ADVERTISEMENT

ಮಕ್ಕಳ ಪೌಷ್ಟಿಕ ಆಹಾರದ ಗೋಧಿ ಹಳ್ಳದ ಪಾಲು

ಕುಷ್ಟಗಿ ಎಂಎಸ್‌ಪಿಟಿಸಿಗೆ ಸೇರಿದ ಗೋಧಿ ಚೀಲಗಳು, ಸಿಬ್ಬಂದಿ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 4:24 IST
Last Updated 4 ಅಕ್ಟೋಬರ್ 2025, 4:24 IST
ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರಕ್ಕೆ ಸೇರಿದ ಗೋಧಿ ಚೀಲಗಳು ಕುಷ್ಟಗಿ ತಾಲ್ಲೂಕು ಕುರುಬನಾಳ ಬಳಿ ಹಳ್ಳದಲ್ಲಿ ಕಂಡುಬಂದವು
ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರಕ್ಕೆ ಸೇರಿದ ಗೋಧಿ ಚೀಲಗಳು ಕುಷ್ಟಗಿ ತಾಲ್ಲೂಕು ಕುರುಬನಾಳ ಬಳಿ ಹಳ್ಳದಲ್ಲಿ ಕಂಡುಬಂದವು    

ಕುಷ್ಟಗಿ: ಮಹಿಳೆಯರು ಮತ್ತು ಅಂಗನವಾಡಿ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಿಡುಗಡೆಯಾಗಿದ್ದ ಗೋಧಿ ಮೂಟೆಗಳನ್ನು ಸಮೀಪದ ಕುರುಬನಾಳ ಹಳ್ಳದಲ್ಲಿ ಬಿಸಾಡಿದ್ದು ಸಾಕಷ್ಟು ಪ್ರಮಾಣದ ಗೋಧಿ ಹಳ್ಳದಲ್ಲಿ ಹರಿಯುತ್ತಿದ್ದುದು ಶುಕ್ರವಾರ ಕಂಡುಬಂದಿದೆ.

ಚೀಲಗಳ ಮೇಲೆ ಕುಷ್ಟಗಿ ಎಂಎಸ್‌ಪಿಟಿಸಿ ಎಂದು ಸ್ಪಷ್ಟವಾಗಿ ನಮೂದಿಸಲಾಗಿದ್ದ ಗೋಧಿ ಚೀಲಗಳು ಹಳ್ಳದಲ್ಲಿ ಬಿಸಾಡಿದ್ದನ್ನು ಸಾರ್ವಜನಿಕರು ಪೊಟೊ, ವಿಡಿಯೊ ಸಹಿತ ಮಾಹಿತಿ ನೀಡಿದ್ದರು. ಈ ವಿಷಯ ಕುರಿತು ಮಾಹಿತಿಗಾಗಿ ‘ಪ್ರಜಾವಾಣಿ’ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿ ಅವರನ್ನು ಸಂಪರ್ಕಿಸಿದ ಅರ್ಧ ಗಂಟೆಯಲ್ಲಿ ಚೀಲಗಳು ಹಳ್ಳದಿಂದ ಮಾಯವಾಗಿದ್ದು ಅಚ್ಚರಿ ಮೂಡಿಸಿತು. ಆದರೆ ಗೋಧಿ ಮಾತ್ರ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದುದು ನಂತರ ಆಹಾರ ಇಲಾಖೆಯವರು ಭೇಟಿ ನೀಡಿದಾಗ ಕಂಡುಬಂದಿತು.

ಈ ಕುರಿತು ಮೊದಲು ಪ್ರತಿಕ್ರಿಯಿಸಿದ್ದ ಸಿಡಿಪಿಒ, ಅದು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಕ್ಕೆ (ಎಂಎಸ್‌ಪಿಟಿಸಿ) ಸೇರಿದ ಚೀಲಗಳಾಗಿದ್ದು ಅಂಗನವಾಡಿಗೆ ಸೇರಿದವು ಅಲ್ಲ. ಸ್ಥಳ ಪರಿಶೀಲಿಸಿ ಮಾಹಿತಿ ನೀಡುವುದಾಗಿ ಹೇಳಿದ್ದರು. ಆದರೆ ನಂತರ ಹತ್ತಾರು ಬಾರಿ ಸಂಪರ್ಕಿಸಿದರೂ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ. ಚೀಲಗಳನ್ನು ವ್ಯವಸ್ಥಿತ ರೀತಿಯಲ್ಲಿ ನಾಪತ್ತೆ ಮಾಡಲಾಗಿತ್ತು. ಆದರೆ ಚೀಲಗಳನ್ನು ಖಾಲಿ ಮಾಡಿದ್ದರೆ ಸಾಕಷ್ಟು ಪ್ರಮಾಣದ ಗೋಧಿ ಮಾತ್ರ ಹಳ್ಳದಲ್ಲಿ ಹರಿಯುತ್ತಿದ್ದುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ADVERTISEMENT

ಈ ಕುರಿತು ವಿವರಿಸಿದ ಕೇಂದ್ರದ ಸಿಬ್ಬಂದಿ ಸಂಗಮೇಶ, ‘ಕೆಲ ವರ್ಷಗಳಿಂದಲೂ ಗೋಧಿ ಚೀಲಗಳು ಗೋಣಿ ಚೀಲದಲ್ಲಿ ಸರಬರಾಜು ಆಗುತ್ತಿದ್ದು ಪ್ಲಾಸ್ಟಿಕ್‌ ಚೀಲದಲ್ಲಿ ಬರುವುದಿಲ್ಲ. ಹಳ್ಳದಲ್ಲಿನ ಚೀಲಗಳು ಯಾವವು ಗೊತ್ತಿಲ್ಲ ಎಂದರು. ಬಳಕೆ ಮಾಡದ ಕಾರಣ ಹಾಳಾಗಿದ್ದ ಸ್ಥಿತಿಯಲ್ಲಿದ್ದ ಹತ್ತಾರು ಚೀಲಗಳಷ್ಟು ಗೋಧಿ ಹಳ್ಳದ ನೀರಿನಲ್ಲಿ ಹೋಗುತ್ತಿದ್ದುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಹಾರ ಇಲಾಖೆ ಶಿರಸ್ತೆದಾರ ಚನ್ನಬಸಪ್ಪ, ಆಹಾರ ನಿರೀಕ್ಷಕ ರಮೇಶ ತಾಳಕೇರಿ ಗೋಧಿಯ ಮಾದರಿ ಸಂಗ್ರಹಿಸಿದರು. ಈ ವಿಷಯದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಿದ್ದು ಅದರ ನಿವಾರಣೆಗೆ ಸರ್ಕಾರ ಶಿಶು ಅಭಿವೃದ್ಧಿ ಯೋಜನೆ ಮೂಲಕ ಅಂಗನವಾಡಿಗಳಲ್ಲಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಸಿದ್ಧರೂಪದ ಈ ಪೌಷ್ಟಿಕ ಆಹಾರ ಉತ್ಪನ್ನಗಳನ್ನು ಎಂಎಸ್‌ಪಿಟಿಸಿ ಘಟಕದ ಮೂಲಕ ಅಂಗನವಾಡಿಗಳಿಗೆ ತಲುಪಿಸಲಾಗುತ್ತದೆ. ಹಿಂದೆ ಈ ಗೋಧಿ ಈ ಘಟಕಕ್ಕೆ ಬರುತ್ತಿತ್ತು. ಈಗ ಮೌಲ್ಯವರ್ಧನೆಗೊಂಡ ಗೋಧಿ ಮೂಲದ ಪೂರಕ ಆಹಾರ ಎಂಎಸ್‌ಪಿಟಿಸಿಗೆ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಂಎಸ್‌ಪಿಟಿಸಿ ಕೇಂದ್ರದಲ್ಲಿ ಗೋಧಿಯನ್ನು ಬಳಕೆ ಮಾಡದೆ ನಿರ್ಲಕ್ಷ್ಯದಿಂದ ಹಾಳು ಮಾಡಿ ನಂತರ ಚೀಲಗಳನ್ನು ಹಳ್ಳದಲ್ಲಿ ಎಸೆದಿದ್ದಾರೆ. ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹನುಮೇಶ ಕುರ್ನಾಳ, ಹನುಮಗೌಡ ಇತರರು ಆಗ್ರಹಿಸಿದ್ದಾರೆ.

ಕುಷ್ಟಗಿ ಆಹಾರ ಇಲಾಖೆ ಅಧಿಕಾರಿಗಳು ಗೋಧಿ ಮಾದರಿ ಸಂಗ್ರಹಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.