ADVERTISEMENT

ಮದ್ದೂರಿನಲ್ಲಿ ವಕೀಲನ ಹತ್ಯೆ: ಕಲಾಪ‍ ಬಹಿಷ್ಕರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 14:42 IST
Last Updated 5 ಜನವರಿ 2021, 14:42 IST
ವಕೀಲ ರವೀಂದ್ರ ಹತ್ಯೆ ಖಂಡಿಸಿ ಚಾಮರಾಜನಗರದಲ್ಲಿ ವಕೀಲರು ಮಂಗಳವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು
ವಕೀಲ ರವೀಂದ್ರ ಹತ್ಯೆ ಖಂಡಿಸಿ ಚಾಮರಾಜನಗರದಲ್ಲಿ ವಕೀಲರು ಮಂಗಳವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು   

ಚಾಮರಾಜನಗರ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ವಕೀಲ ನವಿಲೆ ರವೀಂದ್ರ ಅವರ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಮಂಗಳವಾರ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕಾರಿಸಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಸಭೆ ಸೇರಿದ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹತ್ಯೆ ಖಂಡಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವ ತೀರ್ಮಾನ ಮಾಡಿದರು.

ಸಭೆಯ ಬಳಿಕ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರು, ‘ವಕೀಲ ರವೀಂದ್ರ ಅವರು ಕೊಲೆಯಾಗಿರುವುದು ದುರದೃಷ್ಟಕರ. ಇದೊಂದು ಘೋರ ಕೃತ್ಯ. ನ್ಯಾಯವನ್ನು ಎತ್ತಿ ಹಿಡಿಯುವ ವಕೀಲರನ್ನೇ ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ವಿಚಾರ. ಈ ಹತ್ಯೆಯ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಕೀಲರ ಮೇಲೆ ರಾಜ್ಯದಲ್ಲಿ ದಿನೇ ದಿನೇ ಹಲ್ಲೆ, ಕೊಲೆ ಪ್ರಯತ್ನ ಹೆಚ್ಚಾಗುತ್ತಿದ್ದು, ಹತ್ಯೆಗಳೂ ನಡೆಯುತ್ತಿವೆ. ನ್ಯಾಯಾಲಯದ ಅಧಿಕಾರಿಗಳಾಗಿರುವ ವಕೀಲರ ರಕ್ಷಣೆಗಾಗಿ ಸರ್ಕಾರಗಳು ಇದುವರೆಗೂ ಯಾವುದೇ ಕಾನೂನುಗಳನ್ನು ರೂಪಿಸದಿರುವುದು ದುರದೃಷ್ಟಕರ. ತಕ್ಷಣವೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಆ ಬಳಿಕ ಜಿಲ್ಲಾಧಿಕಾರಿ ಅವರನ್ನು ಭೇಟಿದ ವಕೀಲರು, ‘ವಕೀಲ ಸಂರಕ್ಷಣಾ ಕಾಯ್ದೆ ಜಾರಿಗಾಗಿ ಸುಗ್ರೀವಾಜ್ಞೆಯನ್ನು ತತ್‌ಕ್ಷಣವೇ ಜಾರಿಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಂ.ಶಿವರಾಮು, ಖಜಾಂಚಿ ನಾಗಮ್ಮ, ಜಂಟಿ ಕಾರ್ಯದರ್ಶಿ ಬಿ.ಮಂಜು, ವಕೀಲರಾದ ವಿ.ನಾಗರಾಜೇಂದ್ರ, ಪುಟ್ಟಸಾಮಿ, ಆರ್.ಅರುಣ್‌ಕುಮಾರ್, ಬಿ.ಪ್ರಸನ್ನಕುಮಾರ್, ಸಿ.ಚಿನ್ನಸ್ವಾಮಿ, ಕಾಗಲವಾಡಿ ಮಹೇಶ್ ಕುಮಾರ್, ನಾಗರಾಜು, ಎನ್.ಬಿ.ಮಹೇಶ್, ಜಿ.ಸಂತೋಷ್‌ಕುಮಾರ್, ಎಂ.ಆರ್.ಸವಿತಾ, ಶ್ವೇತಾ ಮತ್ತಿತರರು ಇದ್ದರು.

ಆರೋಪಿಗಳನ್ನು ಬಂಧಿಸಲು ಆಗ್ರಹ

ಚಾಮರಾಜನಗರ: ‘ವಕೀಲ ರವೀಂದ್ರ ಅವರ ಹತ್ಯೆಯ ಆರೋಪಿಗಳನ್ನು ಮಂಡ್ಯದ ಪೊಲೀಸರು ಆದಷ್ಟು ಬೇಗ ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡಬೇಕು’ ಎಂದು ಅಖಿಲ ಭಾರತೀಯ ವಕೀಲರ ಒಕ್ಕೂಟದ ರಾಜ್ಯ ಸಮಿತಿ ಸದಸ್ಯ, ವಕೀಲ ಪುಟ್ಟಸ್ವಾಮಿ ಅವರು ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ರಾಜ್ಯದಲ್ಲಿ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದ್ದು, ಸರ್ಕಾರ ಕೂಡಲೇ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು. ದೇಶದಲ್ಲಿನಿರಂತರವಾಗಿ ವಕೀಲರ ಹತ್ಯೆ ಪ್ರಕರಣಗಳು ನಡೆಯುತ್ತಿರುವುದು ಖಂಡನೀಯ. ವೈದ್ಯರಿಗೆ ರಕ್ಷಣೆ ನೀಡುವ ಸರ್ಕಾರ, ವಕೀಲರಿಗೆ ನೀಡದಿರುವುದು ವಿಪರ್ಯಾಸ’ ಎಂದರು.

‘ಹತ್ಯೆ ನಡೆದು ಮೂರು ದಿನಗಳಾದರೂ ಆರೋಪಿಗಳನ್ನು ಬಂಧಿಸದಿರುವುದು ವಿಪರ್ಯಾಸ. ಆದ್ದರಿಂದ ಮಂಡ್ಯ ಪೊಲೀಸರು ಶೀಘ್ರವಾಗಿ ಹಂತಕರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಬೇಕು. ಅಲ್ಲದೇ, ರವೀಂದ್ರ ಅವರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು’ ಎಂದರು.

ವಕೀಲರಾದ ಏಸಾನ್ ಜಾವೇದ್, ಸುರೇಶ್, ಕುಮಾರ, ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.