ಯಲಬುರ್ಗಾ: ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ ಫೆ.13ರಂದು ರಾಜ್ಯಮಟ್ಟದ ಹೋರಾಟ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತರ ಪೂರ್ವಭಾವಿ ಸಭೆ ಹಾಗೂ ಭಿತ್ತಿಪತ್ರಗಳ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾ ಸಂಚಾಲಕ ಶರಣು ಗಡ್ಡಿ ಮಾತನಾಡಿ, ಆಶಾ ಕಾರ್ಯಕರ್ತೆಯರ ವಿಧಾನಸೌಧಾ ಚಲೋ ಪ್ರತಿಭಟನೆಯು ರಾಜ್ಯಮಟ್ಟದಲ್ಲಿ ನಡೆಯಲಿದ್ದು, ತಾಲ್ಲೂಕಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳಾದ ವೇತನ ಹೆಚ್ಚಳ, ಸೇವೆಯನ್ನು ಕಾಯಂಗೊಳಿಸುವುದು, ಅನಗತ್ಯವಾದ ಕಿರುಕುಳವನ್ನು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಜಾರಿಗೊಳಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ದೊಡ್ಡದಿದೆ. ಮಹತ್ವದ ಸೇವೆಯ ಕಾರ್ಯಕ್ಷಮತೆಯನ್ನು ಮನಗಂಡು ಸರ್ಕಾರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಬಲ ಪ್ರದರ್ಶನಕ್ಕೆ ಅಧಿಕ ಸಂಖ್ಯೆಯಲ್ಲಿ ಸೇರಬೇಕು ಎಂದರು.
ಇದೇ ಸಂದರ್ಭದಲ್ಲಿ ಹೋರಾಟದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಂಘದ ಮುಖಂಡರಾದ ಶಂಕ್ರಮ್ಮ ಹಳ್ಳಿಕೇರಿ, ಶೋಭಾ ಹೂಗಾರ, ಕಾರ್ಯದರ್ಶಿ ದೀಪಾ, ಶಿವಮ್ಮ, ಮಂಜುಳಾ, ಅನ್ನಪೂರ್ಣ, ಗೀತಾ, ಬಸಮ್ಮ, ಶರಣಮ್ಮ, ಸಕ್ರಮ್ಮ, ಮಹಾದೇವಿ, ರೇಣುಕಾ, ದುರ್ಗಾ ದೇವಕ್ಕ ವಡ್ಡರ, ಅಕ್ಕಮ್ಮ ಪಲ್ಲೇದ, ಮೀನಾಕ್ಷಿ ಸೇರಿ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.