ADVERTISEMENT

ಅಂಧ ಮಂಜುನಾಥನ ಬಾಳಿಗೆ ಬೆಳಕಾದ ವೀಣಾ!

ಬಲ್ಲೇನಹಳ್ಳಿ ಮಂಜುನಾಥ
Published 27 ಅಕ್ಟೋಬರ್ 2017, 8:31 IST
Last Updated 27 ಅಕ್ಟೋಬರ್ 2017, 8:31 IST
ಕೆ.ಆರ್‌.ಪೇಟೆಯ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯದಲ್ಲಿ ಗುರುವಾರ ವಿವಾಹವಾದ ವೀಣಾ–ಮಂಜುನಾಥ್‌
ಕೆ.ಆರ್‌.ಪೇಟೆಯ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯದಲ್ಲಿ ಗುರುವಾರ ವಿವಾಹವಾದ ವೀಣಾ–ಮಂಜುನಾಥ್‌   

ಕೆ.ಆರ್.ಪೇಟೆ: ಎರಡೂ ಕಣ್ಣುಗಳು ಸಂಪೂರ್ಣವಾಗಿ ಕಾಣದ ಅಂಧ ಮಂಜುನಾಥ್‌ ಬಾಳಿಗೆ ವೀಣಾ ಬೆಳಕಾದರು. ಪಟ್ಟಣದ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯದಲ್ಲಿ ಗುರುವಾರ ಮಂಜುನಾಥ್‌ ಅವರ ಕೈ ಹಿಡಿದ ವೀಣಾ ಮಾದರಿ ಯುವತಿ ಎನಿಸಿಕೊಂಡರು. ತಾಲ್ಲೂಕಿನ ವಳಗೆರೆಮೆಣಸ ಗ್ರಾಮದ ಮಾಯಮ್ಮ ಮತ್ತು ಈರಯ್ಯ ದಂಪತಿಯ ಪುತ್ರ ಮಂಜುನಾಥ್ ಬಾಲ್ಯದಿಂದಲೇ ಕಾಣುವ ಭಾಗ್ಯ ಕಳೆದುಕೊಂಡವರು. ಆದರೆ ಬುದ್ಧಿಯಲ್ಲಿ ಚುರುಕಾಗಿದ್ದ ಅವರು ಅತಿ ವೇಗವಾಗಿ ತೆಂಗಿನ ಕಾಯಿ ಸಲಿಯುವುದರಲ್ಲಿ ಬಹಳ ಪ್ರಸಿದ್ದಿ ಪಡೆದಿದ್ದರು. ಕಣ್ಣು ಕಾಣದಿದ್ದರೂ ಮೊನಚಾದ ಆಯುಧ ಬಳಸಿ ಕಾಯಿ ಸಲಿಯುತ್ತಿದ್ದ ಅವರು ಈ ಭಾಗದಲ್ಲಿ ಆಶ್ಚರ್ಯ ಸೃಷ್ಟಿಸಿದ್ದರು.

ಬೇರೆಯವರ ಆಶ್ರಯದಲ್ಲಿ ಬದುಕದೇ ಸ್ವಾವಲಂಬಿಯಾಗಿ ಬದುಕುವ ಛಲ ರೂಡಿಸಿಕೊಂಡಿದ್ದ ಮಂಜುನಾಥರ ಮನಸ್ಸಿನ ಕಣ್ಣುಗಳು ವೀಣಾಗೆ ಇಷ್ಟವಾಗಿದ್ದವು. ಅಪ್ಪ– ಅಮ್ಮನನ್ನು ಕಳೆದುಕೊಂಡು ಪಾಂಡವಪುರ ತಾಲ್ಲೂಕಿನ ಹರವು ಗ್ರಾಮದ ಸಾಕು ತಾಯಿ ಪಾರ್ವತಿ ಆಶ್ರಯದಲ್ಲಿ ಬೆಳೆದ ವೀಣಾ, ಮಂಜುನಾಥರನ್ನು ಮೆಚ್ಚಿಕೊಂಡಿದ್ದರು. ಮದುವೆ ಮಾಡಿಕೊಳ್ಳುವ ಮನದಿಚ್ಛೆ ವ್ಯಕ್ತಪಡಿಸಿದರು. ತಾಯಿ ಸುಜಾತಾ ಮತ್ತು ಬಸವರಾಜು ಅವರನ್ನು ಕಳೆದುಕೊಂಡು ನೋವುಂಡಿದ್ದ ವೀಣಾ, ಮಂಜುನಾಥ ಅವರನ್ನು ಹತ್ತಿರದಿಂದ ಕಂಡಿದ್ದರು. ಹೀಗಾಗಿ ಮಂಜುನಾಥರ ಕೈ ಹಿಡಿಯುವ ನಿರ್ಧಾರಕ್ಕೆ ಬಂದಿದ್ದರು.

ಮಂಜುನಾಥ್ ಅವರ ಹತ್ತಿರದ ಸಂಬಂಧಿಯೂ ಆಗಿರುವ ವೀಣಾ ಅವರ ಸಾಕು ತಾಯಿ ಪಾರ್ವತಿ ಇವರಿಬ್ಬರ ವಿವಾಹಕ್ಕೆ ಹಸಿರು ನಿಶಾನೆ ತೋರಿದರು. ಹೀಗಾಗಿ ಗುರುವಾರ ಈ ಮಾದರಿ ಮದುವೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯ ಎಲ್ಲರಿಗೂ ಒದಗಿ ಬಂದಿತ್ತು. ಲಕ್ಷ್ಮಿನಾರಾಯಣಸ್ವಾಮಿ ದೇವಾಲಯದಲ್ಲಿ ನಡೆದ ಸರಳ ವಿವಾಹದಲ್ಲಿ ಮಂಜುನಾಥ ಹಾಗೂ ವೀಣಾ ಹಸೆಮಣೆ ಏರಿದರು. ವೀಣಾಗೆ 20 ವರ್ಷ ವಯಸ್ಸು ಮಂಜುನಾಥ್‌ಗೆ 35.

ADVERTISEMENT

ವಧು–ವರರನ್ನು ನೆಂಟರಿಷ್ಟರು, ಸಂಬಂಧಿಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಮನಸಾರೆ ಅಭಿನಂದಿಸಿದರು. ‘ಅವರು ಅಂಧ ಎನ್ನುವ ಭಾವನೆ ಬಾರದಂತೆ ಅವರ ಬಾಳಿಗೆ ಬೆಳಕಾಗಿ ನಿಲ್ಲುತ್ತೇನೆ. ನಾನು ಎರಡೂ ಕಣ್ಣಿರುವವರನ್ನು ವಿವಾಹವಾಗಲು ಹಲವು ಅವಕಾಶಗಳಿದ್ದವು. ಆದರೆ ಮಂಜುನಾಥ ಅವರನ್ನು ವಿವಾಹವಾಗಲು ಯಾರೂ ಸಿದ್ಧರಿರಲಿಲ್ಲ. ನಾನೂ ಸಾಕಷ್ಟು ನೋವುಂಡವಳು. ಹೀಗಾಗಿ ಅವರ ಬಾಳಿಗೆ ಬೆಳಕಾಗಲು ನಿರ್ಧರಿಸಿದೆ’ ಎಂದು ವೀಣಾ ತಿಳಿಸಿದರು.

‘ವಿವಾಹವಾಗಬೇಕೆಂಬ ಬಯಕೆಯೇನೋ ಇತ್ತು. ಆದರೆ ಅಂಧನಿಗೆ ಯಾರು ಹೆಣ್ಣು ಕೊಡುತ್ತಾರೆ? ವಿವಾಹದ ಆಸೆಯನ್ನೇ ಕೈಬಿಟ್ಟು ನನ್ನಪಾಡಿಗೆ ನಾನಿದ್ದೆ. ಇಂತಹ ಸಂದರ್ಭದಲ್ಲಿ ಅಂಧನೆಂದು ಗೊತ್ತಿದ್ದೂ ನನ್ನ ಕೈಹಿಡಿದು ಬೆಳಕಾಗಿ ಬಂದಿರುವ ವೀಣಾಳನ್ನು ನನ್ನ ಶಕ್ತಿ ಮೀರಿ ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದ ವರ ಮಂಜುನಾಥ್ ತಿಳಿಸಿದರು. ‘ವೀಣಾಳ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. ಇವರಿಬ್ಬರು ಸುಂದರ ಬದಕು ಕಟ್ಟಿಕೊಳ್ಳುತ್ತಾರೆ ’ ಎಂದು ವೀಣಾ ಸಾಕುತಾಯಿ ಪಾರ್ವತಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.