ADVERTISEMENT

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧತೆ ಅಗತ್ಯ: ಯಲಬುರ್ಗಾ ಪಿಡಿಒ ವೀರಭದ್ರಗೌಡ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:06 IST
Last Updated 9 ಜನವರಿ 2026, 7:06 IST
ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆ ಗಣ್ಯರು ಚಾಲನೆ ನೀಡಿದರು
ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆ ಗಣ್ಯರು ಚಾಲನೆ ನೀಡಿದರು   

ಯಲಬುರ್ಗಾ: ಮಕ್ಕಳ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಪಂಚಾಯಿತಿ ಬದ್ಧವಾಗಿದ್ದು, ಯಾವುದೇ ಸಮಸ್ಯೆಯಿದ್ದರೂ ಮುಕ್ತವಾಗಿ ಸಭೆಯಲ್ಲಿ ವ್ಯಕ್ತಪಡಿಸಿ ಬಗೆಹರಿಸಿಕೊಳ್ಳಬೇಕು ಎಂದು ಪಿಡಿಒ ವೀರಭದ್ರಗೌಡ ಮೂಲಿಮನಿ ಹೇಳಿದರು.

ತಾಲ್ಲೂಕಿನ ಮುಧೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳ ಹಕ್ಕುಗಳನ್ನು ಪ್ರತಿಯೊಬ್ಬರೂ ಅನುಷ್ಠಾನಕ್ಕೆ ಮುಂದಾಗಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದ ಯೋಜನೆಗಳು ಮಕ್ಕಳಿಗೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಅಂಗನವಾಡಿ ಮೇಲ್ವಿಚಾರಕಿ ಚೆನ್ನಮ್ಮ ಶ್ಯಾನಭೋಗರ,ಮಕ್ಕಳ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯಿದೆಗಳ ಬಗ್ಗೆ ತಿಳಿದುಕೊಳ್ಳಬೇಕು. ಉಲ್ಲಂಘಿಸಿದರೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಸಹಾಯವಾಣಿ ಸಂಖ್ಯೆ 1092 ಮತ್ತು 112ಸಂಖ್ಯೆಗೆ ಕರೆ ಮಾಡಿ ದೌರ್ಜನ್ಯ ಅಥವಾ ಬೇರೆ ಅಪರಾಧಗಳ ಬಗ್ಗೆ ತಿಳಿಸಬಹುದು ಎಂದರು.

ಬಾಲ್ಯ ವಿವಾಹದ ಮತ್ತು ಬಾಲ ಕಾರ್ಮಿಕ ಬಗ್ಗೆ ಕಿರು ನಾಟಕ ಪ್ರದರ್ಶಿಸಿದ ಮಕ್ಕಳಿಗೆ ಮತ್ತು ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದಡಿ ಕೈಗೊಂಡ ವಿವಿಧ ಸ್ಪರ್ಧಾತ್ಮಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಾಗೇಶ ನಾಯಕ, ವಿ.ಆರ್.ಡಬ್ಲ್ಯೂ ವೀರಭದ್ರಪ್ಪ ನಿಡಗುಂದಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಮತಾಜಬಿ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ವಿವಿಧ ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.