ADVERTISEMENT

‘ನರೇಗಾ’ದಲ್ಲಿ ಮಹಿಳೆಯರ ಭಾಗಿ ಅಗತ್ಯ

ಕುಷ್ಟಗಿ ತಾಲ್ಲೂಕು ಪಂಚಾಯಿತಿ ಇಒ ಡಾ.ಜಯರಾಮ ಚವ್ಹಾಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 2:36 IST
Last Updated 5 ಆಗಸ್ಟ್ 2021, 2:36 IST
ಮುದೇನೂರು ಗ್ರಾಮದಲ್ಲಿ ‘ಮಹಿಳಾ ಕಾಯಕೋತ್ಸವ’ಕ್ಕೆ ತಾ.ಪಂ ಇಒ ಡಾ.ಜಯರಾಮ ಚವ್ಹಾಣ ಚಾಲನೆ ನೀಡಿದರು
ಮುದೇನೂರು ಗ್ರಾಮದಲ್ಲಿ ‘ಮಹಿಳಾ ಕಾಯಕೋತ್ಸವ’ಕ್ಕೆ ತಾ.ಪಂ ಇಒ ಡಾ.ಜಯರಾಮ ಚವ್ಹಾಣ ಚಾಲನೆ ನೀಡಿದರು   

ಮುದೇನೂರು (ಕುಷ್ಟಗಿ): ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರಿಗೂ ಹೆಚ್ಚಿನ ಮತ್ತು ಸಮಾನ ಅವಕಾಶಗಳಿದ್ದು ಅವರ ಭಾಗವಹಿಸುವಿಕೆ ಅಗತ್ಯವಾಗಿರುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಜಯರಾಮ ಚವ್ಹಾಣ ಹೇಳಿದರು.

ನರೇಗಾ ಯೋಜನೆಗೆ ಸಂಬಂಧಿಸಿ ದಂತೆ ಮಹಿಳೆಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಏರ್ಪಡಿಸಿದ್ದ ‘ಮಹಿಳಾ ಕಾಯಕೋತ್ಸವ’ದಲ್ಲಿ ಮಹಿಳಾ ಕೂಲಿಕಾರರಿಂದ ನಾಲೆ ಮತ್ತು ಕೆರೆಗಳಲ್ಲಿನ ಹೂಳು ತೆಗೆಯುವ ಕಡಿಮೆ ಶ್ರಮದಾಯಕ ಕೆಲಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನ ಮುದೇನೂರು, ಬಿಜಕಲ್‌ ಶಿರಗುಂಪಿ ಮತ್ತು ಕೊರಡಕೇರಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾದಲ್ಲಿ ಕೆಲಸ ಕಾಮಗಾರಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇರುವುದು ಕಂಡುಬಂದ ಕಾರಣಕ್ಕೆ ಆಯಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕಳೆದ ಎರಡು ವಾರಗಳಿಂದ ಪ್ರತಿ ಮನೆ ಮನೆ ಸಮೀಕ್ಷೆ ನಡೆಸಿ ಮಹಿಳೆಯರಿಗೆ ಯೋಜನೆಯ ಬಗ್ಗೆ ಅಗತ್ಯ ಮಾಹಿತಿ ನೀಡಲಾಗಿದೆ.

ADVERTISEMENT

ಮೂರನೇ ವಾರದಲ್ಲಿ ಕೆಲಸ ನೀಡಲಾಗಿದ್ದು ಒಂದು ವಾರದ ನಂತರ ಕೂಲಿಹಣ ಪಾವತಿಸಲಾಗುತ್ತದೆ. ಮಹಿಳೆಯರು ಯೋಜನೆಯ ಪ್ರಯೋಜನ ಪಡೆಯುವ ಮೂಲಕ ಆರ್ಥಿಕ ತೊಂದರೆಯನ್ನು ನಿವಾರಿಸಿಕೊಳ್ಳುವಂತೆ ಹೇಳಿದರು.

ನರೇಗಾ ಯೋಜನೆ ಸಹಾಯಕ ನಿರ್ದೇಶಕ ವಿ.ವೆಂಕಟೇಶ್ ಮಾತನಾಡಿ, ಮಹಿಳಾ ಕಾಯಕೋತ್ಸವದ ಮೂಲಕ ಮಹಿಳಾ ಕೂಲಿಕಾರರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗಿದೆ. ಅವರಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಆ.15ರ ವರೆಗೆ ಈ ಅಭಿಯಾನ ನಡೆಸಲಾಗುತ್ತದೆ. ನಾಲ್ಕೂ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 2780 ಮಹಿಳಾ ಕೂಲಿಕಾರರು ಈಗ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ವಿವರಿಸಿದರು.

ಅಲ್ಲದೆ ನರೇಗಾ ಯೋಜನೆಯಲ್ಲಿ 'ರೈತ ಬಂಧು ಅಭಿಯಾನ' ಆ.15 ರಿಂದ ಅ.15ರವರೆಗೆ ನಡೆಯಲಿದ್ದು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ರೈತರಿಗೆ ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಎರೆಹುಳು ಗೊಬ್ಬರ ತೊಟ್ಟಿಗಳ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ಅದೇ ರೀತಿ ಪ್ರತಿ ಶಾಲೆ ಮತ್ತು ವಿದ್ಯಾರ್ಥಿ ವಸತಿ ನಿಲಯಗಳ ಆವರಣ ದಲ್ಲಿ ಪೌಷ್ಟಿಕ ತೋಟಗಳ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ತರಕಾರಿಗಳನ್ನು ಬೆಳೆಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ವೆಂಕಟೇಶ್‌ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಲಿಂಗಸೂರು, ಉಪಾಧ್ಯಕ್ಷೆ ಮಂಜುಳ ಚಲವಾದಿ, ಸದಸ್ಯರಾದ ಶಶಿಧರ ಉಳ್ಳಾಗಡ್ಡಿ, ಹುಸೇನಪ್ಪ ಹಿರೇಮನಿ, ಗೀತಾ ಕುಷ್ಟಗಿ, ಪರಸಪ್ಪ ಪರಮಣ್ಣನವರ, ಅಭಿವೃದ್ಧಿ ಅಧಿಕಾರಿ ದಸ್ತಗಿರಿಸಾಬ್, ನರೇಗಾ ಯೋಜನೆ ತಾಲ್ಲೂಕು ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ ಮತ್ತು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.