ADVERTISEMENT

ಶಾಲೆಗೆ ಕಳೆ ತಂದ ಯುವಕರು

ಕುಕನೂರು: ಗ್ರಾಮದ ದಾನಿಗಳಿಂದ ಹಣ ಸಂಗ್ರಹ, ಶಾಲೆಗೆ ಸುಣ್ಣ–ಬಣ್ಣ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:10 IST
Last Updated 10 ಜುಲೈ 2021, 4:10 IST
ಕುಕನೂರು ತಾಲ್ಲೂಕಿನ ರ‍್ಯಾವಣಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಯವಕರು ಬಣ್ಣ ಬಳಿದರು
ಕುಕನೂರು ತಾಲ್ಲೂಕಿನ ರ‍್ಯಾವಣಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಯವಕರು ಬಣ್ಣ ಬಳಿದರು   

ಕುಕನೂರು: ಶಾಲೆಗಳ ಪುನರಾರಂಭಕ್ಕೆ ಕೆಲವೇ ದಿನ ಇದ್ದು, ತಾಲ್ಲೂಕಿನ ರ‍್ಯಾವಣಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಯುವಕರು ಒಂದೇ ದಿನದಲ್ಲಿ ಬಣ್ಣ ಬಳಿದಿದ್ದಾರೆ. ಸಿಂಗರಿಸಿದ್ದಾರೆ.

ಗ್ರಾಮದ ಯುವಕರೆಲ್ಲರೂ ಸೇರಿ ಶುಕ್ರವಾರ ಈ ಕೆಲಸ ಮಾಡಿದ್ದಾರೆ. ಮೂವತ್ತಕ್ಕೂ ಹೆಚ್ಚು ಜನ ಇದರಲ್ಲಿ ಭಾಗವಹಿಸಿದ್ದರು. ಬಣ್ಣ ಬಳಿಯಲು ತಗುಲಿದ ಸುಮಾರು ₹15 ಸಾವಿರಕ್ಕೂ ಹೆಚ್ಚು ವೆಚ್ಚವನ್ನು ಗ್ರಾಮದ ದಾನಿಗಳಿಂದ ಸಂಗ್ರಹಿಸಲಾಗಿತ್ತು.

ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯುವಕರು ಮತ್ತು ಉದ್ಯೋಗದಲ್ಲಿರುವ ಗ್ರಾಮದ ಯುವಕರು ಬಿಡುವು ಮಾಡಿಕೊಂಡು ಈ ಕೆಲಸ ಮಾಡಿದ್ದಾರೆ. ಶಾಲೆಗೆ ಬಣ್ಣ ಬಳಿಯುವ ಕುರಿತು ಚರ್ಚೆ ನಡೆಸಿದ್ದರು. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಲು ಮುಂದಾದ ಬಳಿಕ ಕೆಲಸ ಆರಂಭಿಸಿದರು.

ADVERTISEMENT

‘ನಾವು ಇದೇ ಶಾಲೆಯಲ್ಲಿ ಕಲಿತಿದ್ದೆವು. ಕೊರೊನಾದಿಂದ ಶಾಲೆ ಆರಂಭವಾಗಲು ತಡವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಬಹುದು. ಹೀಗಾಗಿ ಅದಕ್ಕೂ ಪೂರ್ವದಲ್ಲಿ ಮಾಸಿ ಹೋಗಿದ್ದ ಶಾಲೆ ಗೋಡೆಗಳಿಗೆ ಬಣ್ಣ ಬಳಿಸಲು ತೀರ್ಮಾನಿಸಿದೆವು’ ಎಂದು ಯುವಕ ಸಂತೋಷ ಬೇವೂರು ತಿಳಿಸಿದರು.

ಈಗಾಗಲೇ ಶಾಲೆ ಪುನರಾರಂಭಕ್ಕೆ ಸರ್ಕಾರ ಮನಸ್ಸು ಮಾಡಿದೆಯಾದರೂ, ಪಾಲಕರಲ್ಲಿ ಕೊರೊನಾ ಭಯ ಮಾತ್ರ ಹೋಗಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಶಾಲೆಯ ವಾತಾವರಣ ಸ್ವಚ್ಚವಾಗಿದ್ದರೆ ಬರುವ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಈ ಯುವಕರ ತಂಡ ಶಾಲೆ ಆವರಣ ಮತ್ತು ಎಲ್ಲ ಕೋಣೆಯನ್ನು ಸ್ವಚ್ಚಗೊಳಿಸಿದೆ.

‘ಆರು ತಿಂಗಳುಗಳ ಬಳಿಕ ಶಾಲೆ ಪುನರಾರಂಭವಾಗುತ್ತಿದ್ದು, ಬರುವ ಮಕ್ಕಳು ಶಾಲೆಯನ್ನು ನೋಡಿ ಮನಸ್ಸು ಮುರಿಯಬಾರದು. ಜತೆಗೆ ಪಾಲಕರಿಗೆ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಕಳುಹಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದೇವೆ’ ಎನ್ನುತ್ತದೆ ಇಲ್ಲಿನ ಯುವಕರ ತಂಡ. ‘ಗ್ರಾಮದ ಯುವಕರು ಹಿರಿಯರ ಸಹಕಾರ ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ಶಾಲೆಗೆ ಬಣ್ಣ ಬಳಿದಿರುವುದು ಶ್ಲಾಘನೀಯ ಕಾರ್ಯ’ ಎಂದು ಮುಖ್ಯ ಶಿಕ್ಷಕ ಅಶೋಕ ಮಾದಿನೂರು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.