
ಕಾರಟಗಿಯ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ನಿಮಿತ್ತ ಮಂಗಳವಾರ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದರು
ಕಾರಟಗಿ: ವೈಕುಂಠ ಏಕಾದಶಿ ದಿನವನ್ನು ಶ್ರದ್ದಾ, ಭಕ್ತಿ, ಸಂಭ್ರಮದೊಂದಿಗೆ ಮಂಗಳವಾರ ಆಚರಿಸಲಾಯಿತು.
ಪಟ್ಟಣದ ಪುರಾತನ ದೇವಾಲಯವಾಗಿರುವ ವೆಂಕಟೇಶ್ವರ ದೇವಾಲಯವನ್ನು ಯುವಕರು 2 ದಿನದಿಂದ ಸ್ವಚ್ಛಗೊಳಿಸಿದ್ದರು. ದೇವಾಲಯದ ಮಹಾದ್ವಾರದಿಂದ ದೇವಾಲಯದ ಒಳಗಿನವರೆಗೂ ಹೂವು, ಬಾಳೆಗೊನೆ, ಟೆಂಗಿನಗರಿ, ಮಾವಿನ ಎಲೆಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ಮಹಿಳೆಯರು ಸ್ವಪ್ರೇರಣೆಯಿಂದ ಸೆಗಣಿ ನೀರು ಹಾಕಿ ಬಣ್ಣ, ಬಣ್ಣದ ರಂಗೋಲಿಯನ್ನು ಬಿಡಿಸಿ ಕಳೆ ಹೆಚ್ಚಿಸಿದ್ದರು.
ಅರ್ಚಕ ಭೋಗೇಶಾಚಾರ್ಯ ಇನಾಮದಾರ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ, ಪಂಚಾಮೃತಾಭಿಷೇಕ, ತುಳಸಿ ಅರ್ಚನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ನಾಗರಿಕರು, ಮಹಿಳೆಯರು ಕುಟುಂಬ ಪರಿವಾರದೊಂದಿಗೆ ನಸುಕಿನ ಜಾವದಿಂದ ರಾತ್ರಿಯವರೆಗೂ ಆಗಮಿಸಿ ದರ್ಶನ ಪಡೆದರು. ಬೆಳಿಗ್ಗೆ ನೂರಾರು ನಾಗರಿಕರು, ಮಹಿಳೆಯರು ಸಾಲಾಗಿ ನಿಂತು ದರ್ಶನ ಪಡೆದರು. ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ, ಭಕ್ತಿಯನ್ನು ಸಮರ್ಪಿಸಿ ಧನ್ಯತಾಭಾವ ಮೆರೆದರು.
ಆಗಮಿಸಿದ್ದ ಭಕ್ತರಿಗೆ ದೇವಸ್ಥಾನ ಸೇವಾ ಸಮಿತಿಯ ಯುವಕರು ಪ್ರಸಾದ ವಿತರಿಸಿದರು.
ಅರ್ಚಕ ಭೋಗೇಶಾರ್ಯ ಇನಾಮದಾರ ಮಾತನಾಡಿ,‘ವರ್ಷದಲ್ಲೇ ಅತ್ಯಂತ ಪವಿತ್ರ ದಿನವೆಂದು ವೈಕುಂಠ ಏಕಾದಶಿ ದಿನವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ವೆಂಕಟೇಶ್ವರ ದರ್ಶನ ಪಡೆಯುವುದು, ಉಪವಾಸ ಮಾಡುವುದು ಇನ್ನೂ ಶ್ರೇಷ್ಠ. ಇದರ ಮಹತ್ವದಿಂದಲೇ ಇಂದು ನೂರಾರು ಭಕ್ತರು ಆಗಮಿಸಿ, ದರ್ಶನ ಪಡೆದರು. ಈ ಸಂಪ್ರದಾಯ ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ’ ಎಂದರು.