ADVERTISEMENT

ವಕ್ಫ್ ಆಸ್ತಿ, ಮೋದಿ, ಅಮಿತ್ ಶಾಗೆ ನೀಡಿದ ವರದಕ್ಷಿಣೆಯಲ್ಲ: ಅಬ್ದುಲ್ ಮಜೀದ್

ಗಂಗಾವತಿ: ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ ಬೃಹತ್ ಜನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:34 IST
Last Updated 12 ಆಗಸ್ಟ್ 2025, 6:34 IST
ಗಂಗಾವತಿ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ವತಿಯಿಂದ ಸೋಮವಾರ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಹಾಗೂ ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ ಬೃಹತ್ ಜನ ಸಮಾವೇಶದಲ್ಲಿ ಪಾಲ್ಗೊಂಡ ಮುಸ್ಲಿಮರು
ಗಂಗಾವತಿ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ವತಿಯಿಂದ ಸೋಮವಾರ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಹಾಗೂ ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ ಬೃಹತ್ ಜನ ಸಮಾವೇಶದಲ್ಲಿ ಪಾಲ್ಗೊಂಡ ಮುಸ್ಲಿಮರು   

ಗಂಗಾವತಿ: ‘ವಕ್ಫ್ ಆಸ್ತಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅವರ ಮಾವ ನೀಡಿದ ವರದಕ್ಷಿಣೆಯಲ್ಲ. ಸರ್ಕಾರದ ಆಸ್ತಿಯೂ ಅಲ್ಲ. ಮುಸ್ಲಿಮರು ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ನೀಡಿದ ಆಸ್ತಿಯಾಗಿದೆ’ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ವತಿಯಿಂದ ಸೋಮವಾರ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಹಾಗೂ ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ ಬೃಹತ್ ಜನ ಸಮಾವೇಶದಲ್ಲಿ ಅವರು ಮಾತನಾಡಿದರು.

‘ವಕ್ಫ್ ತಿದ್ದುಪಡಿ ಕಾಯ್ದೆ ಭಾರತದ 20 ಕೋಟಿ ಮುಸ್ಲಿಮರಿಗೆ ಅನ್ಯಾಯವೆಸಗುವಂತದ್ದಾಗಿದೆ.  ಮುಸ್ಲಿಮರಿಗೆ ಶರಿಯತ್ ಮತ್ತು ಸಂವಿಧಾನ ಎರಡು ಕಣ್ಣಿದ್ದಂತೆ. ಸರ್ಕಾರಗಳು ಯಾವುದೇ ಒಂದು ಕಾನೂನು ಜಾರಿ ಮಾಡುವ ಮುನ್ನ ಸಮುದಾಯದ ಹಿತಾಸಕ್ತಿ, ಸಾಧಕ-ಬಾಧಕ ಚರ್ಚಿಸಬೇಕು. ಇದ್ಯಾವುದು ಮಾಡದೇ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ವಕ್ಫ್ ಕಾನೂನು ತಿದ್ದುಪಡಿಗಾಗಿ ಪ್ರಧಾನಿಗೆ ಯಾವೊಬ್ಬ ಮುಸ್ಲಿಂ ವ್ಯಕ್ತಿಯೂ ಅರ್ಜಿ ಸಲ್ಲಿಸಲಿಲ್ಲ. ಆದರೂ ತಿದ್ದುಪಡಿ ಮಾಡಲಾಗಿದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಕ್ಫ್ ಬೋರ್ಡ್‌ನಲ್ಲಿ ಆರ್.ಎಸ್.ಎಸ್ ಸದಸ್ಯರನ್ನು ಕೂರಿಸುವ ಹುನ್ನಾರ ನಡೆಸಿ, ವಕ್ಫ್ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ನೀಡುವ ಷಡ್ಯಂತರ ಮಾಡಲಾಗಿದೆ. ಇದು ಮುಸ್ಲಿಮರ ವಿರುದ್ಧ ಪ್ರಧಾನಿ ಮೋದಿ ಸಾರಿದ ಯುದ್ಧವಾಗಿದೆ’ ಎಂದರು.

ಹಿರಿಯ ಚಿಂತಕ ಶಿವಸುಂದರ್ ಮಾತನಾಡಿ, ‘ಕೆಸರಿದ್ದರೆ ಮಾತ್ರ ಕಮಲ(ಬಿಜೆಪಿ) ಅರಳುತ್ತದೆ. ಮುಸ್ಲಿಮರು, ಪಾಕಿಸ್ತಾನ ಇಲ್ಲದಿದ್ದರೆ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲ್ಲ. ದೇಶದಲ್ಲಿ ಬಿಜೆಪಿ ಸರ್ಕಾರಗಳಿದ್ದರೆ ಮುಸ್ಲಿಮರಿಂದ ದೇಶಕ್ಕೆ ತೊಂದರೆಯಿದೆ ಎಂದು ಹಿಂದೂಗಳಿಗೆ ಭಯ ಹುಟ್ಟಿಸಿ,‌ ಮತ ಗಳಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಇದ್ದರೆ ಬರೀ ಹಿಜಾಬ್, ಕೋಮು ಗಲಭೆಗಳೇ ಹೆಚ್ಚು ಆಗುತ್ತವೆ’ ಎಂದು ಟೀಕಿಸಿದರು.

‘ಹಿಂದೂ ದೇವಾಲಯಗಳಲ್ಲಿ ಹಿಂದೂಗಳೇತರರು ಕೆಲಸದಲ್ಲಿ ಇರಬಾರದು ಎಂದು ಹಿಂದೂ ಕಾಯ್ದೆಗಳಲ್ಲಿ ಸ್ಪಷ್ಟವಾಗಿವೆ. ಆದರೆ ವಕ್ಫ್ ಬೋರ್ಡ್‌ನಲ್ಲಿ ಮಾತ್ರ ಮುಸ್ಲಿಮೇತರ ಸದಸ್ಯರನ್ನು ಒಳಗೊಂಡಿರಬೇಕು ಎನ್ನುವ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಮುಸ್ಲಿಂ ಸಮುದಾಯವನ್ನು ಬದುಕಿದ್ದು, ಸತ್ತಂತೆ ಮಾಡಲು ಕಾಯ್ದೆಗಳನ್ನು ತಿದ್ದುಪಡಿ ಮಾಡಿ, ಸಾವರ್ಕರ್ ನೀತಿ ಅನುಸರಿಸುತ್ತಿದೆ’ ಎಂದರು.

ಅಜಮೇರ್ ಶರೀಫ್ ಪೀಠಾಧಿಪತಿ ಸೈಯದ್ ಸರ್ವರ್‌ ಚಿಷ್ತಿ, ಸೈಯದ್ ತನ್ವೀರ್ ಹಾಷ್ಮಿ, ಅಬೂತಾಲಿಬ್ ರಹ್ಮಾನಿ, ಇಪ್ತೇಖಾರದ ಆಹ್ಮದ್ ಖಾಸ್ಮಿ, ಮಹ್ಮದ್ ಅಲಿ ಹಿಮಾಯತಿ, ಶೇಖ್ ಫರೀದ್ ಉಮ್ರಿ, ಎಸ್.ಬಿ.ಖಾದ್ರಿ ಭಾಗವಹಿಸಿದ್ದರು.

ಒಂದು ಸಲ ವಕ್ಫ್ ಆಸ್ತಿ ಯಾವತ್ತಿಗೂ ವಕ್ಫ್ ಆಸ್ತಿಯೇ ಆಗಿರುತ್ತದೆ ಎಂದು ಸುಪ್ರಿಂ ಕೋರ್ಟ್ ಈ ಹಿಂದೆಯೇ ಹೇಳಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಅಲ್ಪಸಂಖ್ಯಾತರ ಬಜೆಟ್‌ನಲ್ಲಿ ಶೇ 38ರಷ್ಟು ಕಡಿತ ಮಾಡಲಾಗಿದೆ.
ಮಕ್ಸೂದ್ ಇಮ್ರಾನ್ ರಷಾದಿ ಸಮುದಾಯದ ಮುಖಂಡ

ಅಮಂತ್ರಣ ಪತ್ರಿಕೆಯಲ್ಲಿ ಅನ್ಸಾರಿಗೆ ‘ಶಾಸಕರು’ ಪದ ಬಳಕೆ: ಕ್ರಮಕ್ಕೆ ಬಿಜೆಪಿಯಿಂದ ಠಾಣೆಗೆ ದೂರು

ಗಂಗಾವತಿ ತಾಲ್ಲೂಕು ಕ್ರೀಡಾಂಗಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ವತಿಯಿಂದ ನಡೆದ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಬೃಹತ್ ಜನ ಸಮಾವೇಶದ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಹೆಸರಿನ ಮುಂದೆ ‘ಘನ ಉಪಸ್ಥಿತಿ ಜನಪ್ರಿಯ ಶಾಸಕರು’ ಎಂಬ ಪದ ಬಳಕೆ ಮಾಡಲಾಗಿತ್ತು. ‘ಉದ್ದೇಶ ಪೂರ್ವಕವಾಗಿಯೇ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೆಸರಿನ ಮುಂದೆ ಜನಪ್ರಿಯ ಶಾಸಕರು ಎಂದು ನಮೂದಿಸಿದ್ದಾರೆ. ಹಾಗಾಗಿ ಕಾರ್ಯಕ್ರಮದ ಆಯೋಜಕರು ಮತ್ತು ವ್ಯವಸ್ಥಾಪಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಹಿರೂರು ನೇತೃತ್ವದಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಬೆಂಬಲಿಗರು ಪಕ್ಷದ ಕಾರ್ಯಕರ್ತರು ನಗರಠಾಣೆಯಲ್ಲಿ ಎಡಿಎಸ್ಪಿ ಹೇಮಂತ ಕುಮಾರ ನಗರಠಾಣೆ ಪಿಐ ಪ್ರಕಾಶ ಮಾಳೆ ಅವರಿಗೆ ಮನವಿ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ಹೀರಾಬಾಯಿ ಮನೋಹರಗೌಡ ಹೇರೂರು ವೀರೇಶ ಬಲ್ಕುಂದಿ ನಗರಸಭೆ ಸದಸ್ಯ ಮೌಲಸಾಬ ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ ಉಸ್ಮಾನ್ ಬಿಚ್ಚಿ ಗತ್ತಿ ಅಬ್ದುಲ್ ರಜಾಕ್ ಮುಸ್ತಾಕ್ ಆಹ್ಮದ್ ಯಮನೂರ ಚೌಡ್ಕಿ ಉಪಸ್ಥಿತರಿದ್ದರು. ಶಾಸಕರ ಪದ ಬಳಕೆ ಎಡವಟ್ಟಿಗೆ ವಿಷಾದ ‘ಸಮಾವೇಶದ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಹೆಸರಿನ ಮುಂದೆ ಘನ ಉಪಸ್ಥಿತಿ ಜನಪ್ರಿಯ ಶಾಸಕರು ಎಂಬ ಪದ ಮುದ್ರಣದ ಎಡವಟ್ಟಿನಿಂದ ಆಗಿದೆ. ಇದಕ್ಕೆ ನಮಗೂ ವಿಷಾದವಿದೆ’ ಎಂದು ಎಸ್.ಬಿ ಖಾದ್ರಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.