ADVERTISEMENT

ಅಕ್ರಮ ಮರಳು ಸಾಗಾಣಿಕೆಯಿಂದ ಸೇತುವೆ ಶಿಥಿಲ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 6:21 IST
Last Updated 23 ಸೆಪ್ಟೆಂಬರ್ 2013, 6:21 IST

ಶ್ರೀರಂಗಪಟ್ಟಣ:  ಶ್ರೀರಂಗಪಟ್ಟಣ– ರಾಂಪುರ ಸಂಪರ್ಕ ಸೇತುವೆಯ ಮೂಲಕ ರಾತ್ರಿ ವೇಳೆ ಲಾರಿಗಳಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದು, ಸೇತುವೆ ಶಿಥಿಲವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ರಾಂಪುರ ಗ್ರಾಮಸ್ಥರು ಭಾನುವಾರ ಪಟ್ಟಣ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ತಾಲ್ಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಕಳೆದ 15 ದಿನಗಳಿಂದ ಶ್ರೀರಂಗಪಟ್ಟಣ– ರಾಂಪುರ ಸಂಪರ್ಕ ರಸ್ತೆಯಲ್ಲಿ ಮರಳು ತುಂಬಿದ ಲಾರಿಗಳು ಸಂಚರಿಸುತ್ತಿವೆ. ರಾತ್ರಿ 12ರಿಂದ ಮುಂಜಾನೆ 3 ಗಂಟೆ ಅವಧಿಯಲ್ಲಿ ಮರಳು ಸಾಗಾಟ ನಡೆಯುತ್ತಿದೆ.

ಅತಿ ಭಾರದ ವಾಹನಗಳು ಸಂಚರಿಸುತ್ತಿರುವುದರಿಂದ ಸೇತುವೆ, ರಸ್ತೆ ಹಾಗೂ ತಡೆಗೋಡೆ ಶಿಥಿಲವಾಗಿದೆ, ಗ್ರಾಮಸ್ಥರೇ ನಿರ್ಮಿಸಿಕೊಂಡಿದ್ದ ರಸ್ತೆ ತೀರಾ ಹಾಳಾಗಿದ್ದು, ಜನ ಹಾಗೂ ಬೈಕ್‌ ಸಂಚಾರಕ್ಕೆ ತೊಂದರೆಯಾಗಿದೆ. ರಾತ್ರಿ ವೇಳೆ ಮರಳು ಲಾರಿಗಳು ಸಂಚರಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆರ್‌.ಎನ್‌.ಗುರುಪ್ರಸಾದ್‌, ಮಾಜಿ ಸದಸ್ಯ  ಶ್ರೀಕಂಠ ದೂರಿದರು.

ಕೆ.ಆರ್‌. ಪೇಟೆಯಿಂದ ಮೈಸೂರಿಗೆ ಈ ಮಾರ್ಗದಲ್ಲಿ ರಾತ್ರಿ ವೇಳೆ ಮರಳು ಸಾಗಾಟ ನಡೆಯುತ್ತಿದೆ. ರಾಂಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾವೇರಿ ನದಿ ಸೇತುವೆ ಮೇಲೆ ಮರಳು ತುಂಬಿ ಸಂಚರಿಸುವ 9 ಲಾರಿಗಳನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಇನ್ನು ಮುಂದೆ ಈ ಮಾರ್ಗದಲ್ಲಿ ಮರಳು, ಕಲ್ಲು ಇತರ ಭಾರದ ವಸ್ತುಗಳನ್ನು ಸಾಹಿಸುವ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರ ಅಹವಾಲು ಆಲಿಸಿದ ಇನ್‌ಸ್ಪೆಕ್ಟರ್‌ ಕೆ.ಆರ್‌.ಪ್ರಸಾದ್‌, ರಾಂಪುರ ರಸ್ತೆಯ ಸೇತುವೆ ಮೇಲೆ ಭಾರದ ವಾಹನಗಳು ಸಂಚರಿಸದಂತೆ ತಡೆಯಲು ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಹನುಮಂತೇಗೌಡ, ಆದಿಶೇಷ, ನಾಗೇಶ್‌, ಸುರೇಂದ್ರ, ರಾಮು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.