪೂರೈಸಲಾಗಿದೆ.

-ರುದ್ರೇಶಪ್ಪ ಟಿ.ಎಸ್‌. ಕೃಷಿ ಇಲಾಖೆ ಜಂಟಿ ನಿರ್ದೇಶಕ

ಹೆಚ್ಚುವರಿ ಗೊಬ್ಬರಕ್ಕೆ ಸಚಿವರ ಮೊರೆ ಕೊಪ್ಪಳ: ಜಿಲ್ಲೆಗೆ ಆಗಸ್ಟ್‌ನಲ್ಲಿ 11 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಅಗತ್ಯವಿದ್ದು ಆ. 3ರ ಒಳಗೆ ಮೂರು ಹಂತಗಳಲ್ಲಿ 3431 ಮೆಟ್ರಿಕ್‌ ಟನ್‌ ಗೊಬ್ಬರ ಬರಲಿದೆ. ಇನ್ನುಳಿದ ಹೆಚ್ಚುವರಿ ಗೊಬ್ಬರಕ್ಕೆ ಕೃಷಿ ಸಚಿವರನ್ನು ಭೇಟಿಯಾಗುವೆ ಎಂದು ಸಚಿವ ತಂಗಡಗಿ ಹೇಳಿದರು. ‘ಎರಡು ಬೆಳೆಗೆ ಬೇಕಾಗುವಷ್ಟು ಯೂರಿಯಾವನ್ನು ಈಗಲೇ ರೈತರು ಖರೀದಿ ಮಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಮುಂದೆಯೂ ತೊಂದರೆಯಾಗುವುದಿಲ್ಲ. ರಸಗೊಬ್ಬರ ಮಾರಾಟ ಮಾಡುವ ಪರವಾನಗಿ ಹೊಂದಿರುವ ಸೊಸೈಟಿಗಳು ಜಿಲ್ಲೆಯಲ್ಲಿ 73 ಮಾತ್ರ ಇವೆ. ಹೀಗಾಗಿ ಕೆಲವು ತಾಲ್ಲೂಕುಗಳಲ್ಲಿ ಪೂರೈಕೆ ಏರಿಳಿತ ಆಗುತ್ತಿದೆ. ಜಿಲ್ಲೆಯ ಆರು ಅಂಗಡಿಗಳಲ್ಲಿ ದಾಸ್ತಾನು ಈಗಾಗಲೇ ಮಾರಾಟ ಮಾಡಿದ್ದರೂ ಅದನ್ನು ದಾಖಲೆಗಳ ತೋರಿಸಲ್ಲ. ಅವುಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ತಿಳಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.