ADVERTISEMENT

ಅಂಬೇಡ್ಕರ್ ಆದರ್ಶ ಎಲ್ಲ ಕಾಲಕ್ಕೂ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 8:45 IST
Last Updated 26 ಏಪ್ರಿಲ್ 2012, 8:45 IST

ಕೃಷ್ಣರಾಜಪೇಟೆ: ಹಿಂದುಳಿದವರ, ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾ ಮಾನವತಾವಾದಿ ಡಾ.ಅಂಬೇಡ್ಕರ್ ಅವರ ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಮೈಸೂರು ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಮಹೇಶ್‌ಚಂದ್ರಗುರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಡಾ.ಅಂಬೇಡ್ಕರ್ ಸಂಘಗಳ ಒಕ್ಕೂಟದ ವತಿಯಿಂದ ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ `ಅಂಬೇಡ್ಕರ್ ಹಬ್ಬ~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಗವದ್ಗೀತೆಗಿಂತಲೂ ಶ್ರೇಷ್ಠವಾದ ಸಂವಿಧಾನವನ್ನು ದೇಶಕ್ಕೆ ರಚಿಸಿಕೊಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ತೋರಿಸಿದ ಮಾರ್ಗದಲ್ಲಿ ಇಂದಿನ ಯುವಜನರು ಮುನ್ನಡೆದರೆ ದೇಶದ ಸಮಗ್ರ ಪ್ರಗತಿ ಸಾಧ್ಯವಾಗುತ್ತದೆ ಎಂದರು.

 ಶಾಸಕ ಕೆ.ಬಿ.ಚಂದ್ರಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ನೀರಾವರಿ ಇಲಾಖೆ ಎಂಜಿನಿಯರ್ ಎಸ್.ಕೆ.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಡಾ.ನಿರ್ಮಲ್‌ರಾಜ್, ಪಟ್ಟಣದ ಪದವಿ ಕಾಲೇಜಿನ ಪ್ರಾಧ್ಯಾಪಕ ಉಮಾಶಂಕರ್, ಮುಖಂಡರಾದ ಡಿ.ಪ್ರೇಂಕುಮಾರ್, ಸಿಂಧಘಟ್ಟ ಸೋಮಸುಂದರ್, ರಾಜಯ್ಯ, ಚಲುವಯ್ಯ, ಹರಿಹರಪುರ ಶಿವಕುಮಾರ್, ಮುದುಗೆರೆ ಮಹೇಂದ್ರ, ಜೆ.ಬಿ.ನಾಗರಾಜು, ಬಸ್ತಿರಂಗಪ್ಪ, ಎ.ಬಿ.ರಾಜು, ಬಸವೇಶ್ ಇತರರು ಇದ್ದರು.

ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರದಿಂದ ಕಾರ್ಯಕ್ರಮದ ಸ್ಥಳದವರೆಗೆ ಅಂಬೇಡ್ಕರ್ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತರಲಾಯಿತು. ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗರಘಟ್ಟ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.