ಕುಷ್ಟಗಿ: ಶನಿವಾರ ಇಲ್ಲಿಯ ನಿಲ್ದಾಣದಿಂದ ನಿಯಮಿತ ಸಂಚಾರ ಆರಂಭಿಸಿದ ತಳಕಲ್ ಹುಬ್ಬಳ್ಳಿವರೆಗಿನ ರೈಲು ಸಂಚಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರಯಾಣಿಕರು ಚುಮುಚುಮು ವೇಳೆ ಖುಷಿಯಿಂದಲೇ ರೈಲು ಏರಿದ್ದು ಕಂಡುಬಂದಿತು.
ರಾತ್ರಿ ನಿಲ್ದಾಣದಲ್ಲಿಯೇ ತಂಗಿದ್ದ ರೈಲು ಬೆಳಿಗ್ಗೆ 7 ಗಂಟೆಗೆ ಗದಗ ಹುಬ್ಬಳ್ಳಿಯತ್ತ ಸಂಚಾರ ಆರಂಭಿಸಿತು. ಸುಮಾರು 200ಕ್ಕೂ ಅಧಿಕ ಜನರು ಕೌಂಟರ್ ಬಳಿ ಸರದಿಯಲ್ಲಿ ನಿಂತು ಟಿಕೆಟ್ ಖರೀದಿಸಿ ಪ್ರಯಾಣ ಬೆಳೆಸಿದರು ಎಂಬುದು ಗೊತ್ತಾಗಿದೆ. ಜನಸಾಮಾನ್ಯರು, ಮಕ್ಕಳು, ಮಹಿಳೆಯರು, ಪ್ರಮುಖರು, ರೈತರು, ಉದ್ಯೋಗಾಕಾಂಕ್ಷಿಗಳು ಸೇರಿದಂತೆ ಬಹಳಷ್ಟು ಜನರು ಇದ್ದುದು ಕಂಡುಬಂದಿತು. ಅದೇ ರೀತಿ ವಿವಿಧ ಸಂಘಟನೆಗಳ ಪ್ರಮುಖರು ಸಹ ಕುಷ್ಟಗಿ ನಿಲ್ದಾಣದಿಂದ ಲಿಂಗನಬಂಡಿವರೆಗೂ ರೈಲಿನಲ್ಲಿ ಪ್ರಯಾಣ ಬೆಳೆಸಿ ಈ ನೂತನ ಮಾರ್ಗದಲ್ಲಿ ಮೊದಲ ಪ್ರಯಾಣದ ಅನುಭವ ಪಡೆದರು.
ಪಟ್ಟಣದಿಂದ ಸುಮಾರು 2 ಕಿ.ಮೀ ದೂರ ಇರುವ ರೈಲು ನಿಲ್ದಾಣಕ್ಕೆ ಜನರು ಆಟೊಗಳು ಮತ್ತು ಸ್ವಂತ ವಾಹನಗಳಲ್ಲಿ ಬಂದರು. ಶುಕ್ರವಾರ ರಾತ್ರಿ ಹುಬ್ಬಳ್ಳಿಯಿಂದ ರೈಲಿನಲ್ಲಿ ಬಂದು ಇಲ್ಲಿಯ ನಿಲ್ದಾಣದಲ್ಲಿ ಇಳಿದ ಅನೇಕ ಪ್ರಯಾಣಿಕರು ಮನೆ ತಲುಪಲು ಪರದಾಡಬೇಕಾಯಿತು ಎಂದು ಮೂಲಗಳು ತಿಳಿಸಿವೆ. ರೈಲು ಬರುವ ಮತ್ತು ಹೊರಡುವ ಸಮಯದಲ್ಲಿ ಬಸ್ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರಯಾಣಿಕರಾದ ವೀರಭದ್ರಗೌಡ, ಪ್ರಾಣೇಶ ಕಂದಗಲ್ ಇತರರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.