ADVERTISEMENT

ಎಸಿಬಿ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 10:14 IST
Last Updated 20 ಜುಲೈ 2022, 10:14 IST
   

ಕೊಪ್ಪಳ: ಜಮೀನಿನ ಪಹಣಿ ಪತ್ರ ತಿದ್ದುಪಡಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲ್ಲೂಕಿನ ಕವಲೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕರಿಯಪ್ಪ ಎಂ. ಹುಬ್ಬಳ್ಳಿ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕವಲೂರು ಗ್ರಾಮದ ಶಿವಪ್ಪ ಬೇವೂರು ತಮ್ಮ ತಂದೆಯ ಹೆಸರಿನಲ್ಲಿದ್ದ ಪಹಣಿ ಪತ್ರ ತಿದ್ದುಪಡಿ ಮಾಡಿಕೊಡುವಂತೆ ಕೊಪ್ಪಳ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಈ ಕೆಲಸ ಮಾಡಿಕೊಡಲು ₹5,000 ಕೊಡಬೇಕು ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರಿಯಪ್ಪ ಮುಂಗಡವಾಗಿ ₹1,000 ಪಡೆದುಕೊಂಡಿದ್ದರು. ಬಾಕಿ ಉಳಿದ ₹4,000 ನೀಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ಶಿವಪ್ಪ ಜು. 19ರಂದು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ADVERTISEMENT

ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಅಧಿಕಾರಿಗಳು ಬುಧವಾರ ನಗರದ ಸಿಂಪಿ ಲಿಂಗಣ್ಣ ರಸ್ತೆಯ ಟ್ರಿನಿಟಿ ಶಾಲೆಯ ಹತ್ತಿರದ ಎದುರು ಇರುವ ಕೊಠಡಿಯೊಂದರಲ್ಲಿ ಕರಿಯಪ್ಪ ಲಂಚ ಪಡೆಯುವಾಗ ದಾಳಿ ನಡೆಸಿದ್ದಾರೆ.

ಬಳ್ಳಾರಿಯ ಎಸಿಬಿ ಎಸ್‌ಪಿ ಹರಿಬಾಬು ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕೊಪ್ಪಳ ಎಸಿಬಿ ಠಾಣೆಯ ಡಿಎಸ್‌ಪಿ ಶಿವಕುಮಾರ್‌ ಎಂ.ಸಿ., ಇನ್‌ಸ್ಟೆಕ್ಟರ್‌ ಶಿವರಾಜ ಇಂಗಳೆ, ಸಿಬ್ಬಂದಿ ಸಿದ್ದಯ್ಯ, ರಂಗನಾಥ, ಗಣೇಶ, ಜಗದೀಶ, ಉಮೇಶ ಹಾಗೂ ಸವಿತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.