ಕುಷ್ಟಗಿ: ನಿಯಮಗಳ ಪ್ರಕಾರ ಖಾಸಗಿ ಬಡಾವಣೆಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಸಂಬಂಧಿಸಿದ ಮಾಲೀಕರ ಜವಾಬ್ದಾರಿ. ಆದರೆ ಅಭಿವೃದ್ಧಿಗೊಳ್ಳದೆ ಗೊಂಡಾರಣ್ಯದಂತಿರುವ ಸ್ವಾಮಿ ವಿವೇಕಾನಂದ ಹೆಸರಿನ ಬಡಾವಣೆಯಲ್ಲಿ ನಿಯಮಗಳನ್ನು ಬದಿಗೊತ್ತಿ ಕ್ರಿಯಾಯೋಜನೆ ಇಲ್ಲದೆಯೇ ಸರ್ಕಾರದ ಏಜೆನ್ಸಿ ರಸ್ತೆ, ಚರಂಡಿ ನಿರ್ಮಿಸುತ್ತಿರುವ ಆರೋಪ ಕೇಳಿಬಂದಿದೆ.
‘ಕೊಪ್ಪಳ ರಸ್ತೆಯ ವಾರ್ಡ್ ಸಂಖ್ಯೆ 3ರಲ್ಲಿನ ಸರ್ವೆ ಸಂಖ್ಯೆ 105ರಲ್ಲಿ ಗಂಗಾಧರಸ್ವಾಮಿ ಹಿರೇಮಠ ಎಂಬುವವರಿಗೆ ಸೇರಿದ ಬಡಾವಣೆಯಲ್ಲಿ ಈ ಕೆಲಸ ನಡೆಸಿರುವುದು ಕಂಡುಬಂದಿದೆ. ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಬೇನಾಮಿ ಗುತ್ತಿಗೆದಾರರ ಮೂಲಕ ಕೆಲಸ ಕೈಗೆತ್ತಿಕೊಂಡಿದೆ. ಅಚ್ಚರಿಯಂದರೆ ಪುರಸಭೆ ವ್ಯಾಪ್ತಿಯಲ್ಲಿ ಕೆಲಸ ನಡೆಯುತ್ತಿದ್ದರೂ ಅದರ ಗಮನಕ್ಕಿಲ್ಲ. ಯಾವುದೇ ಕ್ರಿಯಾಯೋಜನೆ ಇಲ್ಲದಿದ್ದರೂ ಕೆಕೆಆರ್‌ಡಿಬಿ ಅನುದಾನವನ್ನು ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದ್ದು ಅದಕ್ಕೆ ಅಧಿಕಾರಸ್ಥ ರಾಜಕಾರಣಿಗಳೇ ಮುತುವರ್ಜಿ ವಹಿಸಿದ್ದಾರೆ’ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
‘ಸದರಿ ಬಡಾವಣೆಯಲ್ಲಿ ಅಲ್ಲಲ್ಲಿ ಮನೆಗಳು ನಿರ್ಮಾಣಗೊಂಡಿವೆ, ಆದರೆ ಒಂದು ಕಡೆಯೂ ರಸ್ತೆ, ಚರಂಡಿ, ಬೀದಿದೀಪ ಈ ಯಾವ ಸೌಲಭ್ಯಗಳನ್ನೂ ಮಾಲೀಕರು ಕಲ್ಪಿಸಿಲ್ಲ. ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಆದರೆ ಅಲ್ಲಿ ರಾಜಕೀಯ ಪ್ರಮುಖರ ಮನೆಗಳ ಗೃಹಪ್ರವೇಶ ಇದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಅನಧಿಕೃತವಾಗಿ ಅಭಿವೃದ್ಧಿ ಕೆಲಸ ನಡೆಸಲಾಗುತ್ತಿದೆ. ಸರ್ಕಾರದ ಆಡಳಿತ ಯಂತ್ರವನ್ನು ತಮ್ಮ ಮನಕ್ಕೆ ತೋಚಿದಂತೆ ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯೇ ಸ್ಪಷ್ಟ ಉದಾಹರಣೆ’ ಎಂಬ ಆರೋಪ ಕೇಳಿಬಂದಿದೆ.
ಎಇಇ ಹೇಳಿದ್ದು: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಆರ್‌ಡಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇರ್ಫಾನ್ ಪಠಾಣ್, ‘ಕ್ರಿಯಾಯೋಜನೆ ಇಲ್ಲದಿದ್ದರೂ ಮುಂದೆ ಈ ಕೆಲಸವನ್ನು ನಮ್ಮ ಏಜೆನ್ಸಿಗೆ ವಹಿಸಿ ಕೆಕೆಆರ್‌ಡಿಬಿ ಅನುದಾನ ಬಿಡುಗಡೆ ಮಾಡಿಸುತ್ತೇವೆ. ತುರ್ತಾಗಿ ಕೆಲಸ ಆರಂಭಿಸುವಂತೆ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದ್ದಾರೆ. 2025-26ನೇ ಹಣಕಾಸು ವರ್ಷದಲ್ಲಿ ಕೆಕೆಆರ್‌ಡಿಬಿಯಲ್ಲಿ ಈ ಕೆಲಸ ಸೇರಿಸುತ್ತೇವೆ. ಬೇರೆ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸುತ್ತಿದ್ದು ನಂತರ ಗುತ್ತಿಗೆದಾರರಿಗೆ ಹಣ ಪಾವತಿಸುತ್ತೇವೆ’ ಎಂದರು.
‘ಈ ಸ್ಥಳದಲ್ಲಿ ಅಗತ್ಯವಿದೆ ರಸ್ತೆ ನಿರ್ಮಿಸಿ ಎಂದು ಪುರಸಭೆ ಹೇಳಿಲ್ಲ, ಜಾಗ ತೋರಿಸಿಲ್ಲ. ಆದರೂ ಕೆಲಸ ನಡೆಸಲಾಗುತ್ತಿದೆ ಇದು ಹೇಗೆ ಸಾಧ್ಯ, ಹೀಗೂ ಉಂಟೆ? ಎಂದು ಪ್ರಶ್ನಿಸಿದರೆ ‘ಇಲ್ಲ’ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಗುಣಮಟ್ಟದ ವಿಷಯದಲ್ಲಿ ಜವಾಬ್ದಾರಿ ಯಾರು ಎಂದು ಕೇಳಿದರೆ ಅದಕ್ಕೆ ‘ನಾವೇ’ ಎಂದರು. ಗುತ್ತಿಗೆದಾರರಿಂದ ಮಾಡಿಸಿ ನಂತರ ಕೆಆರ್‌ಡಿಎಲ್ ಮೂಲಕ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವುದಾದರೆ ಏಜೆನ್ಸಿ ಇರುವುದಾರೂ ಏತಕ್ಕೆ ಎಂದಾಗ ಸ್ಪಷ್ಟ ಉತ್ತರ ನೀಡಲಿಲ್ಲ.
ಹಿಂದೆಯೇ ರಸ್ತೆಗೆ ಮೆಟ್ಲಿಂಗ್ ಮಾಡಲಾಗಿತ್ತು. ಬಹಳ ವರ್ಷಗಳ ನಂತರ ಕಿತ್ತು ಹೊಗಿದೆ. ಈಗ ಕೆಆರ್‌ಡಿಎಲ್‌ದವರೇ ರಸ್ತೆ ಚರಂಡಿ ನಿರ್ಮಿಸುತ್ತಿದ್ದಾರೆ.–ಗಂಗಾಧರಸ್ವಾಮಿ ಹಿರೇಮಠ, ಲೇಔಟ್ ಮಾಲೀಕ
ಹೆಸರಿಗೆ ಮಾತ್ರ ಇದು ಬಡಾವಣೆ ಒಂದು ಬುಟ್ಟಿ ಕಲ್ಲು ಸಹ ಹಾಕಿಲ್ಲ. ಆದರೆ ಸರ್ಕಾರದ ಖರ್ಚಿನಲ್ಲಿ ರಾಜಕೀಯ ವ್ಯಕ್ತಿಗಳ ಮನೆವರೆಗೆ ರಸ್ತೆ ನಿರ್ಮಿಸಲು ಅನುದಾನ ಬಿಡುಗಡೆಗೆ ಮುಂದಾಗಿರುವುದು ಸರಿಯಲ್ಲ.–ಹನುಮಗೌಡ ಪಾಟೀಲ, ನಿವಾಸಿ
ಮಾಲೀಕರು ಲೇಔಟ್ ಅಭಿವೃದ್ಡಿಪಡಿಸಹುದಾಗಿತ್ತು. ಆದರೆ ಈಗ ಅಲ್ಲೆಲ್ಲ ಮನೆಗಳಾಗಿವೆ. ಹಾಗಾಗಿ ರಸ್ತೆ ಚರಂಡಿ ನಿರ್ಮಿಸಲು ಸೂಚಿಸಲಾಗಿದೆ. ಮುಂದೆ ಕೆಕೆಆರ್‌ಡಿಬಿಯಲ್ಲಿ ಈ ಕೆಲಸ ಸೇರಿಸಲಾಗುತ್ತದೆ.–ದೊಡ್ಡನಗೌಡ ಪಾಟೀಲ, ಶಾಸಕ
ಯಾವುದೇ ಏಜೆನ್ಸಿ ಕೆಲಸ ಮಾಡುವುದಿದ್ದರೂ ಪುರಸಭೆಗೆ ಮಾಹಿತಿ ನೀಡಬೇಕು. ಆದರೆ ಅಂಥ ಪರಿಪಾಠವೇ ಇಲ್ಲಿಲ್ಲ. ಸಂಬಂಧಿಸಿದ ಏಜೆನ್ಸಿಗಳಿಗೆ ನೋಟಿಸ್ ನೀಡಲಾಗಿದೆ.–ಸುರೇಶ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ
ಶಾಸಕರಿಗೆ ಅಷ್ಟೇಕೆ ಪ್ರೀತಿ?
‘ಪಟ್ಟಣದಲ್ಲಿ ರಸ್ತೆ ಚರಂಡಿ ಮೂಲಸೌಲಭ್ಯಗಳೇ ಇಲ್ಲದ ಬಡಾವಣೆಗಳು ಬೇಕಾದಷ್ಟಿವೆ. ಅಂಥ ಸ್ಥಳಗಳ ಬಗ್ಗೆ ಶಾಸಕ ದೊಡ್ಡನಗೌಡ ಪಾಟೀಲರಿಗೆ ದೂರದೃಷ್ಟಿ ಇಲ್ಲ. ತಾಲ್ಲೂಕು ಕೇಂದ್ರದಲ್ಲಿ ಎಲ್ಲೆಲ್ಲಿ ಯಾವ ಕೆಲಸಗಳ ಅಗತ್ಯವಿದೆ ಎಂಬುದನ್ನು ಗಮನಿಸುತ್ತಿಲ್ಲ. ಆದರೆ ಅಕ್ರಮಗಳ ತವರಾಗಿರುವ ವಿವೇಕಾನಂದ ಬಡಾವಣೆಯಲ್ಲಿ ಅವಸರದಲ್ಲಿ ರಸ್ತೆ ಚರಂಡಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಶಾಸಕರಿಗೆ ಆ ಬಡಾವಣೆಯ ಬಗ್ಗೆ ಅಷ್ಟೊಂದು ಪ್ರೀತಿ ಏಕೆ?’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.