ADVERTISEMENT

ರೈತರ ಬೆಳೆ ರಕ್ಷಣೆಗೆ ಬದ್ಧ: ದಢೇಸೂಗೂರು

ಶಾಸಕ ಬಸವರಾಜ ದಢೇಸೂಗೂರು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 9:12 IST
Last Updated 17 ಏಪ್ರಿಲ್ 2021, 9:12 IST
ಕಾರಟಗಿ ತಾಲ್ಲೂಕಿನ 31ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೊನೆ ಭಾಗದ ರೈತರು ಎಡದಂಡೆ ಮುಖ್ಯನಾಲೆಯ ಬಳಿ ಕಾವಲು ಕಾದರು
ಕಾರಟಗಿ ತಾಲ್ಲೂಕಿನ 31ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೊನೆ ಭಾಗದ ರೈತರು ಎಡದಂಡೆ ಮುಖ್ಯನಾಲೆಯ ಬಳಿ ಕಾವಲು ಕಾದರು   

ಕಾರಟಗಿ: ‘ರೈತರ ಬೆಳೆ ರಕ್ಷಣೆಗೆ ನಾವು ಬದ್ಧ. ಅನ್ನದಾತರು ಆತಂಕಪಡುವ ಅಗತ್ಯವಿಲ್ಲ’ ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

ತುಂಗಭದ್ರಾ ಎಡದಂಡೆ ಮುಖ್ಯನಾಲೆಯ 31ನೇ ವಿತರಣಾ ಕಾಲುವೆಯ ತೂಬಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬಳಿಕ ಮಾತನಾಡಿದರು.

ರಾಯಚೂರು ಭಾಗಕ್ಕೆ ಕುಡಿಯುವ ನೀರು ಒದಗಿಸಲು ಎಡದಂಡೆ ಮುಖ್ಯನಾಲೆ ವ್ಯಾಪ್ತಿಯ ಕ್ರೆಸ್ಟ್‌ ಗೇಟ್‌ಗಳನ್ನು ಇಳಿಸಿ, ಕೆಳ ಭಾಗಕ್ಕೆ ನೀರು ಹರಿಯುವುದಕ್ಕೆ ತಡೆ ನೀಡಿದ್ದಕ್ಕೆ ಶಾಸಕ ದಢೇಸೂಗೂರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘31 ಮತ್ತು 32ನೇ ಕಾಲುವೆ ವ್ಯಾಪ್ತಿಯ ಕೆಳಭಾಗಕ್ಕೆ ನೀರಿನ ಅವಶ್ಯಕತೆ ಇದೆ. ಎಂದಿನಂತೆ ನೀರು ಪೂರೈಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ರೈತರಿಗೆ ಸಮರ್ಪಕ ನೀರು, 7 ತಾಸು ಬದಲು 9 ತಾಸು ವಿದ್ಯುತ್‌ ನೀಡುವಂತೆ ಮುಖ್ಯಮಂತ್ರಿಗಳಿಗೆ ನಮ್ಮ ಭಾಗದ ಜನಪ್ರತಿನಿಧಿಗಳು ಒತ್ತಾಯಿಸಿದ್ದು, ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರುಹೇಳಿದರು.

ಎಂಜಿನಿಯರ್‌ ಹರ್ಷ, ಸೂಗಪ್ಪ, ಗ್ರಾಮೀಣ ಸಿಪಿಐ ಉದಯರವಿ, ಸಬ್‌ ಇನ್‌ಸ್ಪೆಕ್ಟರ್‌ ಲಕ್ಕಪ್ಪ ಬಿ.ಅಗ್ನಿ, ವಿಶೇಷ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಗಂಗಾವತಿ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಯರಡೋಣಾ, ಪ್ರಮುಖರಾದ ವೀರೇಶ ಸಾಲೋಣಿ, ಸುಂಕದ ಚನ್ನಬಸಪ್ಪ, ಬಿಲ್ಗಾರ ನಾಗರಾಜ್ ವಕೀಲ, ಬೂದಿ ಪ್ರಭುರಾಜ್, ಶಿವಶರಣೇಗೌಡ ಯರಡೋಣಾ ಹಾಗೂ ಅಮರೇಶ ಕುಳಗಿ ಇದ್ದರು.

ರಾತ್ರಿ ಕಾವಲು: ಎಡದಂಡೆ ನಾಲೆಯ ತೂಬು ಇಳಿಸುವುದನ್ನು ವಿರೋಧಿಸಿ 31ನೇ ವಿತರಣಾ ನಾಲೆಯ ಕೊನೆ ಭಾಗದ ತಿಮ್ಮಾಪುರ, ಬೂದುಗುಂಪಾ ಭಾಗದ ರೈತರು ನಾಲೆ ಮೇಲೆ ಗುರುವಾರ ಆಹೋರಾತ್ರಿ ಕಾವಲು ಕಾದರು.

ಅಧಿಕಾರಿಗಳು ಗೇಟ್‌ ಇಳಿಸದಂತೆ ರೈತರು ಬಿಡಾರ ಹೂಡಿದ್ದಾರೆ. ನೀರು ನೀಡದಿದ್ದರೆ ಕಟಾವು ಹಂತದಲ್ಲಿರುವ ಬೆಳೆ ಒಣಗಿ ಅಪಾರ
ನಷ್ಟ ಸಂಭವಿಸಬಹುದಾಗಿದೆ ಎಂಬುದು ರೈತರ ಆತಂಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.