ADVERTISEMENT

ಅತಿವೃಷ್ಟಿ– ಅನಾವೃಷ್ಟಿ: ಸಂಕಷ್ಟದಲ್ಲಿ ವೀಳ್ಯದೆಲೆ ಬೆಳೆಗಾರ

ಎನ್.ಪುಟ್ಟಸ್ವಾಮಾರಾಧ್ಯ
Published 23 ಅಕ್ಟೋಬರ್ 2017, 8:55 IST
Last Updated 23 ಅಕ್ಟೋಬರ್ 2017, 8:55 IST
ಮಳವಳ್ಳಿ ತಾಲ್ಲೂಕಿನ ಮಾಗನೂರು ಸಮೀಪ ಅತಿವೃಷ್ಟಿಯಿಂದಾಗಿ ವೀಳ್ಯದೆಲೆ ಹಳದಿ ಬಣ್ಣಕ್ಕೆ ತಿರುಗಿ ಹಾನಿಯಾಗಿರುವುದು
ಮಳವಳ್ಳಿ ತಾಲ್ಲೂಕಿನ ಮಾಗನೂರು ಸಮೀಪ ಅತಿವೃಷ್ಟಿಯಿಂದಾಗಿ ವೀಳ್ಯದೆಲೆ ಹಳದಿ ಬಣ್ಣಕ್ಕೆ ತಿರುಗಿ ಹಾನಿಯಾಗಿರುವುದು   

ಮಳವಳ್ಳಿ: ಕಳೆದ ಒಂದು ತಿಂಗಳಿಂದ ನಿರಂತರ ಮಳೆ ಸುರಿದ ಪರಿಣಾಮ ವೀಳ್ಯದೆಲೆ ಹಳದಿ ಬಣ್ಣ ತಿರುಗಿ ಉದುರುತ್ತಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ತಾಲ್ಲೂಕಿನ ಮಾಗನೂರು, ತಮ್ಮಡಹಳ್ಳಿ, ಬಾಳೆಹೊನ್ನಿಗ, ದಾಸನದೊಡ್ಡಿ, ಹುಸ್ಕೂರು, ಕುಲುಮೆದೊಡ್ಡಿ, ದಳವಾಯಿ ಕೋಡಿಹಳ್ಳಿ, ಬೆಳಕವಾಡಿ, ತಳಗವಾದಿ, ಚೋಳನಹಳ್ಳಿ, ಜವನಗಹಳ್ಳಿ, ರಾವಣಿ ಗ್ರಾಮಗಳ ನೂರಾರು ಕುಟುಂಬಗಳು ಹಲವು ತಲೆಮಾರಿನಿಂದ ವೀಳ್ಯೆದೆಲೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ.

ಇಂದಿನ ತಲೆಮಾರು ಕೂಡ ವೀಳ್ಯದೆಲೆಯಲ್ಲೇ ಜೀವನ ಕಟ್ಟಿಕೊಂಡಿದ್ದಾರೆ. ಕಳೆದ ವರ್ಷ ಮಳೆ ಇಲ್ಲದೆ ಸಂಕಷ್ಟ ಅನುಭವಿಸಿದ್ದರು. ವೀಳ್ಯದೆಲೆ ತೋಟಗಳು ಒಣಗಿ ಹೋಗಿದ್ದವು. ಆದರೆ ಈ ಬಾರಿ ಅತಿ ಹೆಚ್ಚು ಮಳೆ ಸುರಿದಿದ್ದು ಅತಿವೃಷ್ಟಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ.

ವೀಳ್ಯದೆಲೆ ಬೆಳೆಗಾರರಿಗೆ ಹೆಚ್ಚೇನೂ ಜಮೀನಿಲ್ಲ. ಇದ್ದ ಕಡಿಮೆ ಭೂಮಿ ಹಾಗೂ ಜಮೀನುಗಳನ್ನು ಗುತ್ತಿಗೆ ಪಡೆದು ವೀಳ್ಯದೆಲೆ ಬೆಳೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು 90– 100 ಎಕರೆ ವಿಸ್ತೀರ್ಣದಲ್ಲಿ ಎಲೆ ಬೆಳೆಯುತ್ತಿದ್ದಾರೆ. ನಾಟಿ ಮಾಡಿ ಎರಡು ವರ್ಷದವರಗೆ ಎಚ್ಚರಿಕೆಯಿಂದ ನೋಡಿಕೊಳ್ಳಲೇಬೇಕು.

ADVERTISEMENT

ಬಹಳ ಸೂಕ್ಷ್ಮವಾಗಿ ಕೃಷಿ ಮಾಡಬೇಕು. 20 ಗುಂಟೆಗೆ ₹ 2 ಲಕ್ಷಕ್ಕೂ ಹೆಚ್ಚು ಹಣ ಖರ್ಚುಮಾಡಿ ಬೆಳೆಯುತ್ತಾರೆ. ಎರಡು ವರ್ಷದ ನಂತರ ಕಟಾವು ಪ್ರಾರಂಭವಾಗುತ್ತದೆ.

ಆದರೆ ಇತ್ತೀಚೆಗೆ ನಿರಂತರ ಮಳೆ ಬಿದ್ದ ಪರಿಣಾಮ ವೀಳ್ಯದೆಲೆ ಹಂಬುಗಳು ಸತ್ತು ಹೋಗುತ್ತಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಇದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರು ಆತಂಕಕ್ಕೀಡಾಗಿದ್ದಾರೆ. ಕಳೆದ ವರ್ಷ ಮಳೆ ಬಾರದಿದ್ದಾಗ ಬೆಳೆ ಉಳಿಸಿಕೊಳ್ಳಲು ಕಸರತ್ತು ಮಾಡಿದ್ದ ರೈತರು ಟ್ಯಾಂಕರ್ ಮೂಲಕವೂ ನೀರು ಪೂರೈಸಿದ್ದು ಸಾವಿರಾರು ಹಣ ವ್ಯಯಿಸಿದ್ದಾರೆ. ಆದರೆ ಈ ಬಾರಿ ನೀರಿನ ಕೊರತೆ ಇಲ್ಲ. ಹೆಚ್ಚು ಮಳೆಯಿಂದಾಗಿ ಅವರ ಜಂಘಾಬಲವನ್ನೇ ಅಡಗಿಸಿದೆ.

‘ಸಾಲ ಮಾಡಿ ಬೆಳೆ ಉಳಿಸಿಕೊಂಡಿದ್ದೇವೆ. ಧಾರಾಕಾ ಮಳೆ ಸುರಿದ ಪರಿಣಾಮ ಹಂಬುಗಳಲ್ಲಿ ನೀರು ನಿಂತು ಗಿಡ ಸತ್ತು ಹೋಗುತ್ತಿದೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ನಾವು ಸಾಲ ತೀರಿಸಲು ಹೆಣಗಾಡುತ್ತಿದ್ದೇವೆ. ಈ ಬಗ್ಗೆ ಸರ್ಕಾರ ಗಮನ ಹರಿ ಬೆಳೆ ಪರಿಹಾರ ನೀಡಬೇಕು’ ಎಂದು ವೀಳ್ಯದೆಲೆ ಬೆಳೆಗಾರರಾದ ನಾರಯಣಸ್ವಾಮಿ ಮತ್ತು ರವಿ ಮನವಿ ಮಾಡಿದರು.

‘ತಾಲ್ಲೂಕಿನ ವ್ಯಾಪ್ತಿಯಲ್ಲಿ ವೀಳ್ಯದೆಲೆ ಬೆಳೆಗಾರರು ಮಳೆಯಿಲ್ಲದೆ ಹಾನಿ ಅನುಭವಿಸುತ್ತಿದ್ದರು. ಆದರೆ ಈ ಬಾರಿ ಹೆಚ್ಚು ಮಳೆಯಾಗಿ ನಷ್ಟ ಅನುಭವಿಸುತ್ತಿದ್ದಾರೆ. ತಾಲ್ಲೂಕು ಆಡಳಿತದಿಂದ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಪ್ರಾಂತ ರೈತ ಸಂಘದ ಮುಖಂಡ ಎನ್‌.ಎಲ್‌.ಭರತ್‌ರಾಜ್ ಒತ್ತಾಯಿಸಿದರು.

‘ತಾಲ್ಲೂಕಿನ ಗಂಗಾಮತಸ್ಥ ಜನರು ಕೆರೆಯಲ್ಲಿ ಮೀನುಗಾರಿಕೆ ಹಾಗೂ ಗುತ್ತಿಗೆ ಜಮೀನುಗಳಲ್ಲಿ ವೀಳ್ಯದೆಲೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಮಳೆ ಕೊರತೆಯಾದ ಕಾರಣ ಕೆರೆಗಳು ತುಂಬದೆ ಮೀನುಗಾರಿಕೆಯೂ ನಿಂತು ಹೋಯಿತು. ಈಗ ಅತಿವೃಷ್ಟಿಯಿಂದಾಗಿ ವೀಳ್ಯದೆಲೆ ಹಾನಿಯಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರೈತರ ಹಿತ ಕಾಯಬೇಕು’ ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಒತ್ತಾಯಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.